ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ವಿಜಯನಗರ ಜಿಲ್ಲೆ ಸಾಧನೆ ಮಾಡಲಿ

KannadaprabhaNewsNetwork |  
Published : Nov 19, 2025, 01:15 AM IST
18ಎಚ್‌ಪಿಟಿ2- ಹೊಸಪೇಟೆಯಲ್ಲಿ ಮಂಗಳವಾರ ನಡೆದ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸುವ ಕುರಿತ ಮುಖ್ಯೋಪಾಧ್ಯಾಯರ ಸಭೆಯನ್ನು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಕಳೆದ ವರ್ಷ ಜಿಲ್ಲೆ 18ನೇ ಸ್ಥಾನದಲ್ಲಿತ್ತು. ಅದನ್ನು ಇನ್ನೂ ಉತ್ತಮವಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಫಲಿತಾಂಶ ಸುಧಾರಣೆಗೆ ಶಾಲೆಯ ಎಲ್ಲ ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಅಂಕ ಗಳಿಕೆಗೆ ಉತ್ತೇಜನ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಹೊಸಪೇಟೆ: ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ವಿಜಯನಗರ ಜಿಲ್ಲೆ ರಾಜ್ಯದಲ್ಲಿ 10ನೇ ಸ್ಥಾನದೊಳಗಿರಲು ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರು ಕ್ರೀಯಾಯೋಜನೆ ಸಿದ್ಧಪಡಿಸಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ಅಖಿಲ ಕರ್ನಾಟಕ ಅನುದಾನಿತ ಶಾಲಾ, ಕಾಲೇಜುಗಳ ನೌಕರರ ಸಂಘದ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸಲು ಮುಖ್ಯೋಪಾಧ್ಯಾಯರ ಸಭೆ ಉದ್ಘಾಟಿಸಿ ಮಾತನಾಡಿದರು.

ಕಳೆದ ವರ್ಷ ಜಿಲ್ಲೆ 18ನೇ ಸ್ಥಾನದಲ್ಲಿತ್ತು. ಅದನ್ನು ಇನ್ನೂ ಉತ್ತಮವಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಫಲಿತಾಂಶ ಸುಧಾರಣೆಗೆ ಶಾಲೆಯ ಎಲ್ಲ ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಅಂಕ ಗಳಿಕೆಗೆ ಉತ್ತೇಜನ ನೀಡಬೇಕು. ಮಕ್ಕಳ ಮನಸ್ಥಿತಿಯನ್ನು ಅರಿತುಕೊಂಡು ಬೋಧನೆ ಮಾಡಬೇಕು. ಶಾಲೆಗಳಲ್ಲಿ ಯಾವುದೇ ತೊಂದರೆಗಳಿದ್ದರೆ ಮುಕ್ತವಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬಹುದು. ಪ್ರಾಮಾಣಿಕ ಪ್ರಯತ್ನದಿಂದ ಮಾತ್ರ ಉತ್ತಮ ಫಲಿತಾಂಶ ಗಳಿಸುವುದು ಸಾಧ್ಯವಿದೆ ಎಂಬುದನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅರಿಯಬೇಕಿದೆ. ಫಲಿತಾಂಶದ ವಿಚಾರದಲ್ಲಿ ಮುಖ್ಯೋಪಾಧ್ಯಾಯರು ಸೇರಿ ಶಿಕ್ಷಕರು ನಿರ್ಲಕ್ಷ್ಯ ವಹಿಸಿದರೇ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ವೆಂಕಟೇಶ್ ರಾಮಚಂದ್ರಪ್ಪ ಮಾತನಾಡಿ, ಇದೇ ಡಿಸೆಂಬರ್ ಅಂತ್ಯದೊಳಗೆ ಪಠ್ಯಕ್ರಮವನ್ನು ಪೂರ್ಣಗೊಳಿಸಿ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸಿದ್ದಪಡಿಸಲು ಎಲ್ಲ ಶಿಕ್ಷಕರು ಪರಿಶ್ರಮ ವಹಿಸುವ ಮೂಲಕ ಜಿಲ್ಲೆ ಈ ಬಾರಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಕಾಣಬೇಕಿದೆ. ಫಲಿತಾಂಶ ಸುಧಾರಣೆಗೆ ವಿದ್ಯಾರ್ಥಿಗಳಿಗೆ ಕ್ವಿಜ್, ಪ್ರಬಂಧ, ಚರ್ಚಾಕೂಟ ಹಾಗೂ ಅಶುಭಾಷಣದ ಮೂಲಕ ಪರೀಕ್ಷೆಗೆ ಸನ್ನದ್ಧಗೊಳಿಸಬೇಕು. ಶಾಲೆಯ ಎಲ್ಲ ಶಿಕ್ಷಕರಷ್ಟೇ ಆಯಾ ಶಾಲೆಯ ಮುಖ್ಯೋಪಾಧ್ಯಾಯರು ಫಲಿತಾಂಶದ ಪ್ರಗತಿಗೆ ಪೂರಕವೆಂಬುದು ಮರೆಯುವಂತಿಲ್ಲ ಎಂದರು.

ಹೊಸಪೇಟೆ ಬಿಇಒ ಶೇಖರಪ್ಪ ಹೊರಪೇಟೆ ಮಾತನಾಡಿ, ಈಗಾಗಲೇ ವೆಬ್‌ಸೈಟ್‌ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ ನೀಲನಕ್ಷೆಯನ್ನು ನೀಡಲಾಗಿದೆ. ಸರ್ಕಾರದಿಂದ ನೀಡಿರುವ 29 ಅಂಶಗಳ ವರದಿಯನ್ನು ಎಲ್ಲ ಶಿಕ್ಷಕರು ಸರಿಯಾಗಿ ಅರ್ಥೈಸಿಕೊಂಡು. ವಿದ್ಯಾರ್ಥಿಗಳ ಮಾನಸಿಕ ಹಾಗೂ ಬೌದ್ಧಿಕ ಪ್ರಗತಿಗೆ ಶಿಕ್ಷಕರು ಸ್ವಹಿತಾಸಕ್ತಿಯಿಂದ ಕರ್ತವ್ಯ ನಿರ್ವಹಿಸಬೇಕಿದೆ. ಪ್ರತಿ ಶಾಲೆಗಳಿಂದ ಒಬ್ಬ ವಿದ್ಯಾರ್ಥಿ 625 ಅಂಕ ಗಳಿಕೆಗೆ ಪ್ರಯತ್ನಿಸಬೇಕು. ಎಲ್ಲ ಶಾಲೆಗಳು ಪ್ರತಿಶತ ನೂರರಷ್ಟು ಫಲಿತಾಂಶಕ್ಕಾಗಿ ಸಂಕಲ್ಪ ಮಾಡಬೇಕಿದೆ ಎಂದರು.

ಕೂಡ್ಲಿಗಿ ತಾಲೂಕು ಬಿಇಒ ಮೈಲೇಶ್ ಬೇವೂರು ಮಾತನಾಡಿ, ಶಾಲೆಯ ಗುಣಮಟ್ಟದ ಶಿಕ್ಷಣ ಮತ್ತು ಕಾರ್ಯವೈಖರಿಯನ್ನು ಕೇವಲ ಎಸ್ಸೆಸ್ಸೆಲ್ಸಿ ಫಲಿತಾಂಶದ ಮೇಲೆ ಮಾಪನ ಮಾಡಲಾಗುತ್ತದೆ. ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ಹಿಂದಿನ ಫಲಿತಾಂಶವನ್ನು ಹೋಲಿಕೆ ಮಾಡದಿರಿ. ಈಗ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 14 ವಾರಗಳು ಮಾತ್ರ ಉಳಿದಿದೆ. ಪ್ರತಿ ದಿನ ನಿಮ್ಮ ಶಾಲೆಯ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಮುಖ್ಯ ಶಿಕ್ಷಕರು ಮೇಲ್ವಿಚಾರಣೆ ನಡೆಸಬೇಕು. ಹಾರ್ಡ್ ವರ್ಕ್‌ಗಿಂತ ಸ್ಮಾರ್ಟ್ ವರ್ಕ್‌ಗೆ ಆದ್ಯತೆ ನೀಡಬೇಕಾಗಿದೆ. ಪ್ರತಿ ಶಾಲೆಗಳಲ್ಲಿ ಸ್ವಂತ ಕ್ರಿಯಾ ಯೋಜನೆ ಸಿದ್ದಪಡಿಸಬೇಕು ಎಂದರು.

ಹಗರಿಬೊಮ್ಮನಹಳ್ಳಿ ಬಿಇಒ ಎಂ.ಎಸ್. ಪ್ರಭಾಕರ್ ಮಾತನಾಡಿ, ಜಿಲ್ಲೆಯ ಕ್ರಿಯಾಶೀಲತೆ ಮತ್ತು ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ಸರಳವಾಗಿ ಕನಿಷ್ಠ 40 ಅಂಕ ಗಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

ಹರಪನಹಳ್ಳಿ ಬಿಇಒ ಲೇಪಾಕ್ಷಪ್ಪ, ಹಡಗಲಿ ಬಿಇಒ ಮಹೇಶ್, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷರಾದ ಅಕ್ಕಮಹಾದೇವಿ, ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಯತ್ನಳ್ಳಿ ಮಲ್ಲಯ್ಯ, ಜಿಲ್ಲಾ ನೋಡಲ್ ಅಧಿಕಾರಿ ಎಚ್.ಎಂ.ಹುಲಿಬಂಡಿ ಮತ್ತಿತರರಿದ್ದರು. ವಿಷಯ ಪರಿವೀಕ್ಷಕರಾದ ಬಸವಂತಯ್ಯ, ರಾಜಶೇಖರ್, ವಿಶ್ವನಾಥ್ ನಿರ್ವಹಿಸಿದರು. ಜಿಲ್ಲೆಯ ಎಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಸಭೆಯಲ್ಲಿ ಭಾಗವಹಿಸಿದ್ದರು.

PREV

Recommended Stories

ಯುವಜನತೆ ತಂಬಾಕು ಸೇವನೆಯಿಂದ ದೂರವಿರಿ
ಪ್ರತ್ಯೇಕ ರಾಜ್ಯಕ್ಕೆ ನನ್ನ ಸಹಮತವಿಲ್ಲ: ಬಸವರಾಜ ಹೊರಟ್ಟಿ