ದಾಬಸ್‍ಪೇಟೆ: ಪಟ್ಟಣದಲ್ಲಿರುವ ಪುರಾತನ ವಾಸವಿ ದೇವಾಲಯದಲ್ಲಿ, ಕನ್ನಿಕಾ ಪರಮೇಶ್ವರಿ ಅಮ್ಮನವರ ದೇವಾಲಯದ ಪುನರ್ ಪ್ರತಿಷ್ಠಾಪನೆ, ಅಷ್ಟಬಂಧ, ಬ್ರಹ್ಮಕುಂಭಾಭಿಷೇಕ, ಶಿಖರ ಕುಂಭಾಭಿಷೇಕ ಮಹೋ ತ್ಸವ ಏ.1ರಿಂದ 3ರವರೆಗೆ ನೆರವೇರಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ 8 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಆರ್ಯವೈಶ್ಯ ಸಂಘದ ಅಧ್ಯಕ್ಷ ಎಚ್.ಎನ್.ವೆಂಕಟೇಶ್ ತಿಳಿಸಿದರು.
ಏ.2ರಂದು ಮಧ್ಯಾಹ್ನ 3 ಗಂಟೆಗೆ ಊರಿನ ಹೆಣ್ಣು ಮಕ್ಕಳಿಗೆ ಸೋಬಲಕ್ಕಿ ಕಾರ್ಯಕ್ರಮ, ಸಂಜೆ ಬಿ.ಆರ್.ಟಿ ಭವನದಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರನ್ನು ಶೋಭಾಯಾತ್ರೆ ಮೂಲಕ ಸ್ವಾಗತಿಸಿ ಧೂಳಿ ಪಾದಪೂಜೆ ಫಲ ಸಮರ್ಪಣೆ ನಡೆಯಲಿದೆ. ಏ.3ರಂದು ಶಾಂತಿ ಪ್ರಾಯಶ್ಚಿತ್ತ ಹೋಮ, ಮೂಲಮಂತ್ರ ಹೋಮ, ಪೂರ್ಣಾಹುತಿ ನಡೆಯಲಿದೆ. ನಂತರ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರಿಂದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಿ ಬ್ರಹ್ಮಕುಂಭಾಭಿಷೇಕ ಮಹಾಪೂಜೆ, ಶಿಖರ ಕುಂಭಾಭಿಷೇಕ ಪೂಜೆ, ಶಂಕುಷ್ಠಾವಣೆ, ಗುರುಗಳಿಂದ ಅನುಗ್ರಹ ಭಾಷಣ ನಡೆಯಲಿದೆ. ವಾಸವಿ ಸಂಘದಿಂದ ಪ್ರತಿದಿನ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಹೇಳಿದರು.
ಪ್ರಧಾನ ಅರ್ಚಕ ನಟರಾಜು ಮಾತನಾಡಿ, ಸೋಂಪುರ ಹೋಬಳಿಗೆ ಮೊದಲ ಬಾರಿಗೆ ಶೃಂಗೇರಿ ಶ್ರೀಗಳು ಆಗಮಿಸುತ್ತಿದ್ದು, ಶ್ರೀಗಳ ಪುರ ಪ್ರವೇಶ ಹೊಸ ಸಂಚಲನ ಉಂಟು ಮಾಡಿದೆ. ಎಲ್ಲಾ ಭಕ್ತರು ಶ್ರೀಗಳು ಮತ್ತು ದೇವಿಯ ಆಶೀರ್ವಾದ ಪಡೆಯಬೇಕು. ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ತಿರುಮಲ ಕಲ್ಯಾಣ ಮಂಟಪ, ಬಿ.ಆರ್.ಟಿ.ಭವನ ಮತ್ತು ಶಿವಶ್ರೀ ಬಸವಶ್ರೀ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಎಂದರು.ಪತ್ರಿಕಾಗೋಷ್ಠಿಯಲ್ಲಿ ಆರ್ಯವೈಶ್ಯ ಸಂಘದ ಉಪಾಧ್ಯಕ್ಷ ನರಸಿಂಹರಾಜು ಗುಪ್ತ, ಕಾರ್ಯದರ್ಶಿ ಅಶೋಕ್ ಬಾಬು, ಖಜಾಂಚಿ ಎಲ್.ಎಸ್.ಶೇಖರ್, ಸದಸ್ಯರಾದ ಮುರುಳೀಧರ್, ನರೇಂದ್ರಪ್ರಸಾದ್, ಮಹಿಳಾ ಮಂಡಳಿಯ ಜಯಂತಿ, ಪ್ರತಿಮ ಶೋಭ, ಪ್ರಮೀಳ, ಪುಣ್ಯ, ಮಂಜುಳ ಇತರರು ಉಪಸ್ಥಿತರಿದ್ದರು.
ಫೋಟೋ 6 :
ಫೋಟೋ 7: ಕನ್ನೀಕಾ ಪರಮೇಶ್ವರಿ ದೇವಿಯ ಮೂಲ ವಿಗ್ರಹ