ವೀರಭದ್ರೇಶ್ವರ ಜಾತ್ರೋತ್ಸವ; ವಿಜೃಂಭಣೆಯ ಪಲ್ಲಕಿ ಉತ್ಸವ

KannadaprabhaNewsNetwork | Published : Jan 16, 2025 12:47 AM

ಸಾರಾಂಶ

ಹುಮನಾಬಾದ್‌ನಲ್ಲಿ ವೀರಭದ್ರೇಶ್ವರರ ಅಲಂಕೃತ ಉತ್ಸವ ಮೂರ್ತಿಯೊಂದಿಗೆ ಅದ್ಧೂರಿಯಾಗಿ ನಡೆದ ಪಲ್ಲಕಿ ಮೆರವಣಿಗೆಯಲ್ಲಿ ಶಾಸಕ ಡಾ.ಸಿದ್ದು ಪಾಟೀಲ್, ಮಾಜಿ ಸಚಿವ ರಾಜಶೇಖರ ಪಾಟೀಲ್ ಮತ್ತಿತರರು ಭಾಗಿಯಾಗಿದ್ದರು.

ಕನ್ನಡಪ್ರಭ ವಾರ್ತೆ, ಹುಮನಾಬಾದ್

ಕಲ್ಯಾಣ ಕರ್ನಾಟಕ ಭಾಗದ ಐತಿಹಾಸಿಕ ಪ್ರಸಿದ್ಧ ಹುಮನಾಬಾದ್‌ ಆರಾಧ್ಯದೈವ, ವೀರಭದ್ರೇಶ್ವರ ಜಾತ್ರಾ ಮೋಹತ್ಸವ ಅಂಗವಾಗಿ ಮಂಗಳವಾರ ರಾತ್ರಿ ಪ್ರತಿ ವರ್ಷದಂತೆ ಹಿರೇಮಠ ಸಂಸ್ಥಾನದ ರೇಣುಕ ವೀರ ಗಂಗಾಧರ ಸ್ವಾಮಿಗಳ ನೇತೃತ್ವದಲ್ಲಿ ಅಲಂಕೃತ ಉತ್ಸವ ಮೂರ್ತಿಯೊಂದಿಗೆ ಅದ್ಧೂರಿಯಾಗಿ ವೀರಭದ್ರೇಶ್ವರ ಪಲ್ಲಕಿ ಮೆರವಣಿಗೆ ಜರುಗಿತು.

ಸಂಪ್ರದಾಯದಂತೆ ಹಿರೇಮಠ ಸಂಸ್ಥಾನದ ಪೀಠಾಧಿಪತಿ ರೇಣುಕ ವೀರ ಗಂಗಾಧರ ಶಿವಾಚಾರ್ಯರು ಪಾರಂಪರಿಕ ವಿಧಿ ವಿಧಾನಗಳು ಹಾಗೂ ವಾದ್ಯ ಮೇಳ ಮೂಲಕ ಹಿರೆಮಠದಿಂದ ದೇವಸ್ಥಾನಕ್ಕೆ ಕರೆತರಲಾಯಿತು.

ಬಳಿಕ ಅಲಂಕಕೃತ ದೇವರಿಗೆ ಪಾಟೀಲ್ ಪರಿವಾರದಿಂದ ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನದ ಆವರಣದಿಂದ ಸಂಗೀತ ವಾದ್ಯಗಳೊಂದಿಗೆ ದೇವರ ಪಲ್ಲಕಿ ಉತ್ಸವ ಆರಂಭಗೊಂಡು ಪಟ್ಟಣದ ಜೇರಪೇಟ ಬಡಾವಣೆಯ ಹನುಮಾನ ದೇವಸ್ಥಾನದ ಮುಂಭಾಗದಲ್ಲಿ ಹಾಗೂ ಅಗ್ನಿಕುಂಡ ಎರಡು ಕಡೆಗಳಲ್ಲಿ ಧಾರ್ಮಿಕ ವಿಧಿ ವಿಧಾನದೊಂದಿಗೆ ಸಾವಿರಾರು ಭಕ್ತರ ಮಧ್ಯೆ ವೀರಭದ್ರನ ಮದುವೆಯ ಭಗ್ನದ ಪ್ರಸಂಗದ ನಿಮಿತ್ತ ದೇವರ ಮದುವೆಯ ಸುರಗಿಯ ಸನ್ನಿವೇಶ ಜರುಗಿತು.

ವೀರಭದ್ರೇಶ್ವರ ದೇವರ ಶಲ್ಯಕ್ಕೆ ಬೆಂಕಿ ಹಚ್ಚಿ ನೆರೆದ ಭಕ್ತರ ಕಡೆ ಬಿಸಾಕುವ ಮೂಲಕ ವೀರಭದ್ರೇಶ್ವರ ಶಲ್ಯ ಸುಡುವ ಕಾರ್ಯಕ್ರಮ ಜರುಗಿತು. ಈ ಸುಡುತ್ತಿರುವ ಶಲ್ಯ ಯಾರಿಗೆ ದೊರೆಯುತ್ತದೆ ಆತ ಭಾಗ್ಯಶಾಲಿ ಎಂಬ ಭಾವನೆಯ ಹಿನ್ನೆಲೆಯಲ್ಲಿ ಇದನ್ನು ಯಾವುದೇ ಕಾರಣಕ್ಕು ಪಡೆಯಬೇಕೆಂಬ ಛಲದಿಂದ ಭಾರಿ ನೂಕು ನುಗ್ಗಲು ಉಂಟಾಗಿತ್ತು.

ಮಂಗಳವಾರ ರಾತ್ರಿ 8 ಗಂಟೆಗೆ ದೇವಸ್ಥಾನದಿಂದ ಹೋರಟ ಮೇರವಣಿಗೆ ಮರಳಿ ಅಗ್ನಿ ಕುಂಡದಿಂದ ಅಂಬೇಡ್ಕರ್ ವೃತ್ತ, ಸರದಾರ ಪಟೇಲ್ ವೃತ್ತ, ಬಾಲಾಜಿ ಮಂದಿರ, ವೀರಭದ್ರೇಶ್ವರ ರಸ್ತೆ ಮೂಲಕ ದೇವಸ್ಥಾನಕ್ಕೆ ರಾತ್ರಿ 2.30 ಗಂಟೆಗೆ ತಲುಪಿತು. ರಸ್ತೆಯ ಉದ್ದಕ್ಕೂ ಭಕ್ತರು ದೇವರಿಗೆ ಶಲ್ಯ ಹೊದಿಸಿ ನೈವೇದ್ಯ ಅರ್ಪಿಸಿ ದೇವರ ದರ್ಶನ ಪಡೆದರು. ಈ ಹಿಂದೆ ಜನವರಿ 10 ರಂದು ದೇವರಿಗೆ ಎಣ್ಣೆ ಹಚ್ಚುವ ಕಾರ್ಯಕ್ರಮ ಜರುಗಿತ್ತು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೀರಣ್ಣ ಪಾಟೀಲ್, ಶಾಸಕ ಡಾ.ಸಿದ್ದಲಿಂಗಪ್ಪಾ ಪಾಟೀಲ್, ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಮಲ್ಲಿಕಾರ್ಜುನ ಮಾಳಶಟ್ಟಿ, ದತ್ತಕುಮಾರ ಚಿದ್ರಿ, ಪುರಸಭೆ ಸದಸ್ಯ ಸುನೀಲ (ಕಾಳಪ್ಪಾ) ಪಾಟೀಲ್, ಮಹೇಶ ಅಗಡಿ, ಸೇರಿದಂತೆ ಸಹಸ್ರಾರು ಭಕ್ತರು ಪಲ್ಲಕಿ ಉತ್ಸವದಲ್ಲಿ ಸಂಪ್ರದಾಯದಂತೆ ತಮ್ಮ ಸೇವೆ ಸಲ್ಲಿಸಿದರು.

ಶಲ್ಯ ಸುಡುವ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಮಾರ್ಗದರ್ಶನ ಸಿಪಿಐ ಗುರುಲಿಂಗಪ್ಪಾಗೌಡ ಪಾಟೀಲ್ ನೇತೃತ್ವದಲ್ಲಿ ಪಿಎಸ್‌ಐ ಸುರೇಶ ಚವ್ಹಾಣ, ಬೇಮಳಖೇಡಾ ಪಿಎಸ್‌ಐ ನಿಂಗಪ್ಪಾ ಮಣ್ಣುರ, ಸಂಚಾರಿ ಪಿಎಸ್‌ಐ ಬಸವಲಿಂಗ ಗೊಡಿಹಾಳ, ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.ಲೋಕ ನಿಂದನೆಗೆ ಧೃತಿಗೆಡದೆ ಸರ್ವರ ಹಿತ ಬಯಸಿ: ಹಾರಕೂಡ ಶ್ರೀ

ಬಸವಕಲ್ಯಾಣ: ಆಧ್ಯಾತ್ಮದ ಅನುಸಂಧಾನವೇ ಗುರು ಶಿಷ್ಯರ ನಿಜವಾದ ಸಂಬಂಧ ಎಂದು ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ತಾಲೂಕಿನ ಆಲಗೂಡ ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ 38ನೇ ಶಿವಾನುಭವ ಚಿಂತನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ನಾವು ಸನ್ಮಾರ್ಗದಲ್ಲಿ ನಡೆದಾಗಲೂ ಲೋಕ ನಿಂದೆಗಳು ಬರುವುದು ಸಹಜ, ಲೋಕ ನಿಂದನೆಗೆ ಧೃತಿಗೆಡದೆ ಸರ್ವರಿಗೂ ಪ್ರೀತಿಯಿಂದ ಹಿತವನ್ನೇ ಬಯಸುವವ ದೇವ ಮಾನವನಾಗುತ್ತಾನೆ ಎಂದು ತಿಳಿಸಿದರು.

ಈ ಜಗತ್ತಿನಲ್ಲಿ ಹೆತ್ತ ತಾಯಿಯ ಆಶೀರ್ವಾದಕ್ಕಿಂತ ಶ್ರೇಷ್ಠ ಅನುಗ್ರಹ ಇನ್ನೊಂದಿಲ್ಲ. ತಾಯಿಯ ಪವಿತ್ರ ಪಾದವು ಸ್ವರ್ಗಕ್ಕೆ ಸಮಾನ. ಯಾವ ದೇವರ ಆರಾಧನೆ ಮಾಡಿದರೂ ಹೆತ್ತ ತಾಯಿಯ ಸೇವೆ ಮಾಡುವುದನ್ನು ಯಾವ ಕಾರಣಕ್ಕೂ ಅಲ್ಲಗಳೆಯಬಾರದು. ತಾಯಿಯೇ ಪರಮ ದೈವವೆಂದು ತಿಳಿದು ತಂದೆ ತಾಯಿಯರ ಸೇವೆಯಿಂದ ಸಕಲೈಶ್ವರ್ಯ ಪ್ರಾಪ್ತವಾಗಿ ನೆಮ್ಮದಿಯ ಬದುಕು ಸಾಧ್ಯವಾಗುತ್ತದೆ ಎಂದರು.

ಬಸವಕಲ್ಯಾಣದ ಶಾಸಕ ಶರಣು ಸಲಗರ ಮಾತನಾಡಿ, ಬಸವಾದಿ ಶರಣರ ಪುಣ್ಯಭೂಮಿ ಸಾಧ್ಯತೆಗಳ ಶ್ರೇಷ್ಠ ಭೂಮಿಯಾಗಿದ್ದು, ಈ ನೆಲದ ವಾರಸು ದಾರರು ನಾವುಗಳು ಎನ್ನುವ ಹೆಮ್ಮೆ ನಮಗಿರಬೇಕೆಂದರು.ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯ ಸಿಂಗ್‌, ಖ್ಯಾತ ಪ್ರವಚನಕಾರ ದಯಾನಂದ ಹಿರೇಮಠ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಶರಣು ಆಲಗೂಡ, ಆಲಗೂಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೇಘಾ ಸಗರ, ಪಿಎಸ್ಐ ಸುವರ್ಣ ಮಲ್ಲಶೆಟ್ಟಿ, ನಾಗೇಶ ಸ್ವಾಮಿ, ಶರಣಪ್ಪಾ ಬಂಗಾರೆ, ಬಸಯ್ಯ ಸ್ವಾಮಿ, ಗುಲಾಬ ಪಾಟೀಲ, ಗಣೇಶ ಸೋಮವಂಶೆ, ರವಿ ಠಮಕೆ, ಕಾರ್ತಿಕ ಬಡದಾಳೆ, ನವಲಿಂಗ ಪಾಟೀಲ್‌, ಗುರುನಾಥ ಬಡದಾಳೆ, ಮೋಹನ ಉಕ್ಕಾವಲೆ ಉಪಸ್ಥಿತರಿದ್ದರು.

Share this article