ವಿಭೂತಿಹಳ್ಳಿ: ಗ್ರಾಮಸ್ಥರ ನೀರಿನ ದಾಹ ತಣಿಸಿದ ಅಧಿಕಾರಿಗಳು

KannadaprabhaNewsNetwork |  
Published : Mar 27, 2024, 01:01 AM IST
ಮಾ.24ರಂದು ಕನ್ನಡಪ್ರಭದಲ್ಲಿ ಪ್ರಕಟವಾದ ವರದಿ. | Kannada Prabha

ಸಾರಾಂಶ

ಕನ್ನಡಪ್ರಭದಲ್ಲಿ ಮಾ.24 ರಂದು "ವಿಭೂತಿಹಳ್ಳಿಗೆ ನೀರಿನ ಹಾಹಾಕಾರ ಚುನಾವಣೆ ಬಹಿಷ್ಕಾರ " ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾದ ಹಿನ್ನೆಲೆ, ಆಡಳಿತ ವರ್ಗ ಎಚ್ಚೆತ್ತಿದೆ. ಗ್ರಾಮಕ್ಕೆ ಕುಡಿವ ನೀರಿನ ವ್ಯವಸ್ಥೆ, ನೀರು ಪೋಲಾಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಹಾಪುರ

ತಾಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆಯಿಂದ ಒಂದು ಹನಿ ನೀರಿಗಾಗಿ ಗ್ರಾಮಸ್ಥರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದು, ಕನ್ನಡಪ್ರಭ ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಪ್ರಕಟವಾದ ಹಿನ್ನೆಲೆ ಎಚ್ಚೆತ್ತ ಸಂಬಂಧಿಸಿದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದಾರೆ.

ಕುಡಿವ ನೀರಿಲ್ಲದೆ ಜನ-ಜಾನುವಾರುಗಳಿಗೆ ತೀವ್ರ ತೊಂದರೆಯಾಗಿತ್ತು. ಒಂದು ಕೊಡ ನೀರಿಗಾಗಿ ರಾತ್ರಿಯಿಡೀ ಪಾಳೆ ನಿಂತು ತರಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮದಲ್ಲಿನ ಬೋರವೆಲ್ ಕೆಟ್ಟು ನಿಂತಿದ್ದವು. ಮಾ.24ರಂದು ಕನ್ನಡಪ್ರಭದಲ್ಲಿ "ವಿಭೂತಿಹಳ್ಳಿಗೆ ನೀರಿನ ಹಾಹಾಕಾರ, ಚುನಾವಣೆ ಬಹಿಷ್ಕಾರ " ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾದ ಬೆನ್ನಲ್ಲೇ ಅಧಿಕಾರಿಗಳು ಸ್ಪಂದಿಸಿದ್ದಾರೆ.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ರಸ್ತಾಪುರ ಅಧಿಕಾರಿಗಳು ಸೋಮವಾರದಂದು ವಿಭೂತಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಎಲ್ಲಾ ಕೊಳವೆಬಾವಿಗಳನ್ನು ಮತ್ತು ಕಿರು ನೀರು ಸರಬರಾಜು ಬೋರವೆಲ್ ಗಳ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ.

ಹೋಳಿ ಹುಣ್ಣಿಮೆ ನಿಮಿತ್ತ ಬೋರವೆಲ್ ಸಾಮಾನುಗಳ ಮಾರಾಟ ಅಂಗಡಿ ಬಂದ್ ಮಾಡಿರುವುದರಿಂದ ಅಂಗಡಿ ತೆರೆದ ತಕ್ಷಣ ಹೊಸ ಮೋಟಾರ್ ಖರೀದಿಸಿ, ಕಿರು ನೀರು ಸರಬರಾಜು ಕೊಳವೆ ಬಾವಿಗೆ ಅಳವಡಿಸಲಾಗುವುದೆಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.

ನೀರು ಮಿತವಾಗಿ ಬಳಸಿ. ಮಳೆ ಕೊರತೆಯಿಂದ ಅಂತರ್ಜಲ ಕುಸಿತ ಕಂಡಿದೆ. ಬರಗಾಲ ಬೇರೆ ಆವರಿಸಿದೆ, ಜನರು ಅವಶ್ಯವಿರುವಷ್ಟೆ ನೀರು ಬಳಕೆ ಮಾಡಬೇಕು. ಅನಾವಶ್ಯವಾಗಿ ನೀರು ಪೋಲಾದಂತೆ ಎಚ್ಚರಿಕೆ ವಹಿಸಬೇಕೆಂದು ತಹಸೀಲ್ದಾರ್ ಉಮಾಕಾಂತ ಹಳ್ಳೆ ಮನವಿ ಮಾಡಿದರು.

ಬೇಸಿಗೆ ಇರುವುದರಿಂದ ನಮ್ಮ ಗ್ರಾಮಕ್ಕೆ ನೀರಿನ ಸಮಸ್ಯೆ ಉಲ್ಬಣವಾಗಿತ್ತು. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಕನ್ನಡಪ್ರಭ ಪತ್ರಿಕೆ ನಮ್ಮೂರಿನ ನೀರಿನ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿತು. ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ದೌಡಾಯಿಸಿ ನೀರಿನ ಸಮಸ್ಯೆ ಬಗೆಹರಿಸಿದ್ದಾರೆ. ಕನ್ನಡಪ್ರಭಕ್ಕೆ ಗ್ರಾಮಸ್ಥರ ಪರವಾಗಿ ಕೃತಜ್ಞತೆಗಳು.

ಪರ್ವತ ರೆಡ್ಡಿ, ವಿಭೂತಿಹಳ್ಳಿ ಗ್ರಾಮಸ್ಥ.

PREV

Recommended Stories

ಸರ್ಕಾರಿ ಯೋಜನೆ ತಲುಪಲು ‘ಅರಿವು’ ಕಾರ್ಯಕ್ರಮ ಸಹಕಾರಿ: ಯಶ್ಪಾಲ್‌ ಸುವರ್ಣ
ತಾಯಿ ಹೆಸರಿನಲ್ಲಿ ಒಂದು ಸಸಿ ಹಾಗೂ ಬೀಜದುಂಡೆ ಕಾರ್ಯಕ್ರಮಕ್ಕೆ ಚಾಲನೆ