ಕನ್ನಡಪ್ರಭ ವಾರ್ತೆ ಸುರಪುರ
ಜಾತ್ರೆಯ ಅಂಗವಾಗಿ ಬೆಳಗ್ಗಿನಿಂದಲೇ ವೇಣುಗೋಪಾಲಸ್ವಾಮಿ ದೇಗುಲದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಮುಂಜಾನೆಯಿಂದಲೇ ದೇವರ ದರ್ಶನಕ್ಕಾಗಿ ಭಕ್ತರ ದಂಡೇ ಆಗಮಿಸಿತ್ತು. ಗರ್ಭಗುಡಿಯಲ್ಲಿ ರುಕ್ಮಣಿ, ಸತ್ಯೆಭಾಮೆ ಸಹಿತ ವೇಣುಗೋಪಾಲ ಸ್ವಾಮಿಯ ಭವ್ಯ ಮೂರ್ತಿಗೆ ತುಳಸಿ ಹಾಗೂ ನಾನಾ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದ್ದ ಸ್ವಾಮಿಯ ದರ್ಶನ ಪಡೆದ ಭಕ್ತರು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ, ತಮ್ಮ ಇಷ್ಟಾರ್ಥಗಳನ್ನು ಈಡೇರಲಿ ಎಂದು ಪ್ರಾರ್ಥಿಸಿದರು.
ಮನೆಮನೆಯಲ್ಲೂ ನೈವೇದ್ಯದ ಸಂಭ್ರಮ: ಜಾತ್ರೆಯ ಹಿನ್ನೆಲೆಯಲ್ಲಿ ನಗರದ ಮನೆಮನೆಗಳಲ್ಲೂ ಬೆಳಗ್ಗಿನಿಂದಲೇ ಹಬ್ಬದ ವಾತಾವರಣ ಕಂಡುಬಂತು. ದೇವರಿಗೆ ನೈವೇದ್ಯ ಅರ್ಪಿಸಲು ಹೋಳಿಗೆ, ಕರಿಚಿಕಾಯಿ(ಕಡಬು) ಸೇರಿದಂತೆ ವಿವಿಧ ಸಾಂಪ್ರದಾಯಿಕ ಸಿಹಿ ತಿನಿಸುಗಳನ್ನು ಸಿದ್ಧಪಡಿಸಲಾಗಿತ್ತು. ಕುಟುಂಬ ಸಮೇತರಾಗಿ ದೇವಾಲಕ್ಕೆ ತೆರಳಿ ಭಕ್ತರು ಸ್ವಾಮಿಯ ದರ್ಶನ ಪಡೆದು ಕಾಯಿ, ಕರ್ಪೂರ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು ಸಮರ್ಪಿಸಿದರು.ನೈವೇದ್ಯವನ್ನು ದಾಸರ ಗೋಪಾಳ ಬುಟ್ಟಿಯಲ್ಲಿ ತುಂಬಿಸಿ ಸ್ವಾಮಿಗೆ ಅರ್ಪಿಸುವ ಸಂಪ್ರದಾಯವೂ ನಡೆಯಿತು.
ದೇವಾಲಯದ ಆವರಣದಲ್ಲಿ ಸುಮಾರು 50 ಅಡಿ ಎತ್ತರದ ಐದು ಕಂಬಗಳನ್ನು ನಿಲ್ಲಿಸಲಾಗಿತ್ತು. ಕಂಬಗಳಿಗೆ ಎಣ್ಣೆ, ರಾಳ ಸೇರಿದಂತೆ ಅನೇಕ ಪದಾರ್ಥಗಳನ್ನು ಹಚ್ಚಿ ಜಾರುವಂತೆ ಮಾಡಲಾಗಿತ್ತು. ವತನ್ದಾರರು ಪೂಜೆ ಸಲ್ಲಿಸಿದ ಬಳಿಕ ದೇವಾಸ್ಥಾನದ ಮೇಲಿಂದ ನಾಣ್ಯಗಳನ್ನು ಚಿಮ್ಮುವ ಮೂಲಕ ಕಂಬಾರೋಹಣಕ್ಕೆ ಚಾಲನೆ ನೀಡಲಾಗಿತ್ತು. ಕಂಬ ಏರುವ ಆರೋಹಿಗಳಿಗೆ ಕೆಳಗಿನಿಂದ ಹಾಲೋಕಳಿ ಸಂಪ್ರದಾಯದಂತೆ ಚರ್ಮದ ಚೀಲಗಳಲ್ಲಿದ್ದ ನೀರನ್ನು ಪಿಚಕಾರಿಯಿಂದ (ತಿತ್ಯಾ) ಮೂಲಕ ಸಿಂಪಡಿಸುತ್ತಿದ್ದರು. ಕಂಬದ ತುದಿಯ ಕುಳಿತಿದ್ದ ವ್ಯಕ್ತಿಯು ಕೂಡಾ ಮಡಿಕೆಯಲ್ಲಿದ್ದ ಹಣ್ಣು ಮಿಶ್ರಿತ ನೀರನ್ನು ಆರೋಹಿಗಳ ಮೇಲೆ ಸುರಿಯುತ್ತಿದ್ದರಿಂದ ಕಂಬ ಮತ್ತಷ್ಟು ಜಾರುವಂತಾಗಿತ್ತು. ಪರಿಣಾಮ ಕಂಬ ಏರಲು ಯತ್ನಿಸುತ್ತಿದ್ದವರು ಪದೇಪದೇ ಜಾರಿ ಕೆಳಗೆ ಬೀಳುತ್ತಿದ್ದ ದೃಶ್ಯ ನೋಡುಗರಲ್ಲಿ ಕುತೂಹಲ ಮೂಡಿಸಿತು.