ಹಾವೇರಿ: ನ್ಯಾಯಾಲಯದ ಆದೇಶ ಉಲ್ಲಂಘಿಸಿ ಕಿರಾಣಿ ಸ್ಟೋರ್, ಸ್ಟೇಶನರಿ, ಹೊಲ್‌ಸೇಲ್ ಅಂಗಡಿ ಸೇರಿದಂತೆ ನಗರದ ವಿವಿಧ ಅಂಗಡಿ ಮುಂಗಟ್ಟುಗಳಲ್ಲಿ ಮಾರಾಟ ಮಾಡುತ್ತಿದ್ದ ಪ್ಲಾಸ್ಟಿಕ್ ಬ್ಯಾಗ್, ಪ್ಲಾಸ್ಟಿಕ್ ಸಾಮಗ್ರಿಗಳನ್ನು ನಗರಸಭೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿ, ವಶಕ್ಕೆ ಪಡೆದು ದಂಡ ವಿಧಿಸಿದರು.
ಹಾವೇರಿ ನಗರದಲ್ಲಿ ಸಣ್ಣ ಪುಟ್ಟ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರಿಗಳು ಜೀವನ ನಡೆಸುತ್ತಿದ್ದಾರೆ. ₹ 5-6 ಸಾವಿರ ದಂಡ ಹಾಕಿದರೆ, ವ್ಯಾಪಾರಸ್ಥರು ಜೀವನ ಮಾಡುವುದು ಹೇಗೆ ಎಂದು ಅಧಿಕಾರಿಗಳ ಜತೆಗೆ ಕೆಲಕಾಲ ವಾಗ್ವಾದ ನಡೆಸಿದರು. ಪ್ಲಾಸ್ಟಿಕ್ ಬ್ಯಾನ್ ಮಾಡುವುದಾದರೆ ಮೂಲ ಪ್ಲಾಸ್ಟಿಕ್ ಉತ್ಪಾದಿಸುವ ಕಂಪನಿಗಳನ್ನು ಮೊದಲು ಮುಚ್ಚಿಸಿ, ಸರ್ಕಾರಕ್ಕೆ ನೀವೇ ಪತ್ರ ಬರೆಯಿರಿ ಎಂದು ವ್ಯಾಪಾರಿಗಳು ನಗರಸಭೆ ಸಿಬ್ಬಂದಿಯನ್ನೇ ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಸಿಬ್ಬಂದಿ, ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ಲಾಸ್ಟಿಕ್ ಬಳಸದಂತೆ ಸಾರ್ವಜನಿಕ ಪ್ರಕಟಣೆಯನ್ನು ನೀಡುತ್ತವೆ. ಅವುಗಳನ್ನು ನೋಡಿಯೂ ಪರ್ಯಾಯ ಮಾರ್ಗ ಕಂಡುಕೊಳ್ಳದೆ, ಪುನಃ ಪ್ಲಾಸ್ಟಿಕ್ ಮಾರಾಟ ಮಾಡುವುದು ಕಾನೂನು ಉಲ್ಲಂಘನೆಯಾಗಿದೆ ಎಂದು ಮನವರಿಕೆ ಮಾಡಲು ಯತ್ನಿಸಿದರು.ಪೌರಾಯುಕ್ತ ಎಚ್. ಕಾಂತರಾಜು ಮಾತನಾಡಿ, ಸುಪ್ರೀಂ ಕೋರ್ಟ್ ಪ್ಲಾಸ್ಟಿಕ್ ನಿಷೇಧಿಸಿದ್ದರೂ ವ್ಯಾಪಾರಸ್ಥರು, ಅಂಗಡಿ ಮಾಲೀಕರು ಹೋಲ್‌ಸೆಲ್ ದರದಲ್ಲಿ ಪ್ಲಾಸ್ಟಿಕ್ ಚೀಲ ಹಾಗೂ ಇತರ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಸಣ್ಣಪುಟ್ಟ ವ್ಯಾಪಾರಿಗಳು, ಬೀದಿಬದಿ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಪರಿಸರ ಮಲಿನವಾಗುವ ಜತೆಗೆ ಪ್ಲಾಸ್ಟಿಕ್ ಸಂಸ್ಕರಣೆ ಮಾಡುವುದೇ ಸಮಸ್ಯೆಯಾಗಿದೆ. ಈ ಹಿನ್ನೆಲೆ ಗುರುವಾರದಿಂದ ದಾಳಿ ನಡೆಸಲಾಗುತ್ತಿದ್ದು, ನಾಲ್ಕು ಅಂಗಡಿಯಿಂದ ₹1.50 ಲಕ್ಷ ಮೌಲ್ಯದ ಸಾಮಗ್ರಿ ವಶಪಡಿಸಿಕೊಂಡಿದೆ. ₹14 ಸಾವಿರ ದಂಡ ವಸೂಲಿ ಮಾಡಲಾಗಿದೆ. ಹಾವೇರಿಯಲ್ಲಿ ಎಲ್ಲ ತರಹದ ಸುಮಾರು 2,500 ಅಂಗಡಿಗಳಿವೆ. ನಿರಂತರವಾಗಿ ದಾಳಿ ನಡೆಸಲಾಗುತ್ತದೆ ಎಂದು ಹೇಳಿದರು.
ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಮಾಡದಂತೆ ಸುಪ್ರೀಂ ಕೋರ್ಟ್ ನಿರ್ದೇಶನವೇ ಇದೆ. ನಗರದ ಅಂಗಡಿಗಳ ಮಾಲೀಕರು ಹಾಗೂ ವ್ಯಾಪಾರಸ್ಥರು ಪ್ಲಾಸ್ಟಿಕ್ ಚೀಲ ಬದಲಾಗಿ, ಪರ್ಯಾಯವಾಗಿ ಬಳಸುವ ವಸ್ತುಗಳು ಇದ್ದು, ಅವುಗಳನ್ನು ಮಾರಾಟ ಮಾಡಬೇಕು. ನಗರಸಭೆ ಜತೆಗೆ ವ್ಯಾಪಾರಿಗಳು ಸಹಕರಿಸಬೇಕು ಎಂದು ಪೌರಾಯುಕ್ತ ಎಚ್. ಕಾಂತರಾಜು ಹೇಳಿದರು.