ಕನ್ನಡಪ್ರಭ ವಾರ್ತೆ, ಮಂಡ್ಯ
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮೋತ್ಸವ ಆಚರಿಸಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪರ ಘೋಷಣೆ ಕೂಗಿದರು.
ಬಿಜೆಪಿ ರಾಜ್ಯ ಕಾರ್ಯಕಾರಣಿ ಮಂಡಳಿ ಸದಸ್ಯ ಡಾ.ಸಿದ್ದರಾಮಯ್ಯ ಮಾತನಾಡಿ, ಹದಿನೈದು ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ನೆಲೆಯೂರಿದ್ದ ಮಮತಾ ಬ್ಯಾನರ್ಜಿಯ ಜನವಿರೋಧಿ ಸರ್ಕಾರವನ್ನು ಕಿತ್ತೊಗೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಆ ರಾಜ್ಯದ ಜನರು ಆಡಳಿತದಲ್ಲಿ ಹೊಸ ಬದಲಾವಣೆಯನ್ನು ಬಯಸಿ ಬಿಜೆಪಿಗೆ ಬಹುಮತ ನೀಡಿದ್ದಾರೆ. ಜನಪರ ಆಡಳಿತಕ್ಕಾಗಿ ಬಿಜೆಪಿ ಕೈಹಿಡಿದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.ಅಸ್ಸಾಂ, ಪುದುಚೇರಿಯಲ್ಲೂ ಬಿಜೆಪಿಗೆ ಬಹುಮತ ದೊರಕಿದೆ. ಕಾಂಗ್ರೆಸ್ ದೇಶದಲ್ಲಿ ಧೂಳೀಪಟವಾಗುತ್ತಿದೆ. ಅತಿ ಶೀಘ್ರದಲ್ಲೇ ಕಾಂಗ್ರೆಸ್ ಮುಕ್ತ ಭಾರತವಾಗುವುದು ನಿಶ್ಚಿತ. ಮೋದಿ ಪರವಾದ ಅಲೆ ಇನ್ನೂ ದೇಶದಲ್ಲಿ ಗಟ್ಟಿಯಾಗಿ ಉಳಿದಿದೆ. ದೇಶದ ಸುಭದ್ರ ಆಡಳಿತಕ್ಕೆ ಬಿಜೆಪಿ ಅಗತ್ಯವಾಗಿದೆ ಎಂದರು.
೨೯೩ ಸದಸ್ಯ ಬಲದ ವಿಧಾನಸಭೆಗೆ ಬಹುಮತಕ್ಕೆ ೧೪೮ ಸ್ಥಾನಗಳ ಅಗತ್ಯವಿದೆ. ಆದರೆ, ಈಗಾಗಲೇ ಬಿಜೆಪಿ ೧೮೦ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಸರ್ಕಾರ ರಚಿಸಲು ಸಜ್ಜಾಗುತ್ತಿದೆ. ಸಿಎಂ ಆಯ್ಕೆಗೆ ಕಸರತ್ತು ನಡೆಯುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ರೈತಮೋರ್ಚಾ ಕಾರ್ಯದರ್ಶಿ ಎಚ್.ಆರ್.ಅಶೋಕ್ ಕುಮಾರ್, ಮಾಧ್ಯಮ ವಕ್ತಾರ ಸಿ.ಟಿ.ಮಂಜುನಾಥ್, ನಾಗನಂದ್, ನಗರಾಧ್ಯಕ್ಷ ಪ್ರಸನ್ನ ಹೊಸಹಳ್ಳಿ, ರಮೇಶ್ ವಿಶ್ವಕರ್ಮ, ಭೀಮೇಶ್, ಚಾಮರಾಜು, ರಾಶಿಸಿದ್ದರಾಜು, ಶಿವಕುಮಾರ್ ಆರಾಧ್ಯ, ಹೊಸಹಳ್ಳಿ ಶಿವು, ಯೋಗೇಶ್ ಮತ್ತಿತರರಿದ್ದರು.