ವಿಜಯ ಮಹಾಂತೇಶ ಬ್ಯಾಂಕ್‌ ಚುನಾವಣೆ ಶಾಂತ

KannadaprabhaNewsNetwork |  
Published : Jan 22, 2025, 12:34 AM IST
ಮತದಾನಕ್ಕೆ ವಿವಿಧ ಜಿಲ್ಲೆ ಮತ್ತು ತಾಲೂಕುಗಳಿಂದ ಆಗಮಿಸಿದ ಸಾವಿರ ಸಾವಿರ ಮತದಾರರು ಮತ್ತು ವಾಹನಗಳು ಚಿತ್ತವಾಡಗಿ ಕ್ರಾಸ್‌ನಿಂದ ಹಿಡಿದು ಶ್ರೀ ವಸ್ತ್ರದ ಕಾಲೇಜು ಮೈದಾನದವರೆಗೆ ಜನಸಾಗರ ಕಂಡುಬಂದಿತು. | Kannada Prabha

ಸಾರಾಂಶ

ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್‌ ನಿರ್ದೇಶಕ ಮಂಡಳಿಗೆ ಭಾನುವಾರ ವಿಎಂಎಸ್‌ಆರ್ ವಸ್ತ್ರದ ಕಾಲೇಜು ಮೈದಾನದಲ್ಲಿ 18 ಸ್ಥಾನದ ಚುನಾವಣೆಗೆ ಶಾಂತಿಯುತ ಮತದಾನ ನಡೆಯಿತು.

ಕನ್ನಡಪ್ರಭ ವಾರ್ತೆ ಹುನಗುಂದ

ಪಟ್ಟಣದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್‌ ನಿರ್ದೇಶಕ ಮಂಡಳಿಗೆ ಭಾನುವಾರ ವಿಎಂಎಸ್‌ಆರ್ ವಸ್ತ್ರದ ಕಾಲೇಜು ಮೈದಾನದಲ್ಲಿ 18 ಸ್ಥಾನದ ಚುನಾವಣೆಗೆ ಶಾಂತಿಯುತ ಮತದಾನ ನಡೆಯಿತು. 38 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್‌ 19 ಸ್ಥಾನಗಳ ಪೈಕಿ ಒಂದು ಸ್ಥಾನ ಈ ಮೊದಲು ಅವಿರೋಧವಾಗಿ ಆಯ್ಕೆಯಾಗಿದೆ. 18 ಸ್ಥಾನಗಳ ಚುನಾವಣೆಯ ಮತದಾನ ಆರಂಭದಲ್ಲಿ ಮಂದಗತಿಯಿಂದ ಸಾಗಿ ಮಧ್ಯಾಹ್ನದ ನಂತರ ಚುರುಕು ಪಡೆದುಕೊಂಡಿತು. ಬ್ಯಾಂಕ್‌ ಪ್ರಧಾನ ಕಚೇರಿ ಸೇರಿದಂತೆ 11 ಶಾಖೆಗಳ ಒಟ್ಟು 23,604 ಸದಸ್ಯರು ಮತದಾನದ ಹಕ್ಕು ಪಡೆದುಕೊಂಡಿದರು. ಅದರಲ್ಲಿ 16,105 (ಶೇ68.23) ಮತದಾರರು ಮತ ಚಲಾಯಿಸಿದ್ದಾರೆ.

ಮತದಾನಕ್ಕೆ ವಿವಿಧ ಜಿಲ್ಲೆ ಮತ್ತು ತಾಲೂಕುಗಳಿಂದ ಆಗಮಿಸಿದ ಸಾವಿರ ಸಾವಿರ ಮತದಾರರು ಮತ್ತು ವಾಹನಗಳು ಚಿತ್ತವಾಡಗಿ ಕ್ರಾಸ್‌ನಿಂದ ಹಿಡಿದು ಶ್ರೀ ವಸ್ತ್ರದ ಕಾಲೇಜು ಮೈದಾನದವರೆಗೆ ಜನಸಾಗರವೋ ಜನಸಾಗರ ಕಂಡುಬಂದಿತು. ಇದರಿಂದ ವಾಹನ ಸವಾರರು ಮತ್ತು ಕಾಲ್ನಡಿಗೆಯಲ್ಲಿ ಹೋಗುವ ಮತದಾರರು ಮತದಾನದ ಸ್ಥಳಕ್ಕೆ ಹೋಗಲು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

38 ಜನ ಅಭ್ಯರ್ಥಿಗಳ ಭವಿಷ್ಯ ಭದ್ರ ಪಡಿಸಿದ ಮತಪೆಟ್ಟಿಗೆಗಳನ್ನು ನ್ಯಾಯಾಲಯದ ತೀರ್ಪಿನವರೆಗೂ ಸೂಕ್ತ ಪೊಲೀಸ್ ಬಂದೂಬಸ್ತ್ ನಲ್ಲಿ ತಾಲೂಕು ಖಜಾನೆ ಇಲಾಖೆಯಲ್ಲಿ ಇರಿಸಲಾಗಿದೆ.

ಗುರುತಿನ ಚೀಟಿ ನೀಡುವಲ್ಲಿ ಗೊಂದಲ

ಮತದಾನ ನಡೆಯುವ ಆವರಣದ ಮುಂಭಾಗದಲ್ಲಿರುವ ಗುರುತಿನ ಚೀಟಿ ವಿತರಿಸುವ ಸ್ಥಳದಲ್ಲಿ ಸಿಬ್ಬಂದಿ ಕೊರತೆ ಮತ್ತು ತಾಂತ್ರಿಕ ಅಡಚಣೆಯಿಂದ ಗುರುತಿನ ಚೀಟಿ ಪಡೆಯುವಲ್ಲಿ ಜನಸಂದಣಿ ಜೊತೆಗೆ ಮತದಾರರು ಪರದಾಡುವ ದೃಶ್ಯ ಕಂಡು ಬಂದಿತು. ಇದರಿಂದ ನೂರಾರು ಜನ ಮತದಾರರು ಮತದಾನದ ಪ್ರಕ್ರಿಯೆಯಿಂದ ಹಿಂದುಳಿದರು.

ಫಲಿತಾಂಶ ವಿಳಂಬ

ಬ್ಯಾಂಕ್‌ಗೆ ಭಾನುವಾರ ನಡೆದ ಮತದಾನದ ಫಲಿತಾಂಶ ವಿಳಂಬವಾಗುವ ಸಾಧ್ಯತೆ ಇದೆ. ಇದಕ್ಕೆ ಪ್ರಮುಖ ಕಾರಣ ಬ್ಯಾಂಕ್‌ ಮತದಾರ ಅಂತಿಮ ಪಟ್ಟಿಯಿಂದ ಕೆಲ ಸದಸ್ಯರ ಹೆಸರನ್ನು ಕೈಬಿಟ್ಟಿದ್ದರಿಂದ ಅವರು ನ್ಯಾಯಾಲಯಕ್ಕೆ ಹೋಗಿ ಮತದಾನದ ಹಕ್ಕು ಪಡೆದುಕೊಂಡು ಅವರು ಸಹ ಮತ ಚಲಾಯಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ಪ್ರಕರಣ ಇತ್ಯರ್ಥ ಆಗುವರೆಗೂ ಮತ ಎಣಿಕೆ ಮತ್ತು ಫಲಿತಾಂಶಕ್ಕಾಗಿ ಕಾಯಬೇಕಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌
2 ದಿನದಲ್ಲಿ 2ನೇ ಬಾರಿ ಸಿದ್ದು ಆಪ್ತ ರಾಜಣ್ಣ- ಡಿಕೆಶಿ ಭೇಟಿ