ವೈಭವಯುತವಾಗಿ ನಡೆದ ವೀರಭದ್ರೇಶ್ವರಸ್ವಾಮಿ ರಥೋತ್ಸವ

KannadaprabhaNewsNetwork |  
Published : Apr 02, 2026, 01:45 AM IST
1ಕೆಎಂಎನ್ ಡಿ32,33 | Kannada Prabha

ಸಾರಾಂಶ

ವಿವಿಧ ವರ್ಣಗಳ ಬಾವುಟ, ಪರಿಮಳ ಪುಷ್ಪಗಳ ಹಾರಗಳಿಂದ ಶೃಂಗರಿಸಲಾಗಿದ್ದ ಮಹಾರಥವನ್ನು ಭಕ್ತರು ಭಕ್ತಿಯಿಂದ ನಮಿಸುತ್ತ ಎಳೆದರು. ಹರಕೆ ಹೊತ್ತ ಭಕ್ತರು ಬಾಯಿ ಬೀಗ ಧರಿಸಿ ರಥದ ಸುತ್ತ ಪ್ರದಕ್ಷಿಣೆ ಹಾಕಿ ಹರಕೆ ಒಪ್ಪಿಸಿದರು. ಸದ್ಭಕ್ತರು ಹಣ್ಣು ಧವನ ಎಸೆದು ದೇವರಿಗೆ ಭಕ್ತಿಯ ಜೈಕಾರ ಹಾಕಿದರು.

ಕಿಕ್ಕೇರಿ

ಹೋಬಳಿಯ ಗಡಿಯಂಚಿನ ಭಾಗದ ದೊಡ್ಡತರಹಳ್ಳಿಯಲ್ಲಿ ವೈಭವಯುಕ್ತವಾಗಿ ವೀರಭದ್ರೇಶ್ವರಸ್ವಾಮಿ ರಥೋತ್ಸವ ನೆರವೇರಿತು.

ಭಾನುವಾರ ಕಳಸ ಪ್ರಕ್ರಿಯ ಆರಂಭವಾಗಿ ಚಂದ್ರಮಂಡಲ ನಿರ್ಮಿಸಿ ರಥಕ್ಕೆ ಕಳಸ ಕಟ್ಟಲಾಯಿತು. ಮಂಗಳವಾರ ಜಾತ್ರಾ ಸಡಗರ ಆರಂಭವಾಗಿ ನಿತ್ಯ ದೇವರಿಗೆ ವಿಶೇಷ ಪೂಜೆಗಳು ಜರುಗಿದವು. ವೀರಭದ್ರೇಶ್ವರಸ್ವಾಮಿ, ಭದ್ರಕಾಳಿದೇವಿ, ಲಕ್ಷ್ಮೀದೇವಿಯ ಉತ್ಸವ ಮೂರ್ತಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೆರವೇರಿತು. ಗ್ರಾಮಸ್ಥರು ಮನೆಯ ಮುಂದೆ ರಂಗೋಲಿ ಬಿಡಿಸಿ ತಳಿ ತೋರಣ ಕಟ್ಟಿ ದೇವರನ್ನು ಸಂಭ್ರಮದಿಂದ ಬರಮಾಡಿಕೊಂಡು ಆರತಿ ಬೆಳಗಿದರು.

ವೀರಭದ್ರೇಶ್ವರಸ್ವಾಮಿ ಅಡ್ಡೆದೇವರನ್ನು ರಥದ ಸುತ್ತ ಮೂರು ಪ್ರದಕ್ಷಿಣೆ ಹಾಕಿಸಿ ರಥದ ಅಷ್ಟದಿಕ್ಕುಗಳಿಗೆ ಬಲಿಯನ್ನು, ಮಹಾಪೂಜೆ ನೆರವೇರಿಸಿ ನಿರ್ವಿಘ್ನವಾಗಿ ರಥೋತ್ಸವ ನೆರವೇರಲು ಪ್ರಾರ್ಥಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ವಿವಿಧ ವರ್ಣಗಳ ಬಾವುಟ, ಪರಿಮಳ ಪುಷ್ಪಗಳ ಹಾರಗಳಿಂದ ಶೃಂಗರಿಸಲಾಗಿದ್ದ ಮಹಾರಥವನ್ನು ಭಕ್ತರು ಭಕ್ತಿಯಿಂದ ನಮಿಸುತ್ತ ಎಳೆದರು. ಹರಕೆ ಹೊತ್ತ ಭಕ್ತರು ಬಾಯಿ ಬೀಗ ಧರಿಸಿ ರಥದ ಸುತ್ತ ಪ್ರದಕ್ಷಿಣೆ ಹಾಕಿ ಹರಕೆ ಒಪ್ಪಿಸಿದರು. ಸದ್ಭಕ್ತರು ಹಣ್ಣು ಧವನ ಎಸೆದು ದೇವರಿಗೆ ಭಕ್ತಿಯ ಜೈಕಾರ ಹಾಕಿದರು.

ಅನ್ನ ಸಂತರ್ಪಣೆ ನಡೆಯಿತು. ಭಕ್ತರು, ದಾನಿಗಳು ನೀರು ಮಜ್ಜಿಗೆ ಪಾನಕ, ಕೋಸಂಬರಿ, ಹಣ್ಣು ತುಪ್ಪ ರಸಾಯನ, ವಿವಿಧ ಬಗೆಯ ಹಣ್ಣಿನ ಪಾನೀಯವನ್ನು ನೀಡಿ ಭಕ್ತರ ದಾಹ ತಣಿಸಿದರು. ವಿವಿಧ ಗ್ರಾಮಗಳ ಮಹಿಳಾ ತಂಡದವರು ಕೋಲಾಟ ಪ್ರದರ್ಶಿಸಿ ರಂಜಿಸಿದರು.

ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ವೀರಭದ್ರೇಶ್ವರ ದೇಗುಲ ಹಳೆಯದಾಗಿದ್ದು, ನೂತನವಾಗಿ ನಿರ್ಮಿಸಲು ಸದ್ಭಕ್ತರ ಸಹಕಾರದಲ್ಲಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಶಾಸಕ ಎಚ್.ಟಿ. ಮಂಜು, ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರ ಪತ್ನಿ ಅನುಸೂಯ ಬಾಲಕೃಷ್ಣ, ರಾಜ್ಯ ಸಹಕಾರ ಮಾರಾಟ ಮಹಾ ಮಂಡಲ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಂ. ಕಿರಣ್, ಶಂಕರ ಮೂಲೆಹಟ್ಟಿ, ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ವಿವಿಧ ಗ್ರಾಮಗಳ ಗಣ್ಯರು, ದೂರದ ಊರಿನಲ್ಲಿರುವ ತವರಿನ ಮಕ್ಕಳು, ದೇವರ ಒಕ್ಕಲಿನ ಸದ್ಭಕ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ಧಗಂಗಾ ಮಠ ಪ್ರಜಾಪ್ರಭುತ್ವದ ಕೈಗನ್ನಡಿ: ಮುರ್ಮು
ಅಯತೊಲ್ಲಾ ಖಮೇನಿ ನಿಧನಕ್ಕೆ ಕಲಬುರಗಿ ಪಾಲಿಕೆ ಸಂತಾಪ