ಕನ್ನಡಪ್ರಭ ವಾರ್ತೆ ಹೊನ್ನಾಳಿ
ವೀರಭದ್ರೇಶ್ವರ ಸ್ವಾಮಿ ಗುಗ್ಗುಳದಲ್ಲಿ ರಾಣೇಬೆನ್ನೂರಿನ ಪುರುವಂತರ ಸಂಗಡಿಗರಿಂದ ಶಸ್ತ್ರಗಳನ್ನು ಬಾಯಿಗೆ ಹಾಗೂ ದೇಹದ ಇತರ ಭಾಗಗಳಿಗೆ ಹಾಕಿಸಿಕೊಂಡರು. ಖಡ್ಗ ನೃತ್ಯ ಪ್ರದರ್ಶನ ನಡೆಯಿತು, ವಿವಿಧ ದೇವರ ಉತ್ಸವ ಮೂರ್ತಿಗಳು ಪಲ್ಲಕ್ಕಿಯಲ್ಲಿ ಪ್ರದಕ್ಷಿಣೆ ಹಾಕಿದ ನಂತರ ಕೆಂಡದಾರ್ಚನೆ ನಡೆಯಿತು. ನೂರಾರು ಭಕ್ತರು ಕೆಂಡ ಹಾಯ್ದರು. ಹರಕೆ ಹೊತ್ತ ಮಹಿಳೆಯರು ಕೆಂಡ ಹಾಯ್ದ ಸ್ಥಳದ ಪಕ್ಕದಲ್ಲಿ ಒಣ ಕೊಬ್ಬರಿ ಸುಟ್ಟು ಭಕ್ತಿ ಸಲ್ಲಿಸಿದರು ಬಳಿಕ ಮಹಾ ಪ್ರಸಾದ ನಡೆಯಿತು.
ಚಿಕ್ಕಹಾಲಿವಾಣ ಗ್ರಾಮದ ಶ್ರೀ ವೀರಭದ್ರೇಶ್ವರಸ್ವಾಮಿ ಗುಗ್ಗುಳ ಮಹೋತ್ಸವದಲ್ಲಿ ಹರಿಹರ ತಾಲೂಕಿನ ಹಿರೇಹಾಲಿವಾಣ ಗ್ರಾಮದ ಹಾಲೇಶ್ವರ ಸ್ವಾಮಿ, ಕರಿಯಮ್ಮ ದೇವಿಯರ ಉತ್ಸವ ಮೂರ್ತಿಗಳು ಪಾಲ್ಗೊಂಡಿದ್ದವು. ಕರಿಯಮ್ಮ ದೇವಿಯ ಉತ್ಸವ ಮೂರ್ತಿಯ ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ಒಳಗೆ ಇಡಲಾಗಿತ್ತು. ಮಧ್ಯಾಹ್ನ 3ರಿಂದ ಸಂಜೆವರೆಗೆ ಜವುಳ ಕಾರ್ಯಕ್ರಮ ನಡೆಯಿತು. ರಾತ್ರಿ 7ರಿಂದ 10ರವರೆಗೆ ಅಡ್ಡಪಲ್ಲಕ್ಕಿ ಉತ್ಸವ ಪಾರಂಪರಿಕ ಶ್ರದ್ಧಾ-ಭಕ್ತಿ-ವೈಭವಗಳಿಂದ ನೆರವೇರಿತು.ದೇವಸ್ಥಾನಕ್ಕೆ ಭಕ್ತರು ಅನ್ನ ದಾಸೋಹಕ್ಕಾಗಿ ಅಕ್ಕಿ ಸರ್ಮಪಿಸಿದರು. ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳು ಸೇರಿ ನಾಡಿನ ವಿವಿಧ ಭಾಗಗಳಿಂದ ಅಪಾರ ಭಕ್ತರು ಶ್ರೀ ವೀರಭದ್ರೇಶ್ವರಸ್ವಾಮಿ ಗುಗ್ಗುಳ ಮಹೋತ್ಸವದಲ್ಲಿ ಪಾಲ್ಗೊಂಡರು.