ಕನ್ನಡಪ್ರಭ ವಾರ್ತೆ ಮೈಸೂರುಭವ್ಯ ಭಾರತದ ಆರ್ಥಿಕ ಅಭಿವೃದ್ಧಿಗೆ ಭವಿಷ್ಯದ ವಕೀಲರಾದ ನಿಮ್ಮೆಲ್ಲರ ಕೊಡುಗೆ ನಿರ್ಣಾಯಕವಾಗಿರುತ್ತದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಗುರುವಾರ ಆಯೋಜಿಸಿದ್ದ ವಿದ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಕೀಲ ವೃತ್ತಿಯು ಗ್ರಾಹಕರ, ಕಾರ್ಪೋರೇಟ್ ವಲಯದ, ಅಪರಾಧಿಕ ಸಂತ್ರಸ್ತರ ಹಾಗೂ ಒಟ್ಟಾರೆ ಸಮಾಜದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.ವಿಕಸಿತ್ ಭಾರತ್ ಮಿಷನ್ ಅಡಿಯಲ್ಲಿ 2047ಕ್ಕೆ ಭಾರತವು ಸಂಪೂರ್ಣ ಸಮಗ್ರ ಅಭಿವೃದ್ಧಿ ಹೊಂದಲಿದೆ. ನಿಜವಾದ ಆರ್ಥಿಕ ಅಭಿವೃದ್ಧಿ ಎಂದರೆ ಸಮಾಜದ ಸರ್ವಾಂಗೀಣ ಅಭಿವೃದ್ಧಿ. ಆ ನಿಟ್ಟಿಯಲ್ಲಿ ರಾಷ್ಟ್ರದ ಆರ್ಥಿಕ ಅಭಿವೃದ್ಧಿಯಲ್ಲಿ ಕಾನೂನಿನ ಪಾತ್ರ ಸಹ ಬಹಳ ಮಹತ್ವ ಪೂರ್ಣವಾದದ್ದು ಹಾಗೂ ಇತರ ವೃತ್ತಿಗಳಲ್ಲಿ ಇರುವಂತೆ ವಕೀಲ ವೃತ್ತಿಯಲ್ಲಿಯೂ ಪ್ರಾಮಾಣಿಕತೆ, ಪಾರದರ್ಶಕತೆ ತುಂಬಾ ಅತ್ಯವಶ್ಯಕ ಎಂದರು.ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಅಂಕಗಳಿಗಿಂತ ಪ್ರಾಯೋಗಿಕ ಹಾಗೂ ಕೌಶಲ್ಯಭರಿತ ಜ್ಞಾನ ಬಹಳ ಮುಖ್ಯ. ವ್ಯಕ್ತಿಯ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಮೂರು ಮುಖ್ಯ ಹಂತಗಳಿರುತ್ತದೆ. ಶಿಕ್ಷಕರ ಭೋಧನೆ, ವಿದ್ಯಾರ್ಥಿಗಳ ಆಸಕ್ತಿದಾಯಕವಾದ ಸ್ವಅಧ್ಯಯನ ಹಾಗೂ ಪ್ರಾಯೋಗಿಕ ಅನುಭವಾತ್ಮಕ ಅಧ್ಯಯನವು ವಿದ್ಯಾರ್ಥಿಗಳ ಸರ್ವೋತೋಮುಖ ಅಭಿವೃದ್ಧಿಗೆ ಅತ್ಯವಶ್ಯಕ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ. ವಿಶ್ವನಾಥ್ ಮಾತನಾಡಿ, ವಿದ್ಯೋತ್ಸವ ಕಾರ್ಯಕ್ರಮವು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗಷ್ಟೇ ಸೀಮಿತಗೊಳ್ಳದೆ ಶೈಕ್ಷಣಿಕ ಹಾಗೂ ಕೌಶಲ್ಯದಾಯಕವಾದ ಹಾಗೂ ಸ್ಪರ್ಧಾತ್ಮಕ ಕಾರ್ಯಕ್ರಮಗಳಾದ ಕಕ್ಷಿದಾರರ ಸಂದರ್ಶನ, ತೀರ್ಪು ಬರವಣಿಗೆ, ಚರ್ಚಾ ಸ್ಪರ್ಧೆ, ಲಾ ಕ್ವೀಜ್, ಕಾನೂನು ವಸ್ತು ಪ್ರದರ್ಶನ, ಕಾನೂನು ವಿಷಯಾಧಾರಿತ ನಾಟಕಗಳು, ಪಿಕ್ ಅಂಡ್ ಸ್ಪೀಚ್ ಒಳಗೊಂಡಂತೆ ಇನ್ನೂ ಮುಂತಾದ ಸಾಂಸ್ಕೃತಿಕ ಕ್ರಾರ್ಯಕ್ರಮವನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳ ಸರ್ವೋತೋಮುಖ ಶೈಕ್ಷಣಿಕ ಅಭಿವೃದ್ದಿಗೆ ಪೂರಕವಾಗಿದೆ ಎಂದರು.ಇದೇ ವೇಳೆ ಹಿರಿಯ ವಿದ್ಯಾರ್ಥಿಗಳು ಹಾಗೂ ನೂತನ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಆರ್. ವರುಣಾ ರಾಜ್, ಎನ್. ದೀಪಿಕಾ ಮತ್ತು ಎಂ. ಸೌಂದರ್ಯ ಅವರನ್ನು ಸನ್ಮಾನಿಸಲಾಯಿತು.ಕಾಲೇಜಿನ ಸಿಎಂಸಿ ಅಧ್ಯಕ್ಷ ಎಸ್. ಶಿವಲಿಂಗಯ್ಯ, ಪ್ರಾಂಶುಪಾಲೆ ಡಾ.ಪಿ. ದೀಪು, ಕಾರ್ಯಕ್ರಮದ ಸಂಯೋಜಕರಾದ ಡಾ.ಎ.ಆರ್. ಪ್ರಕೃತಿ, ಡಾ.ಟಿ.ಎಂ. ಪ್ರಶಾಂತ್, ಲಲಿತಾ ಮೊದಲಾದವರು ಇದ್ದರು.