ಮುಂದುವರೆದ ವರುಣಾರ್ಭಟ: ರಸ್ತೆ ಜಲಾವೃತ, ಮನೆಗೆ ನುಗ್ಗಿದ ನೀರು

KannadaprabhaNewsNetwork | Published : May 20, 2024 1:32 AM

ಸಾರಾಂಶ

ತಾಲೂಕಿನ ಹಲವೆಡೆ ಭಾನುವಾರ ಸಂಜೆ 5 ಗಂಟೆಗೆ ಪ್ರಾರಂಭವಾದ ಮಳೆ ರಾತ್ರಿ 8 ಗಂಟೆಯತನಕ ಧಾರಾಕಾರವಾಗಿ ಸುರಿದಿದೆ. ಇದರ ಪರಿಣಾಮ ಪಟ್ಟಣದ ಹೊರಪೇಟೆಯ ವಿರಕ್ತ ಮಠ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿತ್ತು. ರಸ್ತೆಯ ಮೇಲೆ ಸುಮಾರು ಮೂರ್‍ನಾಲ್ಕು ಅಡಿ ನೀರು ಹರಿದಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಹಲವೆಡೆ ಭಾನುವಾರ ಸಂಜೆ 5 ಗಂಟೆಗೆ ಪ್ರಾರಂಭವಾದ ಮಳೆ ರಾತ್ರಿ 8 ಗಂಟೆಯತನಕ ಧಾರಾಕಾರವಾಗಿ ಸುರಿದಿದೆ. ಇದರ ಪರಿಣಾಮ ಪಟ್ಟಣದ ಹೊರಪೇಟೆಯ ವಿರಕ್ತ ಮಠ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿತ್ತು. ರಸ್ತೆಯ ಮೇಲೆ ಸುಮಾರು ಮೂರ್‍ನಾಲ್ಕು ಅಡಿ ನೀರು ಹರಿದಿದೆ.

ತಾಲೂಕಿನ ಅಮ್ಮಸಂದ್ರದ ಮೂರನೇ ವಾರ್ಡಿನ ಮಹದೇವಯ್ಯ ಮನೆಗೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ವಸ್ತುಗಳು ಹಾಳಾಗಿವೆ. ಸ್ಥಳಕ್ಕೆ ಧಾವಿಸಿದ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದಗಂಗಯ್ಯ ಚರಂಡಿಯಲ್ಲಿ ನೀರು ಸುಗಮವಾಗಿ ಹರಿಯದ ಕಾರಣ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ನಾಳೆಯೇ ಚರಂಡಿಯ ದುರಸ್ತಿ ಮಾಡಿಸುವ ಭರವಸೆ ನೀಡಿದರು.

ಪಟ್ಟಣದ ಮಾಯಸಂದ್ರ ರಸ್ತೆಯೂ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಒಳಚರಂಡಿಯ ಬಾಕ್ಸ್ ಗಳಲ್ಲಿ ನೀರು ಬುಗ್ಗೆಯಂತೆ ಉಕ್ಕಿ ಬರುತ್ತಿದೆ. ಕೆಲವು ಬಡಾವಣೆಗಳಿಂದ ಒಳಚರಂಡಿಗೆ ಶೌಚಾಲಯದ ನೀರನ್ನು ಬಿಡಲಾಗುತ್ತಿದೆ. ಒಳಚರಂಡಿ ಕಾಮಗಾರಿ ಸಂಪೂರ್ಣ ಆಗದೇ ಅಲ್ಲಲ್ಲಿ ಕಟ್ಟಿಕೊಂಡಿರುವ ಪರಿಣಾಮ ಬಾಕ್ಸ್ ಗಳಲ್ಲಿ ನೀರು ತುಂಬಿಕೊಂಡು ರಸ್ತೆ ಮೇಲೆಯೇ ಕಷ್ಮಲಗಳ ಸಹಿತ ಹರಿದು ಬರುತ್ತಿದೆ. ವಿದ್ಯುತ್ ವ್ಯತ್ಯಯ: ಸಂಜೆ ಮಳೆ ಆರಂಭಗೊಂಡ ತಕ್ಷಣವೇ ವಿದ್ಯುತ್ ಸಂಪರ್ಕ ಕೈಗೊಂಡಿದೆ. ಮಳೆ ನಿಂತ ನಂತರವೇ ಪಟ್ಟಣಕ್ಕೆ ವಿದ್ಯುತ್ ಸಂಪರ್ಕ ದೊರೆಯಿತು. ಒಟ್ಟಾರೆ ತೆಂಗು, ಅಡಿಕೆ ಬೆಳೆಗಳಿಗೆ ಜೀವಕಳೆ ಬಂದಂತಾಗಿದೆ. ಪಟ್ಟಣದ ಕೃಷ್ಣ ಚಿತ್ರ ಮಂದಿರದ ಹಿಂಭಾಗದ ತೋಟದ ಸಾಲಿನಲ್ಲಿ ನೀರು ನಿಂತಿದೆ. ಪರಿಣಾಮ ಹಲವಾರು ಮನೆಗಳ ನೆಲದಿಂದಲೇ ನೀರು ಉಕ್ಕುತ್ತಿದೆ. ಇಲ್ಲಿ ರಾಜಕಾಲುವೆಗೆ ಅವಕಾಶವಿದ್ದರೂ ಸಹ ಹಲವಾರು ಮಂದಿ ರಾಜಕಾಲುವೆಯ ಮಾರ್ಗವನ್ನು ಮುಚ್ಚಿಕೊಂಡಿರುವುದರಿಂದ ಜನರಿಗೆ ಸಂಚರಿಸಲು ಸಮಸ್ಯೆಯಾಗಿದೆ.

ಪಟ್ಟಣಕ್ಕೆ ಬಹುತೇಕ ಕಡೆಯಿಂದ ನೀರು ಬರುವ ಕಾರಣ ರಸ್ತೆಗಳು ಜಲಾವೃತವಾಗಿವೆ. ಜೀವಭಯದಲ್ಲಿ ಸಂಚರಿಸುವಂತಾಗಿದೆ. ಈ ರಸ್ತೆಯಲ್ಲಿ ಸುಮಾರು ಒಂದು ಕಿಮೀ ನಷ್ಟು ಉದ್ದ ನೀರು ಸಂಗ್ರಹ. ಇಲ್ಲಿರುವ ಹಲವಾರು ಮನೆಗಳಿಗೆ ನೀರು ನುಗ್ಗಿದೆ.

-ನಟೇಶ್, ಪ್ರತ್ಯಕ್ಷದರ್ಶಿ

Share this article