- ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸಂತ್ರಸ್ಥರ ಸಭೆಯಲ್ಲಿ ಆಗ್ರಹ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡು ಬಂದ ನೂರಾರು ಕುಟುಂಬಗಳು ಈಗ ಆತಂಕದಲ್ಲಿವೆ. ಇತ್ತ ನೆಲೆ ಕಳೆದುಕೊಳ್ಳುವ ಭೀತಿ, ಅತ್ತ ಕಾಡು ಪ್ರಾಣಿಗಳ ಹಾವಳಿ. ಸರ್ಕಾರ ಅಧಿಕಾರಿ ಗಳು ಎಲ್ಲವನ್ನು ಕಾನೂನು ಪರಿಮಿತಿಯಲ್ಲಿ ಕಾಣುವುದನ್ನು ಬಿಟ್ಟು ಮಾನವೀಯ ನೆಲೆಗಟ್ಟಿನಲ್ಲಿ ಕಾಣಬೇಕು ಎಂದು ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ಪುನರ್ ವಸತಿ ಹೋರಾಟ ಸಮಿತಿ ಅರುಣ್ ಕುಮಾರ್ ಹೇಳಿದರು.
ಪಟ್ಟಣದ ಈಡಿಗರ ಭವನದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸಂತ್ರಸ್ಥರ ಪುನರ್ ವಸತಿ ಹೋರಾಟ ಸಮಿತಿ ಸಭೆಯಲ್ಲಿ ಮಾತನಾಡಿ 2005 ರಿಂದ ಹೋರಾಟ ನಡೆಸುತ್ತಲೇ ಬರಲಾಗುತ್ತಿದೆ. ಈ ಹಿಂದೆ ನಡೆದ ಹೋರಾಟದ ದಿಕ್ಕು ತಪ್ಪಿಸಲಾಯಿತು. ನಕ್ಸಲ್ ಹಣೆಪಟ್ಟಿ ಕಟ್ಟಿ ಹೋರಾಟಗಾರರನ್ನು ಸಾಕಷ್ಟು ಹಿಂಸೆ ನೀಡಲಾಯಿತು ಎಂದು ಹೇಳಿದರು.ಕುದುರೆಮುಖ ವ್ಯಾಪ್ತಿ ಮೂಲನಿವಾಸಿಗಳು ಆತಂಕದಲ್ಲಿದ್ದು ಅವರಿಗೆ ಸೂಕ್ತ ಪರಿಹಾರ ನೀಡಬೇಕು. ಸರ್ಕಾರ ನೀಡುವ 3-4 ಲಕ್ಷ ಪರಿಹಾರ ಪಡೆದು ಹೊರಹೋಗಿ ಬದುಕಲು ಸಾದ್ಯವಿಲ್ಲ. ಈಗಿನ ಮಾರುಕಟ್ಟೆ ಬೆಲೆಯಂತೆ ಹರಿಹಾರ ನೀಡಬೇಕು. ಸರ್ಕಾರ, ಅಧಿಕಾರಿಗಳಲ್ಲಿ ನಿರ್ಲಕ್ಷ ಧೋರಣೆ ಇದೆ. 2013ರ ಭೂ ಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡಿ. ಸರ್ಕಾರ ಜನರ ಸಮಸ್ಯೆ ಗಂಭೀರವಾಗಿ ಪರಿಗಣಿಸಬೇಕು. ಪುನರ್ ವಸತಿ ನೀಡಬೇಕು ಎಂದರು.
ಈ ಭಾಗದಲ್ಲಿರುವ ಸುಮಾರು 432 ಕುಟುಂಬಗಳಲ್ಲಿ ಬಹುತೇಕ ಬಡ ಕುಟುಂಬಗಳಾಗಿವೆ. ಈಗ ಸ್ವಇಚ್ಛೆ ಯಿಂದ ಹೋಗ ಬಹುದು ಎಂಬ ದ್ವಂದ್ವ ನಿಲುವಿನ ಮೂಲಕ ಅವರ ಬದುಕು ಅಡಕತ್ತರಿಯಲ್ಲಿದೆ. 2005ರಿಂದ ಹಂತ ಹಂತವಾಗಿ ಒಕ್ಕಲೆಬ್ಬಿಸ ಲಾಗುತ್ತಿದೆ. ಹೆಬ್ಬೆ,ವರಾಹಿ ಸಂತ್ರಸ್ಥರಿಗೆ ಪುನರ್ ವಸತಿ, ಪರಿಹಾರ,ಉದ್ಯೋಗ ನೀಡಲಾಗಿತ್ತು.ಆದರೆ ಈ ವ್ಯಾಪ್ತಿ ಜನರಿಗೆ ಏಕೆ ನೀಡಲಾಗುತ್ತಿಲ್ಲ. ಕೇಂದ್ರ,ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಪುನರ್ವಸತಿ ಕಲ್ಪಿಸಿ ಒಂದೇ ಬಾರಿ ಎಲ್ಲರನ್ನು ಒಕ್ಕಲೆಬ್ಬಿಸಬೇಕು. ಹೋರಾಟ ಉಗ್ರ ಸ್ವರೂಪ ತಲುಪಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಸಮಿತಿ ಅಧ್ಯಕ್ಷ ಸುನೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ಕಾರ ಈ ಭಾಗದ ಜನರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕೆಲದಿನಗಳ ಹಿಂದೆ ಇಬ್ಬರನ್ನು ಆನೆ ಕೊಂದುಹಾಕಿದ ಘಟನೆ ದುರಾದೃಷ್ಟಕರ ಎಂದರು.
ಶೃಂಗೇರಿ ಪಟ್ಟಣದ ಈಡಿಗರ ಭವನದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸಂತ್ರಸ್ಥರ ಪುನರ್ ವಸತಿ ಹೋರಾಟ ಸಮಿತಿ ಸಭೆ ನಡೆಯಿತು.