ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಪೆರ್ಣಂಕಿಲದ ಶ್ರೀ ಮಹಾಲಿಂಗೇಶ್ವರ- ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಪುನಃಪ್ರತಿಷ್ಠೆ, ಸಹಸ್ರ ಕಲಶ ಬ್ರಹ್ಮಕುಂಭಾಭಿಷೇಕದ 9ನೇ ದಿನ ಭಾನುವಾರ ಬೆಂಗಳೂರಿನ ಶ್ರೀ ವಿದ್ಯಾಭೂಷಣರಿಂದ ನಡೆದ ಭಕ್ತಿ ರಸಮಂಜರಿ ಕಾರ್ಯಕ್ರಮ ನೆರೆದ ಭಕ್ತರು ಭಕ್ತಿಯಲ್ಲಿ ತಲ್ಲೀನರಾಗುವಂತೆ ಮಾಡಿತು.ಕ್ಷೇತ್ರವನ್ನು ಸ್ತುತಿಸುವ ಸುರವಂದ್ಯ ಕರಿವದನ ಜಯತು ವಿಘ್ನೇಶ ಪೆರಣಂಕಿಲ ವಾಸ ಎಂಬ ಕೃತಿಯೊಂದಿಗೆ ಆರಂಭವಾದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಕಾರ್ಯಕ್ರಮದಲ್ಲಿ ವಯಲಿನ್‌ನಲ್ಲಿ ಪ್ರಾದೇಶಾಚಾರ್, ಮೃದಂಗದಲ್ಲಿ ಎ.ಎಸ್.ಎನ್.ಭಟ್, ಘಟಂನಲ್ಲಿ ರಘುನಂದನ್ ಬಿ.ಎಸ್. ಸಹಕರಿಸಿದರು.ಇದಕ್ಕೆ ಮೊದಲು ಸ್ಥಳೀಯ ಉದಯೋನ್ಮುಖ ಪ್ರತಿಭೆ ಸಾಕ್ಷಿ ಭಟ್ ಅವರಿಂದ ಭರತನಾಟ್ಯ ಪ್ರಸ್ತುತಿಗೊಂಡಿತು. ಸುನಿತಾ ನಾಯಕ್ ಮತ್ತು ಉಮೇಶ್ ನಾಯಕ್ ಪೆರ್ಣಂಕಿಲ ಕಾರ್ಯಕ್ರಮವನ್ನು ಸಂಯೋಜಿಸಿದರು.ಮುಂಜಾನೆಯಿಂದ ದೇವಳದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ, ಕ್ಷೇತ್ರದ ತಂತ್ರಿಗಳಾದ ಪುತ್ತೂರು ಮಧುಸೂಧನ ತಂತ್ರಿಗಳ ನೇತೃತ್ವದಲ್ಲಿ ಪುಣ್ಯಾಹವಾಚನ, ಗಣಯಾಗ, ಮಹಾಗಣಪತಿ ದೇವರ ತತ್ವಹೋಮ, ತತ್ವ ಕಲಶಾಭಿಷೇಕ, ವಿಶೇಷ ಶಾಂತಿ ಹೋಮ, ಪರಿವಾರ ದೇವರಿಗೆ ಕಲಶಾಭಿಷೇಕ, ಮಹಾಅನ್ನಸಂತರ್ಪಣೆ, ಮಧ್ಯಾಹ್ನ ಗಣಪತಿ ದೇವರಿಗೆ ಪಂಚವಿಶಂತಿ ದ್ರವ್ಯಾತ್ಮಕ ಏಕೋತ್ತರ ಸಹಸ್ರ ಕಲಶಾಧಿವಾಸ, ಅಧಿವಾಸ ಹೋಮ, ಶ್ರೀ ಮಹಾಲಿಂಗೇಶ್ವರ ದೇವರ ಮೂಲಬಿಂಬ ಶಯ್ಯಾಧಿವಾಸ, ಮಂಡಲಪೂಜೆ, ಶಿರಸ್ತತ್ವ ಹೋಮ, ನವಕುಂಡ ಅಧಿವಾಸ ಹೋಮ, ರತ್ನನ್ಯಾಸ, ಪೀಠಾಧಿವಾಸ, ಗರ್ಭಗೃಹಾಧಿವಾಸ, ರಾತ್ರಿ ಪೂಜೆ, ಶಯ್ಯಾ ಕಲ್ಪನೆ ಇತ್ಯಾದಿ ಅನುಷ್ಠಾನಗಳನ್ನು ವಿಧಿವತ್ತಾಗಿ ನೇರವೆರಿಸಲಾಯಿತು.ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿದ್ವಾನ್ ಪೆರ್ಣಂಕಿಲ ಹರಿದಾಸ ಭಟ್, ಪ್ರ.ಕಾರ್ಯದರ್ಶಿ ಶ್ರೀಶ ನಾಯಕ್ ಪೆರ್ಣಂಕಿಲ, ಮಠದ ಕಾ.ನಿ.ಅಧಿಕಾರಿ ಸುಬ್ರಹ್ಮಣ್ಯ ಭಟ್ ಸಗ್ರಿ ಮತ್ತಿತರರು ಉಪಸ್ಥಿತರಿದ್ದರು.