ಚೇಳೂರು ಕೆಪಿಎಸ್‌ಸಿ ಸರ್ಕಾರಿ ಶಾಲೆ ಗೋಡೆ ಮೇಲೆ ಮೂಡಿದ ವರ್ಲಿ ಕಲೆ

KannadaprabhaNewsNetwork |  
Published : Nov 23, 2024, 12:35 AM IST
ಚೇಳೂರು ಕೆ ಪಿ ಎಸ್ ಸಿ ಸರ್ಕಾರಿ ಶಾಲೆಯ ಗೋಡೆಯ ಮೇಲೆ ವರ್ಲಿ ಕಲೆಯ ಚಿತ್ತಾರದಿಂದ ಶೃಂಗಾರಗೊಂಡು ಎಲ್ಲರ ಗಮನ ಸೆಳೆಯುತ್ತಿದೆ. | Kannada Prabha

ಸಾರಾಂಶ

ಚೇಳೂರು ಶಾಲೆಯ ರಂಗಮಂದಿರ ಹಾಗೂ ಕೊಠಡಿಗಳ ಗೋಡೆಗಳು ವರ್ಲಿ ಚಿತ್ರಕಲೆಯಿಂದ ಕಂಗೊಳಿಸಿ ಎಲ್ಲರ ಮನಸ್ಸಿನಲ್ಲಿ ನವ ಚೈತನ್ಯ ಮೂಡಿಸುತ್ತಿದೆ.

ಡಿವಿ ರಮೇಶ್ ಕುಮಾರ್

ಕನ್ನಡಪ್ರಭ ವಾರ್ತೆ ಚೇಳೂರು

ತಾಲೂಕಿನ ಕೆಪಿಎಸ್‌ಸಿ ಸರ್ಕಾರಿ ಶಾಲೆಯ ಗೋಡೆಗಳ ಮೇಲೆ ವರ್ಲಿ ಕಲೆಯ ಚಿತ್ರಗಳಿಂದ ಶೃಂಗಾರ ಗೊಂಡು ಮತ್ತಷ್ಟು ಮಿಂಚುತ್ತಿದ್ದು ಎಲ್ಲರ ಗಮನಸೆಳೆಯುತ್ತಿದೆ.

ಪ್ರಾಚೀನ ಬುಡಕಟ್ಟುಗಳ ಚಿತ್ರಕಲಾ ಪದ್ಧತಿ ಉಳಿಸುವ ನಿಟ್ಟಿನಲ್ಲಿ ಅನೇಕರು ಪ್ರಯತ್ನ ಮಾಡುತ್ತಿರುವ ಶ್ಲಾಘನೀಯ ಕಾರ್ಯದಲ್ಲಿ ಮುಖ್ಯ ಶಿಕ್ಷಕ ಜಿಲಾನ್ ಬಾಷಾ ಅವರು ವಿಶೇಷ ಆಸಕ್ತಿ ವಹಿಸಿದ್ದು, ಶಾಲೆಗೆ ವಿಭಿನ್ನ ರೂಪ ಕಲ್ಪಿಸಿ ಮಕ್ಕಳ ಹಾಗೂ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ.

ಶಾಲೆಯ ರಂಗಮಂದಿರ ಹಾಗೂ ಕೊಠಡಿಗಳ ಗೋಡೆಗಳು ವರ್ಲಿ ಚಿತ್ರಕಲೆಯಿಂದ ಕಂಗೊಳಿಸಿ ಎಲ್ಲರ ಮನಸ್ಸಿನಲ್ಲಿ ನವ ಚೈತನ್ಯ ಮೂಡಿಸುತ್ತದೆ. ಅಲ್ಲದೆ ಈ ಶಾಲೆಯ ಪ್ರವೇಶ ದ್ವಾರದಲ್ಲಿ ಬಂದು ನಿಂತರೆ ಯಾವುದೋ ಹೊಸ ಲೋಕಕ್ಕೆ ಕರೆದುಕೊಂಡು ಹೋದಂತೆ ಭಾಸವಾಗುತ್ತದೆ.

ಪ್ರಾಚೀನ ಬುಡಕಟ್ಟು ಚಿತ್ರಕಲಾ:

ವರ್ಲಿ ಎಂಬ ಪ್ರಾಚೀನ ಬುಡಕಟ್ಟು ಜನಾಂಗದವರಿಂದ ಬೆಳಕಿಗೆ ಬಂದ ಕಲೆಯಾಗಿರುವುದರಿಂದ ಇದಕ್ಕೆ ವರ್ಲಿ ಚಿತ್ರಕಲೆ ಎಂದು ಹೇಳಲಾಗುತ್ತಿದೆ. ಕೇವಲ ಸುಣ್ಣ ಮತ್ತು ಸಾಮಾನ್ಯ ಕಡ್ಡಿ ಬಳಕೆಯಿಂದ ಇದನ್ನು ಚಿತ್ರಿಸಲಾಗುತ್ತದೆ. ಮೊದಲು ಗೋಡೆಗೆ ಕೆಂಪು ಮಣ್ಣು (ಕೆಮ್ಮಣ್ಣು) ಬಳಿದ ನಂತರ ಚಿತ್ರಗಳನ್ನು ಬಿಡಿಸುತ್ತಿದ್ದರು.

ಅದನ್ನೇ ಈಗ ಕೆಲ ಕಲಾವಿದರು ವರ್ಲಿ ಕಲೆಯ ಚಿತ್ರಗಳನ್ನು ಬಿಸಿಡುವ ಮೂಲಕ ಅಂದಿನ ಜನಪದ ಇತಿಹಾಸ ಮೆಲುಕು ಹಾಕುವುದರ ಜತೆಗೆ ಉಳಿಸಿ, ಬೆಳೆಸಿಕೊಂಡು ಹೋಗುತ್ತಿದ್ದಾರೆ.ಅಂದಿನ ಚಿತ್ರಗಳು ಸರಳವಾಗಿದ್ದರೂ ಅಮೋಘ ಸಂದೇಶವನ್ನು ನೀಡುತ್ತವೆ.

ಬಾಕ್ಸ್.......

ಹಳ್ಳಿ ಸೊಗಡು ಅನಾವರಣ

ಮರೆಯಾಗುತ್ತಿರುವ ಹಳ್ಳಿಗಾಡಿನ ಸಂಸ್ಕೃತಿಯ ನೆನಪುಗಳನ್ನು ಗೋಡೆಯ ಮೇಲೆ ಚಿತ್ರಿಸಲಾಗಿದೆ. ಮಡಿಕೆ ತಯಾರಿಕೆ ಮಾಡುತ್ತಿರುವುದು, ಮಡಿಕೆಯಲ್ಲಿ ಮಹಿಳೆ ಅಡುಗೆ ಮಾಡುತ್ತಿರುವುದು, ನೀರು ತರುತ್ತಿರುವುದು, ಪ್ರಸ್ತುತ ಯುಗದ ಕಂಪ್ಯೂಟರ್ ಮುಂದೆ ಕುಳಿತಿರುವುದು, ಅಥ್ಲೆಟಿಕ್ ಆಟ, ಈಜುತ್ತಿರುವುದು, ಪುಸ್ತಕ ಓದುತ್ತಿರುವುದು, ವಿದ್ಯಾರ್ಥಿ ಶಾಲೆಗೆ ಹೋಗುತ್ತಿರುವುದು ಹಾಗೂ ಸೈಕಲ್ ತುಳಿಯುತ್ತಿರುವುದು ಹೀಗೆ ನಾನಾ ಚಿತ್ರಗಳು ವಾಸ್ತವ ಲೋಕವನ್ನು ಸೃಷ್ಟಿಸುತ್ತವೆ.

ಕೋಟ್....

ಶಾಲೆ ಕಟ್ಟಡಕ್ಕೆ ಹೊಸ ರೂಪ ಕೊಟ್ಟು, ಎಲ್ಲರ ಗಮನ ಸೆಳೆಯುವ ಜೊತೆಗೆ ವಿದ್ಯಾರ್ಥಿಗಳಿಗೆ ಹೊಸ ಶಕ್ತಿ ನೀಡುವ ಉದ್ದೇಶ ಹಾಗೂ ವರ್ಲಿ ಕಲೆಯ ಚಿತ್ರಗಳನ್ನು ಬಿಡಿಸುವ ಮೂಲಕ ಅಂದಿನ ಜನಪದ ಇತಿಹಾಸ ಮೆಲುಕು ಹಾಕುವ ಜತೆಗೆ ಉಳಿಸಿ, ಬೆಳೆಸಿಕೊಂಡು ಹೋಗಲಾಗುತ್ತಿದೆ.

- ಜೀಲಾನ್ ಬಾಷಾ, ಮುಖ್ಯ ಶಿಕ್ಷಕರು, ಕೆಪಿಎಸ್‌ಸಿ ಶಾಲೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ