ಹಾವೇರಿ: ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಫೂರ್ತಿಯಾದ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಸ್ವಾತಂತ್ರ್ಯ ಪ್ರೇಮ, ದೇಶಭಕ್ತಿ ಹೋರಾಟದ ಬದುಕು ಯುವ ಜನತೆಗೆ ಆದರ್ಶಪ್ರಾಯವಾಗಿದೆ ಎಂದು ಸಮಾಜದ ಮುಖಂಡ ಭುವನೇಶ್ವರ ಶಿಡ್ಲಾಪೂರ ಹೇಳಿದರು.ಜಿಲ್ಲೆಯ ಹಾನಗಲ್ಲ ತಾಲೂಕು ಹಿರೇಹುಲ್ಲಾಳ ಗ್ರಾಮದಲ್ಲಿ ಗ್ರಾಮ ಘಟಕ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕನ್ನಡ ನಾಡು ಹಿಂದಿನಿಂದಲೂ ಸಾಕಷ್ಟು ವೀರರು ಶೂರರೂ ಇದ್ದಂತಹ ನಾಡು. ಅದರಲ್ಲಿಯೂ ಉತ್ತರ ಕರ್ನಾಟಕ ಗಂಡುಗಲಿಗಳ ನಾಡೆಂದೆ ಪ್ರಸಿದ್ಧಿ ಹೊಂದಿದೆ. ಬೆಳಗಾವಿಯ ಕಿತ್ತೂರು ಸಂಸ್ಥಾನವನ್ನು ಆಳಿದ ವೀರರಾಣಿ ಚೆನ್ನಮ್ಮ ಬ್ರಿಟಿಷರನ್ನು ನಡುಗುವಂತೆ ಮಾಡಿದ್ದಲ್ಲದೆ, ಏಕಾಂಗಿಯಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಕನ್ನಡಿಗರ ಧೈರ್ಯಕ್ಕೆ ಸಾಕ್ಷಿಯಾದವರು. ಚೆನ್ನಮ್ಮ ಕೇವಲ ಒಂದು ಸಮಾಜಕ್ಕೆ ಮೀಸಲಾದ ವೀರ ಮಹಿಳೆ ಅಲ್ಲ, ರಾಷ್ಟ್ರಕ್ಕೆ ಕೀರ್ತಿ ತಂದ ಮಹಿಳೆ. ತನ್ನ ಶಿಸ್ತು ಬದ್ಧ ಆಡಳಿತ ಮತ್ತು ಅಂತಃಕರಣ ಭರಿತ ನಿರ್ಣಯಗಳಿಂದಾಗಿ ಕಿತ್ತೂರು ರಾಣಿ ಚೆನ್ನಮ್ಮ ಇತಿಹಾಸದಲ್ಲಿ ಸುಭದ್ರ ಸ್ಥಾನ ಪಡೆದಿದ್ದಾಳೆ ಎಂದು ಹೇಳಿದರು.ತಾಲೂಕು ಅಧ್ಯಕ್ಷ ಕರಬಸಪ್ಪ ಶಿವೂರ ಮಾತನಾಡಿ, ಬ್ರಿಟಿಷರ ವಿರುದ್ಧ ಸೆಣಸಿದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ತನ್ನ ಶೌರ್ಯ ಸಾಹಸಕ್ಕೆ ಮಾತ್ರವಲ್ಲ ಅಂತಃಕರಣದಿಂದಲೂ ಜಗ ಮೆಚ್ಚಿದ ಮಗಳು. ಚೆನ್ನಮ್ಮ ಚಿಕ್ಕ ವಯಸ್ಸಿನಲ್ಲಿ ಕುದುರೆ ಸವಾರಿ, ಬಿಲ್ಲು ವಿದ್ಯೆಯಲ್ಲಿ ಪರಿಣಿತಿ ಪಡೆದಿದ್ದರು. ಚಿಕ್ಕಂದಿನಿಂದಲೂ ಧೈರ್ಯವಂತೆಯಾಗಿದ್ದ ಚೆನ್ನಮ್ಮಳು ಎಂಥ ಕಷ್ಟದ ಪರಿಸ್ಥಿತಿಯನ್ನು ಎದುರಿಸಬಲ್ಲವರಾಗಿದ್ದರು. ಮುಂದೆ ತನ್ನ ರಾಜ್ಯಕ್ಕೆ ಎದುರಾದ ಕಠಿಣ ಪರಿಸ್ಥಿತಿಯಲ್ಲಿಯೂ ಅಳುಕದೆ ರಾಜನಿಷ್ಟರಾಗಿದ್ದ ಗುರಸಿದ್ದಪ್ಪ, ನರಸಿಂಗರಾವ್ ಮತ್ತಿತರರ ಬೆಂಬಲದೊಡನೆ ತನ್ನ ದತ್ತು ಮಗನಿಗೆ ಪಟ್ಟ ಕಟ್ಟಿದ್ದರು ಎಂದು ಹೇಳಿದರು.ಈ ವೇಳೆ ಮಹಿಳಾ ಘಟಕದ ಅಧ್ಯಕ್ಷೆ ಅನಿತಕ್ಕ ಶಿವೂರ, ಮುಖಂಡರಾದ ಮಾಲತೇಶ ಸೊಪ್ಪಿನ, ಸಿದ್ದಲಿಂಗಪ್ಪ ಕಮಡೊಳ್ಳಿ, ಪಂಚಸೇನೆ ಜಿಲ್ಲಾಧ್ಯಕ್ಷ ಶ್ರೀಕಾಂತ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಸಮಾಜ ಬಾಂಧವರು ಇದ್ದರು.