ಮಾತೃ ದೇವೋ ಭವದಂತಹ ಅನೇಕ ವೇದ, ಮನುಸ್ಮೃತಿ ಮಾತುಗಳು ನಮ್ಮ ದೇಶದಲ್ಲಿ ಸ್ತ್ರೀಯರಿಗೆ ಕೊಟ್ಟಿರುವ ಮಹತ್ವವನ್ನು ತಿಳಿಸುತ್ತವೆ ಎಂದು ಕಟೀಲು ಶ್ರೀ ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಮೂಲ್ಕಿ: ಮಾತೃ ದೇವೋ ಭವದಂತಹ ಅನೇಕ ವೇದ, ಮನುಸ್ಮೃತಿ ಮಾತುಗಳು ನಮ್ಮ ದೇಶದಲ್ಲಿ ಸ್ತ್ರೀಯರಿಗೆ ಕೊಟ್ಟಿರುವ ಮಹತ್ವವನ್ನು ತಿಳಿಸುತ್ತವೆ ಎಂದು ಕಟೀಲು ಶ್ರೀ ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿ ಕಾಲೇಜಿನಲ್ಲಿ ಜರುಗಿದ ಕಾಲೇಜಿನ ವಿದ್ಯಾರ್ಥಿ ಪರಿಷತ್‌ನ ಪದಗ್ರಹಣ ಹಾಗೂ ಕೌಶಲ್ಯಾಧಾರಿತ ಪ್ರಮಾಣಪತ್ರ ಕೋರ್ಸ್‌ಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ದೈಹಿಕವಾಗಿ ಮಹಿಳೆ ಪುರುಷರಿಗಿಂತ ಅಬಲೆಯಾಗಿರಬಹುದು. ಹಾಗಾಗಿ ಬಾಲ್ಯದಲ್ಲಿ ತಂದೆಯಿಂದ, ಯೌವನದಲ್ಲಿ ಗಂಡನಿಂದ, ವೃದ್ಧಾಪ್ಯದಲ್ಲಿ ಮಕ್ಕಳಿಂದ ರಕ್ಷಿಸಬೇಕಾದವಳು ಸ್ತ್ರೀ. ಸ್ತ್ರೀಯನ್ನು ಗೌರವಿಸುವ ಮನೆಯಲ್ಲಿ ದೇವತೆಗಳು ವಾಸವಾಗಿರುತ್ತಾರೆ. ಇಡೀ ಕುಟುಂಬವನ್ನು ನಿರ್ವಹಿಸುವ, ಗೌರವವನ್ನು ಹೆಚ್ಚಿಸುವ ಆಕೆಗೆ ದೇವತೆಯ ಸ್ಥಾನ ನೀಡಿದ ಸಂಸ್ಕೃತಿ ನಮ್ಮದು ಎಂದು ಕಟೀಲು ಶ್ರೀ ದೇವಳದ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಕೊಡೆತ್ತೂರು ಗುತ್ತು ಕಿಶೋರ್ ಕುಮಾರ್ ಶೆಟ್ಟಿ ನೂತನ ಕೋರ್ಸ್‌ಗಳನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಕಾಲೇಜು ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲೂ ಹೊಸ ಕೋರ್ಸ್‌ಗಳು ಹಾಗೂ ಹೆಚ್ಚುವರಿ ವಿಭಾಗಗಳನ್ನು ಆರಂಭಿಸುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳಿಗೆ ಸ್ಪಂದಿಸಲು ಆಡಳಿತ ಮಂಡಳಿ ಬದ್ಧವಾಗಿದೆ ಎಂದರು.
ವಿದ್ಯಾರ್ಥಿ ಪರಿಷತ್ತಿಗೆ ತೃತೀಯ ಬಿಕಾಂ ವಿದ್ಯಾರ್ಥಿನಿಯರಾದ ಮೇಘನಾ, ಪ್ರೀತಿ, ಶ್ರಾವ್ಯ ಮಲ್ಯ ಹಾಗೂ ಶಮಿತಾ ಅವರನ್ನು ಅಧ್ಯಕ್ಷೆ, ಉಪಾಧ್ಯಕ್ಷೆ, ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ನಾಮನಿರ್ದೇಶನ ಮಾಡಲಾಯಿತು.
ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ, ಬಿಪಿನ್‌ಚಂದ್ರ ಶೆಟ್ಟಿ ಕೊಡೆತ್ತೂರು ಗುತ್ತು, ದಯಾನಂದ ಮಾಡ, ಮಿಥುನ ಕೊಡೆತ್ತೂರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಪೋಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಭಾರತಿ ಭಟ್, ಕೌಶಲ್ಯಾಧಾರಿತ ಪ್ರಮಾಣಪತ್ರ ಕೋರ್ಸ್‌ಗಳ ಸಂಪನ್ಮೂಲ ವ್ಯಕ್ತಿಗಳಾದ ಸಿಎ ಅಶೋಕ್ ರಾವ್, ಸಿಎ ಚರಣರಾಜ್ ಹಾಗೂ ರವಿರಾಜ್ ಪೂಜಾರಿ, ಸಿಬ್ಬಂದಿ ಕಾರ್ಯದರ್ಶಿ ಡಾ. ಪದ್ಮನಾಭ ಮರಾಠೆ ಹಾಗೂ ಕಂಪ್ಯೂಟರ್ ತರಬೇತುದಾರರಾದ ಹರ್ಷಿತಾ ಶೆಟ್ಟಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ. ವಿಜಯ್ ವಿ. ವಿದ್ಯಾರ್ಥಿಗಳ ಉದ್ಯೋಗಾವಕಾಶ ಹಾಗೂ ಕೌಶಲ್ಯಾಭಿವೃದ್ಧಿಗೆ ಪೂರಕವಾಗಿ ಪರಿಚಯಿಸಲಾದ ವಿವಿಧ ಕೋರ್ಸ್‌ಗಳ ವಿವರಗಳನ್ನು ನೀಡಿದರು.ಪ್ರಥಮ ಬಿಕಾಂ. ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯುರಿಟಿ ಪ್ರಮಾಣಪತ್ರ ಕೋರ್ಸ್, ದ್ವಿತೀಯ ಬಿಕಾಂ ವಿದ್ಯಾರ್ಥಿಗಳಿಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪ್ರಮಾಣಪತ್ರ ಕೋರ್ಸ್ ಹಾಗೂ ತೃತೀಯ ಬಿಕಾಂ ವಿದ್ಯಾರ್ಥಿಗಳಿಗೆ ಬಿಸಿನೆಸ್ ಡೇಟಾ ಅನಾಲಿಟಿಕ್ಸ್, ಝೋಹೋ ಬುಕ್ಸ್ ಮೂಲಕ ಅಕೌಂಟಿಂಗ್ ಅಪ್ಲಿಕೇಶನ್ ಮತ್ತು ಪ್ರಾಕ್ಟೀಸ್ ಹಾಗೂ ವಿನ್‌ಮ್ಯಾನ್ ತೆರಿಗೆ ನಿರ್ವಹಣಾ ತಂತ್ರಾಂಶ ಮೂಲಕ ನೇರ ತೆರಿಗೆ ಮತ್ತು ಜಿಎಸ್‌ಟಿ ಅಪ್ಲಿಕೇಶನ್ ಮತ್ತು ಪ್ರಾಕ್ಟೀಸ್ ತರಬೇತಿ ಪ್ರಮಾಣಪತ್ರ ಕೋರ್ಸ್‌ಗಳನ್ನು ಪರಿಚಯಿಸಲಾಗಿದ್ದು, ಜೊತೆಗೆ ಎಲ್ಲ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರ್ಕಾರದ ಪ್ರಾಯೋಜಿತ ಸ್ವಯಂ ಮತ್ತು ಎನ್‌ಪಿಟಿಇಎಲ್ ಚಿತ್ರ ಆನ್‌ಲೈನ್ ಕೋರ್ಸ್‌ಗಳು ಹಾಗೂ ಕ್ಯಾನ್ವಾಸ್ ತಂತ್ರಾಂಶ ತರಬೇತಿಯನ್ನೂ ಒದಗಿಸಲಾಗುತ್ತಿದೆ. ಈ ಎಲ್ಲ ಕೌಶಲ್ಯಾಧಾರಿತ ಕೋರ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ಡಾ. ವಿಜಯ್ ತಿಳಿಸಿದರು.ವಿದ್ಯಾರ್ಥಿ ಕಲ್ಯಾಣಾಧಿಕಾರಿ ಅಶ್ವಿತಾ ವಿ. ಶೆಟ್ಟಿ ಪ್ರಮಾಣವಚನ ಬೋಧಿಸಿದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕಿ ಪೂಜಾ ಯು. ಕಾಂಚನ್ ವಂದಿಸಿದರು. ಪೃಥ್ವಿ ಎಚ್. ಪೂಜಾರಿ, ಆಕಾಶ್, ಮನೋಜ್ ಪೂಜಾರಿ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.