ವೇದ, ಸಂಸ್ಕೃತವನ್ನು ಬೋಧಿಸುತ್ತಿರುವ ಗುರುಕುಲ, ಶ್ರಮಪೂರಕವಾಗಿ ಗೋರಕ್ಷಣೆ ಮಾಡುತ್ತಿರುವ ಗೋಶಾಲೆಗಳ ಪೋಷಣೆ, ಆರ್ಥಿಕ ಸಹಾಯ, ಇತರ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು ಎಂದು ಸಂತ ಸಂಗಮ ಆಗ್ರಹಿಸಿದೆ.
ಉಡುಪಿ: ವೇದ, ಸಂಸ್ಕೃತವನ್ನು ಬೋಧಿಸುತ್ತಿರುವ ಗುರುಕುಲ, ಶ್ರಮಪೂರಕವಾಗಿ ಗೋರಕ್ಷಣೆ ಮಾಡುತ್ತಿರುವ ಗೋಶಾಲೆಗಳ ಪೋಷಣೆ, ಆರ್ಥಿಕ ಸಹಾಯ, ಇತರ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು ಎಂದು ಸಂತ ಸಂಗಮ ಆಗ್ರಹಿಸಿದೆ.ನವದೆಹಲಿಯಲ್ಲಿ ಪೇಜಾವರ ಶ್ರೀಗಳ ಚಾತರ್ಮಾಸ್ಯದ ಅಂಗವಾಗಿ ಬುಧವಾರ ಸಂಜೆ ವಸಂತ್ ಕುಂಜ್ ನಲ್ಲಿ ನಡೆದ ಸಂತ ಸಂಗಮದಲ್ಲಿ ಪಾಲ್ಗೊಂಡ ಸಾಧು ಸಂತರು ಈ ಎರಡು ಬೇಡಿಕೆಗಳನ್ನು ಒಕ್ಕೊರಲಿನಿಂದ ಒತ್ತಾಯಿಸಿದರು.ವಿಶ್ವ ಹಿಂದು ಪರಿಷತ್ ಸಹಯೋಗದಲ್ಲಿ ನಡೆಸ ಸಮಾವೇಶದಲ್ಲಿ ದೆಹಲಿ ಪ್ರಾಂತದಿಂದ ನೂರಕ್ಕೂ ಅಧಿಕ ಸಂತರು ಭಾಗವಹಿಸಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ವರ್ತಮಾನದ ಸನಾತನ ಧರ್ಮ ಹಾಗೂ ರಾಷ್ಟ್ರೀಯ ವಿಚಾರಗಳ ಮೇಲೆ ಸಂತರು ಮಂಥನ ನಡೆಸಿದರು. ಕೊನೆಯಲ್ಲಿ ಹತ್ತು ನಿರ್ಣಯಗಳನ್ನು ಅಂಗೀಕರಿಸಿ ದೆಹಲಿ ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಯಿತು.
ಸನ್ಮಾನ: ವಿಹಿಂಪ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಅವರು ದೇಶವಿದೇಶಗಳಲ್ಲಿ ಸನಾತನ ಧರ್ಮರಕ್ಷಣೆಗೆ ಸಲ್ಲಿಸಿದ ಸುದೀರ್ಘ ಸೇವೆಯನ್ನು ಮನ್ನಿಸಿ ಪೇಜಾವರ ಮಠ ಸಂಸ್ಥಾನದ ವತಿಯಿಂದ ಧರ್ಮ ಭೂಷಣ ಪ್ರಶಸ್ತಿಯನ್ನು ಶ್ರೀಗಳು ಪ್ರದಾನ ಮಾಡಿದರು, ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಶ್ರೀಗಳು ಸನ್ಮಾನಿಸಿದರು.ಸಂದೇಶ ನೀಡಿದ ಶ್ರೀ ವಿಶ್ವಪ್ರಸನ್ನ ತೀರ್ಥರು, ರಾಮರಾಜ್ಯ ನಿರ್ಮಾಣಕ್ಕೂ ಸಂತರು ನಿರಂತರ ಮಾರ್ಗದರ್ಶನ ಮಾಡುವಂತಾಗಬೇಕು ಎಂದರು. ವಿಹಿಂಪ ಪ್ರಾಂತ ಸಂಘಟನಾ ಮಂತ್ರಿ ಸುಬೋಧ್ ಮತ್ತು ವೇದವ್ಯಾಸ ಗುರುಕುಲದ ಪ್ರಾಚಾರ್ಯ ಡಾ. ವಿಠೋಬಾಚಾರ್ಯ ಉಪಸ್ಥಿತರಿದ್ದರು. ವಿಹಿಂಪ ಧರ್ಮಚಾರ್ಯ ಸಂಪರ್ಕ ಪ್ರಮುಖ್ ದೀಪಕ್ ಕಾರ್ಯಕ್ರಮ ಸಂಯೋಜಿಸಿ, ಗುರುಕುಲದ ಆಡಳಿತಾಧಿಕಾರಿ ರಾಕೇಶ್ ಗೌರ್ ಸ್ವಾಗತಿಸಿದರು, ಮಹಾನಿಧಿ ಆಚಾರ್ಯರು ಪ್ರಾಸ್ತಾವಿಕ ಮಾತನಾಡಿದರು. ಶ್ರೀಗಳ ಆಪ್ತ ಕಾರ್ಯದರ್ಶಿ ಅಶ್ವಿನ್ ಕಕ್ರಣ್ಣಾಯ ವಂದಿಸಿದರು. ಪೇಜಾವರ ಮಠದ ಸಾರ್ವಜನಿಕ ಸಂಪರ್ಕಾಧಿಕಾರಿ ವಾಸುದೇವ ಭಟ್ ಪೆರಂಪಳ್ಳಿ ಒಟ್ಟು ಕಾರ್ಯಕ್ರಮ ಸಂಯೋಜಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.