ಕನ್ನಡಪ್ರಭ ವಾರ್ತೆ, ತುಮಕೂರುತೀವ್ರ ಕುತೂಹಲ ಮೂಡಿಸಿದ್ದ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಪಾವಗಡ ಕ್ಷೇತ್ರದ ಶಾಸಕ ಎಚ್.ವಿ. ವೆಂಕಟೇಶ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ವೆಂಕಟೇಶ್ 2 ನಾಮಪತ್ರ ಹಾಗೂ ಎನ್‌ಡಿಎ ಅಭ್ಯರ್ಥಿಯಾಗಿ ಶಿರಾ ಕ್ಷೇತ್ರದ ಎಸ್.ಆರ್. ಗೌಡ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 12 ಗಂಟೆಯಾದರೂ ಯಾರು ನಾಮಪತ್ರವನ್ನು ಹಿಂಪಡೆಯದ ಕಾರಣ ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಚುನಾವಣೆ ಪ್ರಕ್ರಿಯೆ ಮುಂದುವರೆಸಿದರು. ನಂತರ ಗೌಪ್ಯ ಮತದಾನ ನಡೆಯಿತು.
ತುಮುಲ್‌ನಲ್ಲಿ 10 ಮಂದಿ ಚುನಾಯಿತ ನಿರ್ದೇಶಕರು, ನಾಮ ನಿರ್ದೇಶಿತರು ಹಾಗೂ ಅಧಿಕಾರಿಗಳು ಸೇರಿ ಒಟ್ಟು 15 ಮಂದಿ ಮತದಾನ ಮಾಡುವ ಹಕ್ಕು ಹೊಂದಿದ್ದರು. ಈ ಪೈಕಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಐವರು, ಒಬ್ಬರು ಕೆಎಂಎಫ್ ಪ್ರತಿನಿಧಿ, ಒಬ್ಬರು ಸರ್ಕಾರದಿಂದ ನಾಮ ನಿರ್ದೇಶಿತ ಸದಸ್ಯರು , ಜಿಲ್ಲಾ ಸಹಕಾರ ಸಂಘಗಳ ಜಂಟಿ ನಿಬಂಧಕರು, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರು, ಎನ್‌ಡಿಡಿಬಿಯ ಒಬ್ಬರು ಮತ ಚಲಾಯಿಸುವ ಹಕ್ಕು ಹೊಂದಿದ್ದರು. ಈ ಬಾರಿ ತುಮುಲ್ ಅಧ್ಯಕ್ಷ ಸ್ಥಾನದ ಗದ್ದುಗೆಗೇರಲು ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ರವರ ಪತ್ನಿ ಭಾರತಿದೇವಿ, ಮಧುಗಿರಿಯ ನಿರ್ದೇಶಕ ಹಾಗೂ ಸಹಕಾರ ಸಚಿವ ಕೆ.ಎನ್. ರಾಜಣ್ಣನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಾಗೇಶ್‌ಬಾಬು, ಶಿರಾ ನಿರ್ದೇಶಕ ಎಸ್.ಆರ್. ಗೌಡ, ತಿಪಟೂರು ತಾಲೂಕು ಮಾದಿಹಳ್ಳಿ ಪ್ರಕಾಶ್ ಅವರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಆದರೆ ಅಚ್ಚರಿ ಬೆಳವಣಿಗೆಯಲ್ಲಿ ಪಾವಗಡ ಶಾಸಕ ಎಚ್.ವಿ. ವೆಂಕಟೇಶ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವ ಚುನಾಯಿತ ಸದಸ್ಯರ ಎಲ್ಲ ಕಸರತ್ತುಗಳಿಗೆ ತೆರೆ ಬಿದ್ದಂತಾಗಿದೆ.
ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಚ್.ವಿ. ವೆಂಕಟೇಶ್ ಅವರು, ತುಮಕೂರು ಹಾಲು ಒಕ್ಕೂಟದಲ್ಲಿ ಎಲ್ಲ ನಿರ್ದೇಶಕರ ಸಹಕಾರ ಪಡೆದು ಉತ್ತಮವಾಗಿ ಆಡಳಿತ ನಡೆಸುತ್ತೇನೆ ಎಂದರು. ತುಮಕೂರು ಹಾಲು ಒಕ್ಕೂಟದ ಎಲ್ಲ ನಿರ್ದೇಶಕರನ್ನು ಒಗ್ಗೂಡಿಸಿಕೊಂಡು ಉತ್ತಮವಾಗಿ ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಒಕ್ಕೂಟದಲ್ಲಿ ಅಗತ್ಯ ಇರುವ ಬದಲಾವಣೆ ತರಲು ಸಹ ಶ್ರಮಿಸುತ್ತೇನೆ ಎಂದು ಅವರು ತಿಳಿಸಿದರು.ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಹಕಾರ ಸಚಿವ ಕೆ.ಎನ್. ರಾಜಣ್ಣ ಹಾಗೂ ಪಕ್ಷದ ಎಲ್ಲ ನಾಯಕರ ಆಶೀರ್ವಾದದಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ನನ್ನ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.ತುಮುಲ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಶಾಸಕ ವೆಂಕಟೇಶ್ ಅವರು ಗೆಲುವು ಸಾಧಿಸಿದ್ದರಿಂದ ಪಾವಗಡ ತಾಲೂಕಿನಿಂದ ಆಗಮಿಸಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ತುಮುಲ್ ಆಡಳಿತ ಕಚೇರಿ ಮುಂಭಾಗ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ತಮ್ಮ ನೆಚ್ಚಿನ ನಾಯಕ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕೈ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.