ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಜಿಲ್ಲಾದ್ಯಂತ ವರುಣನ ಅಬ್ಬರ ಮಂಗಳವಾರವೂ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬೆಣ್ಣಿಹಳ್ಳ- ತುಪರಿಹಳ್ಳಗಳಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಇನ್ನು ಹುಬ್ಬಳ್ಳಿಯಲ್ಲಿ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನತೆ ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂತು. ಕೃಷಿ ಚಟುವಟಿಕೆಗಳೆಲ್ಲ ಸ್ಥಗಿತವಾಗಿದ್ದು, ಬೆಳೆಹಾನಿ ಪ್ರಮಾಣ ಹೆಚ್ಚಾಗುತ್ತಿದೆ.
ರಸ್ತೆಗಳಲ್ಲಿ ಮಳೆ ನೀರು ಹೊಳೆಯಂತೆ ಹರಿಯುತ್ತಿತ್ತು. ಮೊದಲೇ ತೆಗ್ಗು ಗುಂಡಿಗಳಿಂದ ಕೂಡಿರುವ ಹುಬ್ಬಳ್ಳಿ ನಗರದ ರಸ್ತೆಗಳಲ್ಲಿ ಮಳೆ ನೀರು ತುಂಬಿದ್ದರಿಂದ ವಾಹನ ಚಲಾಯಿಸಲು ಸವಾರರು ಹರಸಾಹಸ ಪಡುತ್ತಿದ್ದರು. ಚರಂಡಿಗಳೆಲ್ಲ ತುಂಬಿ ರಸ್ತೆ ಮೇಲೆ ಕೆಸರೆಲ್ಲ ಹರಿಯುತ್ತಿದ್ದರಿಂದ ಪಾಲಿಕೆಗೆ ಹಿಡಿಶಾಪ ಹಾಕುತ್ತಾ ನಾಗರಿಕರು ಮುಂದೆ ಸಾಗುತ್ತಿದ್ದರು.
ಮನೆಗಳಿಗೆ ನುಗ್ಗಿದ ನೀರು: ನಗರದಲ್ಲಿನ ಆನಂದನಗರ, ನೇಕಾರನಗರ, ಮಂಟೂರು ರಸ್ತೆ, ಗಣೇಶನಗರ ಸೇರಿದಂತೆ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿದ್ದು ಕಂಡು ಬಂತು. ಮನೆಗೆ ನುಗ್ಗುತ್ತಿದ್ದ ನೀರನ್ನು ಹೊರಹಾಕಲು ಜನತೆ ಹರಸಾಹಸ ಪಡುತ್ತಿತ್ತು. ಕೆಲವೊಂದು ವಾಣಿಜ್ಯ ಸಂಕೀರ್ಣಗಳಲ್ಲೂ ನೀರು ನುಗ್ಗಿದೆ. ಜಿಲ್ಲೆಯಲ್ಲಿ 24 ಗಂಟೆಯಲ್ಲಿ 47ಮನೆಗಳು ಕುಸಿದಿವೆ. ಯಾವುದೇ ಪ್ರಾಣಹಾನಿಯಾಗಿಲ್ಲ. ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಮಣ್ಣಿನ ಮನೆಗಳಲ್ಲಿ ವಾಸವಾಗಿರುವವರು ಜಾಗ್ರತರಾಗಿರಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.ಹಳ್ಳಗಳು ಭರ್ತಿ: ಇನ್ನು ನವಲಗುಂದ ಹಾಗೂ ಕುಂದಗೋಳ ತಾಲೂಕುಗಳಲ್ಲಿ ನಿರಂತರವಾಗಿ ಜಿಟಿ ಜಿಟಿ ಮಳೆ ಹನಿಯುತ್ತಿದ್ದರಿಂದ ತುಪರಿಹಳ್ಳ- ಬೆಣ್ಣಿಹಳ್ಳಗಳಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಹಳ್ಳದ ಅಕ್ಕಪಕ್ಕದ ಗ್ರಾಮಗಳಲ್ಲಿ ಮತ್ತೆ ನೆರೆ ಭೀತಿ ಎದುರಾಗುತ್ತಿದೆ.
ಸರ್ಕಾರ ಕೂಡಲೇ ಸಮೀಕ್ಷೆ ನಡೆಸಿ ಬೆಳೆಹಾನಿ ಲೆಕ್ಕ ಹಾಕಬೇಕು. ತಕ್ಷಣವೇ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.