1721 ವಿದ್ಯುತ್ ಕಂಬಗಳು, 80 ಕಿ.ಮೀ. ರಾಜ್ಯ ಹೆದ್ದಾರಿ ರಸ್ತೆಗೆ ಹಾನಿ, ಸಾರ್ವಜನಿಕ ಆಸ್ತಿ ನಷ್ಟ
ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಹಾಗೂ ಅವಧಿಗೂ ಮುನ್ನ ಆರಂಭವಾದ ಮುಂಗಾರು ಮಳೆಯಲ್ಲಿ ಸಾರ್ವಜನಿಕ ಆಸ್ತಿಗೆ ಅಪಾರ ನಷ್ಟವಾಗಿದೆ.
ನಿರಂತರವಾಗಿ ಸುರಿದ ಮಳೆಗೆ ಮಲೆನಾಡಿನ ಜತೆಗೆ ಬಯಲುಸೀಮೆ ತಾಲೂಕುಗಳಲ್ಲೂ ಹಾನಿ ಸಂಭವಿಸಿದೆ.ಬಲವಾಗಿ ಬೀಸಿದ ಗಾಳಿಗೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಈವರೆಗೆ ಜಿಲ್ಲೆಯಲ್ಲಿ 1721 ವಿದ್ಯುತ್ ಕಂಬಗಳಿಗೆ ಹಾನಿ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ 61 ಕಂಬಗಳು ಮುರಿದು ಬಿದ್ದಿವೆ. ಚಿಕ್ಕಮಗಳೂರು ತಾಲೂಕಿನಲ್ಲಿ 642 ವಿದ್ಯುತ್ ಕಂಬಗಳು, ಮೂಡಿಗೆರೆಯಲ್ಲಿ 228, ಕಳಸ ತಾಲೂಕಿನಲ್ಲಿ 192, ಶೃಂಗೇರಿ 101, ಕೊಪ್ಪ 153, ಎನ್.ಆರ್.ಪುರ 182, ಕಡೂರು 160, ತರೀಕೆರೆ 27 ಹಾಗೂ ಅಜ್ಜಂಪುರ ತಾಲೂಕಿನಲ್ಲಿ 36 ವಿದ್ಯುತ್ ಕಂಬಗಳಿಗೆ ಹಾನಿ ಸಂಭವಿಸಿದೆ. 34.86 ಕಿ.ಮೀ. ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿವೆ.
ಮಳೆಯಿಂದಾಗಿ ರಸ್ತೆಗಳಿಗೂ ಹಾನಿ ಸಂಭವಿಸಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 80.09 ಕಿ.ಮೀ., ಮೂಡಿಗೆರೆ ತಾಲೂಕಿನಲ್ಲಿ 0.5 ಕಿ.ಮೀ. ಹಾಗೂ ಕಳಸ ತಾಲೂಕಿನಲ್ಲಿ ಒಂದು ಕಿ.ಮೀ. ರಾಜ್ಯ ಹೆದ್ದಾರಿ ರಸ್ತೆಗೆ ಹಾನಿಯಾಗಿದೆ. 6.98 ರಾಜ್ಯ ಹೆದ್ದಾರಿ, 8 ಸೇತುವೆಗಳಿಗೆ ಹಾನಿಯಾಗಿದೆ.ಪಂಚಾಯತ್ ರಾಜ್ಯ ಇಲಾಖೆಗೆ ಒಳಪಡುವ ಗ್ರಾಮೀಣ ಭಾಗದ 27.40 ಕಿ.ಮೀ., 2 ಸೇತುವೆ, 8 ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ.
7 ಪ್ರಾಥಮಿಕ ಆರೋಗ್ಯ ಕಟ್ಟಡಗಳು, 26 ಅಂಗನವಾಡಿ ಕಟ್ಟಡಗಳಿಗೆ ಮಳೆಯಿಂದ ಹಾನಿ ಸಂಭವಿಸಿದೆ.ಮಳೆ ಕಡಿಮೆಯಾದರೂ ನಿಲ್ಲದ ಅವಘಡ
ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ನಾಲ್ಕಾರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಸ್ವಲ್ಪ ಮಟ್ಟಿಗೆ ಕಡಿಮೆಯೇನೋ ಆಗಿದೆ. ಆದರೆ ಮಳೆಯಿಂದ ಅವಘಡಗಳು ಸಂಭವಿಸುವುದು ಮಾತ್ರ ಕಡಿಮೆಯಾಗಿಲ್ಲ. ಮನೆ ಮೇಲೆ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣವಾಗಿ ಜಖಂಗೊಂಡು ಮಹಿಳೆಯೊಬ್ಬರು ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮೈಲಿಮನೆ ಗ್ರಾಮದಲ್ಲಿ ನಡೆದಿದೆ.ಮನೆ ಮೇಲೆ ಮರ ಬಿದ್ದ ಪರಿಣಾಮ ಮೈಲಿಮನೆ ಗ್ರಾಮದ ನಂದಿನಿ ಎಂಬುವರ ಸೊಂಟ ಹಾಗೂ ಬೆನ್ನಿನ ಭಾಗಕ್ಕೆ ತೀವ್ರ ಗಾಯವಾಗಿದೆ. ಮಂಗಳವಾರ ನಂದಿನಿ ಅವರ ಅಜ್ಜ ವಯೋಸಹಜವಾಗಿ ಮೃತಪಟ್ಟಿದ್ದರು. ಅಜ್ಜನ ಅಂತ್ಯಸಂಸ್ಕಾರ ಮುಗಿಸಿ ನಂದಿನಿ ಮನೆಗೆ ಬಂದ ಕೆಲವೇ ಕ್ಷಣಗಳಲ್ಲಿ ಮನೆ ಮೇಲೆ ಮರ ಮುರಿದು ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿರುವ ನಂದಿನಿ ಅವರನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೆಲ ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಮುಳ್ಳಯ್ಯನಗಿರಿ ಮಾರ್ಗದಲ್ಲಿ ಮಣ್ಣು ಮಿಶ್ರಿತ ಬಂಡೆ ಬಾಯ್ಬಿಟ್ಟು ನೀರು ತೊಟ್ಟಿಕ್ಕಲಾರಂಬಿಸಿದೆ. ಬರೋಬ್ಬರಿ 30 ಅಡಿಯಷ್ಟು ಎತ್ತರದಿಂದ ಬಾಯಿಬಿಟ್ಟಿದ್ದು ಯಾವುದೇ ಕ್ಷಣದಲ್ಲಾದರೂ ಕುಸಿದು ಬೀಳುವ ಸಾಧ್ಯತೆ ಇದೆ. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಕೂಡಲೇ ಇಲ್ಲಿ ದರೆಯನ್ನು ತೆರವುಗೊಳಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.ಮುಳ್ಳಯ್ಯನಗಿರಿ ಮಾತ್ರವಲ್ಲದೆ ದತ್ತಪೀಠ ಭಾಗದಲ್ಲಿಯೂ ಧಾರಾಕಾರ ಮಳೆಯಿಂದಾಗಿ ರಸ್ತೆಯ ಡಾಂಬರು ಕೊಚ್ಚಿ ಹೋಗಿ ರಸ್ತೆ ಸಂಪೂರ್ಣ ಕೆಸರುಮಯವಾದಂತಾಗಿದೆ. ಒಂದು ಕಡೆ ರಸ್ತೆ ಕೊಚ್ಚಿ ಹೋಗಿದ್ದರೆ ಇನ್ನೊಂದು ಕಡೆ ರಸ್ತೆಗೆ ತಡೆಗೋಡೆ ಇಲ್ಲವಾಗಿದೆ. ಇದರ ಮಧ್ಯೆ ದಟ್ಟವಾದ ಮಂಜು ಕವಿದಿರುವುದರಿಂದ ಪ್ರವಾಸಿಗರು ಆತಂಕದಲ್ಲಿಯೇ ಪ್ರಯಾಣಿಸುವಂತಾಗಿದೆ.