ಹೊಸಪೇಟೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ನೀಡಿರುವ ಹೇಳಿಕೆ ಖಂಡಿಸಿ ಜನವರಿ 9ರಂದು ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ವಿಜಯನಗರ ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿದ್ದು, ಬಂದ್ ಯಶಸ್ವಿಗೆ ಎಲ್ಲ ಸಂಘ-ಸಂಸ್ಥೆಗಳು ಬೆಂಬಲ ನೀಡಬೇಕು ಎಂದು ಸಮಿತಿಯ ಸಂಚಾಲಕ ಎಂ. ಜಂಬಯ್ಯ ನಾಯಕ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಬಗ್ಗೆ ಅಗೌರವದಿಂದ ಮಾತನಾಡುವ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆಅವಮಾನ ಮಾಡಿದ್ದಾರೆ. ಹಾಗಾಗಿ ಶಾ ಅವರು ಕೂಡಲೇ ರಾಜೀನಾಮೆ ನೀಡಬೇಕು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಕ್ಷಣ ಕ್ರಮ ಕೈಗೊಳ್ಳಬೇಕು. ಅಮಿತ್ ಶಾ ಅವರ ಹೇಳಿಕೆಯನ್ನು ಬಿಜೆಪಿಯವರು ಸಮರ್ಥಿಸಿಕೊಳ್ಳುತ್ತಿದ್ದು, ಈ ಬಗ್ಗೆ ನಾವೆಲ್ಲರೂ ಜಾಗೃತರಾಗಬೇಕು. ಸಂವಿಧಾನ ಉಳಿವಿಗಾಗಿ ಹೋರಾಟಕ್ಕೆ ಮುಂದಾಗಬೇಕು, ಬಿಜೆಪಿ ಹೊರತುಪಡಿಸಿ ಇತರೆ ಎಲ್ಲ ಪ್ರಗತಿಪರ ಸಂಘಟನೆಗಳು, ಇತರೆ ಪಕ್ಷದ ರಾಜಕೀಯ ಮುಖಂಡರು ಭಾಗವಹಿಸಬೇಕು. ಅಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆ ವರೆಗೆ ಬಂದ್ ಇರುತ್ತದೆ ಎಂದರು.ಮುಖಂಡ ಸೋಮಶೇಖರ್ ಬಣ್ಣದಮನೆ ಮಾತನಾಡಿ, ಕೇಂದ್ರ ಸಚಿವ ಅಮಿತ್ ಶಾ ಅವರು ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಅವಿವೇಕದ ಮಾತುಗಳನ್ನು ಆಡಿದ್ದಾರೆ. ಅವರಿಗೆ ಸಂವಿಧಾನದ ಬಗ್ಗೆ ನಂಬಿಕೆ ಇಲ್ಲ. ಸಂವಿಧಾನ ಉಳಿವಿಗಾಗಿ ನಾವು ಒಗ್ಗೂಡಿ ಹೋರಾಟ ಮಾಡಬೇಕು. ಜಿಲ್ಲೆಯ ಎಲ್ಲ ತಾಲೂಕು, ಹೋಬಳಿ ಕೇಂದ್ರಗಳಲ್ಲೂ ಬಂದ್ ನಡೆಯಲಿದೆ. ಈಗಾಗಲೇ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ಸಂಘಟನೆಗಳು ಬಂದ್‌ಗೆ ಬೆಂಬಲ ಕೂಡ ನೀಡಿವೆ ಎಂದರು.
ಮುಖಂಡರಾದ ನಿಂಬಗಲ್ ರಾಮಕೃಷ್ಣ, ಬಿಸಾಟಿ ತಾಯಪ್ಪ ನಾಯಕ, ಡಿ. ವೆಂಕಟರಮಣ, ಸಣ್ಣಮಾರಪ್ಪ, ಎನ್. ವೆಂಕಟೇಶ, ಕರಿಯಪ್ಪ ಗುಡಿಮನಿ, ಕೆ.ಎಂ. ಸಂತೋಷ್, ವೈ.ರಾಮಚಂದ್ರ ಬಾಬು ಮತ್ತಿತರರಿದ್ದರು.ಬಂದ್‌ಗೆ ಸಾರಿಗೆ ಒಕ್ಕೂಟದಿಂದ ಬೆಂಬಲಹೊಸಪೇಟೆ:
ಸಂವಿಧಾನ ಸಂರಕ್ಷಣಾ ಸಮಿತಿಯಿಂದ ನಡೆಸಲಾಗುತ್ತಿರುವ ವಿಜಯನಗರ ಜಿಲ್ಲೆ ಬಂದ್ ಸಂಪೂರ್ಣ ಯಶಸ್ವಿಗೆ ಸಾರಿಗೆ ಒಕ್ಕೂಟದಿಂದ ಬೆಂಬಲ ನೀಡಲಾಗುತ್ತದೆ ಎಂದು ಅಖಿಲ ಭಾರತ ರಸ್ತೆ ಸಾರಿಗೆ ಕಾರ್ಮಿಕರ ಸಂಘಗಳ ಒಕ್ಕೂಟ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಸಂತೋಷ್ ತಿಳಿಸಿದರು.ನಗರದ ಪತ್ರಿಕಾಭವನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನ ಬದಲಾಯಿಸುವುದೇ ಬಿಜೆಪಿ, ಆರ್‌ಎಸ್‌ಎಸ್‌ನವರ ಹಿಡನ್ ಅಜೆಂಡಾವಾಗಿದೆ. ಹೀಗಾಗಿ, ಸಂವಿಧಾನಕ್ಕೆ ಭಯ ಬಿದ್ದು ಅಮಿತ್ ಶಾ ಇಂತಹ ಹೇಳಿಕೆ ನೀಡಿದ್ದಾರೆ. ಸಂವಿಧಾನ ಕಾಪಾಡಲು ನಾವೆಲ್ಲರೂ ಮುಂದಾಗಬೇಕು. ಅಂಬೇಡ್ಕರ್ ಬಗ್ಗೆ ಮಾತನಾಡಲು ಅಮಿತ್ ಶಾಗೆ ಅರ್ಹತೆ ಇಲ್ಲ. ದೇಶದಲ್ಲಿ ಮನುವಾದ ತರಲು ಅವರು ಪ್ರಯತ್ನ ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರು ಜೀವನ ತ್ಯಾಗ ಮಾಡಿ ಸಂವಿಧಾನ ರಚಿಸಿದ್ದಾರೆ. ಅದರ ಅಡಿಯಲ್ಲಿ ಅಮಿತ್ ಶಾ ಕೇಂದ್ರ ಮಂತ್ರಿಯಾಗಿ ಇಂತಹ ಹೇಳಿಕೆ ನೀಡಿರುವುದು ದುರಂತ. ಇದನ್ನು ಖಂಡಿಸಿ ನಡೆಯುವ ಬಂದ್‌ವೇಳೆ ನಗರದಲ್ಲಿ ಅಂಬ್ಯುಲೆನ್ಸ್ ಉಚಿತ ಸೇವೆ ಒದಗಿಸಲಾಗುವುದು ಎಂದರು.ಪ್ರಮುಖರಾದ ವೈ. ರಾಮಚಂದ್ರ ಬಾಬು, ಚಾಂದ್ ಭಾಷಾ, ಮೊಹಮ್ಮದ್, ಅಸ್ಲಾಂ ಇದ್ದರು.ಬಂದ್ ಯಶಸ್ವಿಗೊಳಿಸಲು ಸಿಪಿಐ(ಎಂ ) ಮನವಿಹೊಸಪೇಟೆ:
ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ನೀಡಿರುವ ಹಗುರ ಹೇಳಿಕೆ, ದೇಶದ ಬಹುಸಂಖ್ಯಾತ ಜನ ಸಮುದಾಯಕ್ಕೆ ಹೀಯಾಳಿಸಿದಂತೆ ಎಂದು ಸಿಪಿಐ(ಎಂ ) ಪಕ್ಷ ಆರೋಪಿಸಿದೆ. ವಿಜಯನಗರ ಜಿಲ್ಲಾ ಬಂದ್‌ಗೆ ಸಿಪಿಐ(ಎಂ ) ಪಕ್ಷ ಬೆಂಬಲಿಸಿದ್ದು, ಬಂದ್ ಯಶಸ್ವಿಗೆ ಎಲ್ಲರೂ ಮುಂದಾಗಬೇಕು ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್. ಭಾಸ್ಕರ್ ರೆಡ್ಡಿ ತಿಳಿಸಿದ್ದಾರೆ.