ಕನ್ನಡಪ್ರಭ ವಾರ್ತೆ ಕನಕಪುರ
ನಗರದ ಕೋಟೆ ಗಣೇಶ ದೇವಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಾಲೂಕು ವೀರಶೈವ ಲಿಂಗಾಯತ ಮುಖಂಡ ಹಾಗೂ ನಗರಸಭೆ ನಾಮ ನಿರ್ದೇಶನ ಸದಸ್ಯ ಜಿ.ಪಿ.ವೀರೇಶ್, ಜಗಜ್ಯೋತಿ ಬಸವಣ್ಣ ಸಮಾಜದಲ್ಲಿ ಮೇಲು- ಕೀಳು ತೊಲಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ ಕ್ರಾಂತಿಕಾರಿ ಪುರುಷ, ಇವರ ವಚನಗಳನ್ನು ಇಡೀ ವಿಶ್ವವೇ ಮೆಚ್ಚಿ ಅದನ್ನು ಅನುಸರಿಸುತ್ತಾ ಬಂದಿವೆ. ಕಲ್ಮಶ ಮನಸ್ಸಿನ ರವಿ ಹಂಜ್ ಎಂಬ ವ್ಯಕ್ತಿ ಬಸವಣ್ಣನವರಿಗೆ ಹಾಗೂ ವೀರಶೈವ ಧರ್ಮಕ್ಕೆ ಕಳಂಕ ತರುವ ದುರುದ್ದೇಶದಿಂದ ಪುಸ್ತಕ ರಚನೆ ಮೂಲಕ ಸಮಾಜಕ್ಕೆ ದಾರಿ ತಪ್ಪಿಸುವ ಷಡ್ಯಂತ್ರ ನಡೆಸಿರುವುದು ಖಂಡನೀಯ. ಬಸವಣ್ಣನವರಿಗೆ ಕಳಂಕ ತರುವ ದುರುದ್ದೇಶ ಹೊಂದಿರುವ ಈತನಿಗೆ ಕ್ಷಮೆ ಸಲ್ಲದು, ಈತನ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ವೀರಶೈವ ಹಿರಿಯ ಮುಖಂಡ ಹಾಗೂ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಎಸ್. ಶಂಕರ್ ಮಾತನಾಡಿ, ನಮ್ಮ ರಾಜ್ಯದಲ್ಲಿ ಜಗಜ್ಯೋತಿ ಬಸವೇಶ್ವರರನ್ನು ಜನ ದೇವರಂತೆ ಕಾಣುತ್ತಾ ಪೂಜೆ ಮಾಡುತ್ತಾ ಬಂದಿದ್ದಾರೆ. ಸರ್ವಜನಾಂಗದ ಸಮಾನತೆಗಾಗಿ ಹೋರಾಟ ನಡೆಸಿದ ಬಸವಣ್ಣನವರ ವಿರುದ್ಧ ಪುಸ್ತಕ ಬಿಡುಗಡೆ ಮಾಡಿದ ರವಿ ಹಂಜ್ ಸಮಾಜ ಒಡೆಯುವ ಪ್ರಯತ್ನ ಮಾಡಿದ್ದಾರೆ. ಇಡೀ ಬಸವಣ್ಣನವರ ಅನುಯಾಯಿಗಳ ಮನಸ್ಸುಗಳಿಗೆ ಘಾಸಿಗೊಳಿಸಿದ್ದಾರೆ. ಇವರ ಪುಸ್ತಕದ ವಿರುದ್ಧ ಜನ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ರಾಜ್ಯದ ಮುಖ್ಯಮಂತ್ರಿಗಳು ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಂಡು ಲೇಖಕನ ಮೇಲೆ ಕಾನೂನು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹವಾಗಿದ್ದು, ರವಿ ಹಂಜ್ ಗೆ ನ್ಯಾಯಾಲಯ ಉಗ್ರ ಶಿಕ್ಷೆ ವಿಧಿಸುವ ಅಭಿಲಾಷೆ ವ್ಯಕ್ತಪಡಿಸಿದರು.ವೀರಶೈವ ಮುಖಂಡ ಕೈಲಾಸ್ ಶಂಕರ್ ಮಾತನಾಡಿ, 12ನೇ ಶತಮಾನದಲ್ಲಿ ಸಮಾಜದ ಸಮಾನತೆಗೆ ಹಗಲಿರುಳು ದುಡಿದ ಬಸವಣ್ಣ ಇಡೀ ವಿಶ್ವಕ್ಕೇ ಮಾದರಿಯಾದರು, ಇಂತಹ ಮಹಾನ್ ಪುರುಷನ ಹೆಸರಿಗೆ ಕಳಂಕ ತರಲು ಯತ್ನಿಸಿರುವ ರವಿ ಹಂಜ್ ಪರವಾಗಿ ಯಾರೂ ವಕಾಲತ್ತು ವಹಿಸಬಾರದೆಂದು ಮನವಿ ಮಾಡಿದರು.
ತಾಲೂಕು ವೀರಶೈವ ಲಿಂಗಾಯತ ಮುಖಂಡರಾದ ಮುದುವಾಡಿ ರವಿ, ಸಾತನೂರು ಸ್ವಾಮಿ, ಭೂಹಳ್ಳಿ ಶಿವಸ್ವಾಮಿ, ಕನಕಪುರ ನಿರ್ವಾಣೇಶ್ವರ ಸಹಕಾರಿ ಸಂಘದ ಅಧ್ಯಕ್ಷ ಪರಮೇಶಯ್ಯ, ಜಗದೀಶ್, ಯತೀಶ್, ಸೋಮಶೇಖರ್, ಮುದವಾಡಿ ಸುರೇಶ್, ಕೋಟೆ ಶಂಕರ್ ಸೇರಿ ಸಮಾಜದ ಹಲವಾರು ಮುಖಂಡರು ಹಾಜರಿದ್ದರು.