ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಅವಹೇಳನ ಮಾಡಿರುವ ವಿಡಿಯೋವನ್ನು ವಾಟ್ಸಪ್ ಸ್ಟೇಟಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆಂಬ ಆರೋಪದ ಮೇಲೆ ಗ್ರಾಮ ಪಂಚಾಯಿತಿ ಸಿಬ್ಬಂದಿಯೊಬ್ಬರನ್ನು ವಜಾಗೊಳಿಸಲು ನಿರ್ಣಯ ಕೈಗೊಂಡ ಘಟನೆ ನೆಲ್ಯಾಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆದಿದೆ.ನೆಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಲಾಂ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು.
ಗ್ರಾಮ ಪಂಚಾಯಿತಿ ಸಿಬ್ಬಂದಿ ಗಿರೀಶ್ ಅವರು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಅವಮಾನಿಸುವ ವಿಡಿಯೋವೊಂದನ್ನು ಅವರ ವಾಟ್ಸಪ್ ಸ್ಟೇಟಸ್‌ನಲ್ಲಿ ಹಾಕಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಹಾಗೂ ಎನ್‌ಎಸ್‌ಯುಐ ಸಂಘಟನೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿರುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಯಿತು.ಗಿರೀಶ್ ಅವರ ವಿರುದ್ಧ ಇನ್ನಿತರ ಆರೋಪಗಳೂ ಇದ್ದು ಅವರನ್ನು ಕೆಲಸದಿಂದ ವಜಾಗೊಳಿಸುವ ನಿರ್ಣಯ ಕೈಗೊಳ್ಳುವಂತೆ ಅಧ್ಯಕ್ಷ, ಉಪಾಧ್ಯಕ್ಷರು ಸೇರಿ ಆಡಳಿತರೂಢ ಪಕ್ಷದ ಏಳು ಮಂದಿ ಸದಸ್ಯರು ಒತ್ತಾಯಿಸಿದರು. ಬಳಿಕ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಆರೋಪ ಕೇಳಿ ಬಂದಾಕ್ಷಣ ಯಾವುದೇ ಸತ್ಯಶೋಧನೆ ನಡೆಸದೆ, ಸಿಬ್ಬಂದಿ ಅಭಿಪ್ರಾಯವನ್ನೂ ಪಡೆಯದೆ ಸಿಬ್ಬಂದಿಯನ್ನು ಏಕಾಏಕಿ ವಜಾಗೊಳಿಸುವುದು ನ್ಯಾಯಸಮ್ಮತವಲ್ಲ. ಈ ಕಾರಣಕ್ಕೆ ಸಿಬ್ಬಂದಿಯನ್ನು ವಜಾಗೊಳಿಸುವುದಕ್ಕೆ ತಮ್ಮ ಪ್ರಬಲ ವಿರೋಧವಿದೆ ಎಂದು ಸಭೆಯಲ್ಲಿದ್ದ ಬಿಜೆಪಿ ಬೆಂಬಲಿತ ನಾಲ್ವರು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆಯೂ ನಿರ್ಣಯ ಕೈಗೊಳ್ಳಲಾಯಿತು.ಸಭೆಯಲ್ಲಿ ಉಪಾಧ್ಯಕ್ಷೆ ರೇಷ್ಮಾ ಶಶಿ, ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಅಬ್ದುಲ್ ಜಬ್ಬಾರ್, ಪ್ರಕಾಶ್ ಪೂಜಾರಿ, ಮಹಮ್ಮದ್ ಇಕ್ಬಾಲ್, ಉಷಾ ಜೋಯಿ, ಚೇತನಾ, ಜಯಂತಿ ಮಾದೇರಿ, ಜಯಲಕ್ಷ್ಮಿಪ್ರಸಾದ್, ಪುಷ್ಪ ಪಡುಬೆಟ್ಟು ಉಪಸ್ಥಿತರಿದ್ದರು. ಪಿಡಿಒ ಮೋಹನ್ ಕುಮಾರ್, ಲೆಕ್ಕ ಸಹಾಯಕ ಅಂಗು ಕಲಾಪ ನಡೆಸಿದರು.
.