ಅಡ್ವಾಣಿ ಯಾತ್ರೆಗೂ ಮುಂಚಿನ ಕೊಯಮತ್ತೂರು ಬಾಂಬ್‌ ಸ್ಫೋಟ : ವಿಜಯಪುರದಲ್ಲಿ ಉಗ್ರ ಸೆರೆ

Published : Jul 11, 2025, 06:41 AM IST
Pahalgam terrorist attack

ಸಾರಾಂಶ

ಬಿಜೆಪಿ ಮುಖಂಡ ಎಲ್‌.ಕೆ. ಅಡ್ವಾಣಿ ಭೇಟಿಗೂ ಮುನ್ನ ಸಂಭವಿಸಿದ್ದ, 58 ಮಂದಿ ಸಾವಿಗೆ ಕಾರಣವಾಗಿದ್ದ 1998ರ ಕೊಯಮತ್ತೂರು ಬಾಂಬ್‌ ಸ್ಫೋಟದ ಪ್ರಮುಖ ಆರೋಪಿ, ಉಗ್ರ ಸಾದಿಕ್‌ ಅಲಿಯಾಸ್‌ ಟೈಲರ್‌ ರಾಜಾನನ್ನು ಕರ್ನಾಟಕದ ವಿಜಯಪುರದಲ್ಲಿ ತಮಿಳುನಾಡು ಉಗ್ರ ನಿಗ್ರಹ ಪಡೆ (ಎಟಿಎಸ್‌) ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಚೆನ್ನೈ/ವಿಜಯಪುರ : ಬಿಜೆಪಿ ಮುಖಂಡ ಎಲ್‌.ಕೆ. ಅಡ್ವಾಣಿ ಭೇಟಿಗೂ ಮುನ್ನ ಸಂಭವಿಸಿದ್ದ, 58 ಮಂದಿ ಸಾವಿಗೆ ಕಾರಣವಾಗಿದ್ದ 1998ರ ಕೊಯಮತ್ತೂರು ಬಾಂಬ್‌ ಸ್ಫೋಟದ ಪ್ರಮುಖ ಆರೋಪಿ, ಉಗ್ರ ಸಾದಿಕ್‌ ಅಲಿಯಾಸ್‌ ಟೈಲರ್‌ ರಾಜಾನನ್ನು ಕರ್ನಾಟಕದ ವಿಜಯಪುರದಲ್ಲಿ ತಮಿಳುನಾಡು ಉಗ್ರ ನಿಗ್ರಹ ಪಡೆ (ಎಟಿಎಸ್‌) ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಮೂಲತಃ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿಯಾಗಿದ್ದ ಈತ, ಕೊಯಮತ್ತೂರು ಸ್ಫೋಟಕ್ಕೂ ಮುನ್ನ ಹಲವು ಉಗ್ರ ಕೃತ್ಯಗಳಲ್ಲಿ ಭಾಗಿ ಆಗಿ 1996ರಿಂದಲೇ ತಲೆಮರೆಸಿಕೊಂಡಿದ್ದ. 12 ವರ್ಷಗಳಿಂದ ವಿಜಯಪುರದಲ್ಲಿದ್ದ.

ಕೊಯಮತ್ತೂರು ಸ್ಫೋಟ ಸೇರಿದಂತೆ ತಮಿಳುನಾಡಿನಲ್ಲಿ ನಡೆದ ಹಲವು ಕೋಮುಗಲಭೆ, ಹತ್ಯೆ ಪ್ರಕರಣಗಳಲ್ಲೂ ಕೊಯಮತ್ತೂರು ಮೂಲದ ಸಾದಿಕ್‌ ಪ್ರಮುಖ ಆರೋಪಿಯಾಗಿದ್ದ. ವಿಜಯಪುರದಲ್ಲಿ ಈತನ ಇರುವಿಕೆಯ ಖಚಿತ ಮಾಹಿತಿ ಮೇರೆಗೆ ಕೊಯಮತ್ತೂರು ಪೊಲೀಸರು. ವಿಜಯಪುರ ಪೊಲೀಸರ ಸಹಾಯದಿಂದ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ ವಾರವಷ್ಟೇ ಉಗ್ರ ನಿಗ್ರಹ ದಳವು ಕೊಯಮತ್ತೂರು ನಗರ ಪೊಲೀಸರ ಜತೆಗೂಡಿ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ ಅಬೂಬಕರ್‌ ಸಿದ್ದಿಕಿ ಮತ್ತು ಆಂಧ್ರಪ್ರದೇಶದ ಅಣ್ಣಮಯ್ಯ ಜಿಲ್ಲೆಯಲ್ಲಿ ಮೊಹಮ್ಮದ್‌ ಅಲಿಯನ್ನು ಬಂಧಿಸಿತ್ತು. ಅದರ ಬೆನ್ನಲ್ಲೇ ಇದೀಗ ಸಾದಿಕ್‌ನನ್ನು ಇದೀಗ ಸಾದಿಕ್‌ನ ಎಟಿಎಸ್‌ ಬಂಧಿಸಿದೆ.

ಹತ್ಯೆ, ಬಾಂಬ್‌ ಸ್ಫೋಟ ಆರೋಪ:

1996ರಲ್ಲಿ ಕೊಯಮತ್ತೂರಿನಲ್ಲಿ ನಡೆದ ಪೆಟ್ರೋಲ್‌ ಬಾಂಬ್‌ ದಾಳಿ, 1996ರಲ್ಲಿ ನಾಗೋರ್‌ನ ಸಯೀಥಾ ಹತ್ಯೆ, 1997ರಲ್ಲಿ ಮದುರೈನಲ್ಲಿ ಜೈಲರ್‌ ಜಯಪ್ರಕಾಶ್‌ ಹತ್ಯೆ ಪ್ರಕರಣದಲ್ಲೂ ಸಾದಿಕ್‌ ಪ್ರಮುಖ ಆರೋಪಿಯಾಗಿದ್ದ.

12 ವರ್ಷದಿಂದ ವಿಜಯಪುರದಲ್ಲಿ ತರಕಾರಿ ಮಾರಿ ಜೀವಿಸುತ್ತಿದ್ದ

ವಿಜಯಪುರ: ಶಂಕಿತ ಉಗ್ರ ಸಾದಿಕ್‌ ರಾಜಾ ಕರ್ನಾಟಕದ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯವ. ಕಳೆದ 12 ವರ್ಷಗಳಿಂದ ವಿಜಯಪುರದಲ್ಲಿದ್ದ. ಕೊಯಮತ್ತೂರು ಬ್ಲಾಸ್ಟ್ ಬಳಿಕ ತಮಿಳುನಾಡಿನಿಂದ ತಲೆ‌ಮರೆಸಿಕೊಂಡು, ಬೇರೆ ಬೇರೆ ಸ್ಥಳಗಳಲ್ಲಿ ಅಡಗಿದ್ದ ಈತ ವಿಜಯಪುರದಲ್ಲಿ ಗುಪ್ತವಾಗಿ ಠಿಕಾಣಿ ಹೂಡಿದ್ದ. ಕಳೆದ 12 ವರ್ಷಗಳಿಂದ ತರಕಾರಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದ.

ಹುಬ್ಬಳ್ಳಿಯ ಯುವತಿಯ ಮದುವೆ ಆಗಿದ್ದ

ವಿಜಯಪುರ: ವಿಜಯಪುರದಲ್ಲಿ ಠಿಕಾಣಿ ಗೂಡಿದ್ದ ಸಾದಿಕ್‌ ರಾಜಾ ಹುಬ್ಬಳ್ಳಿ ಮೂಲದ ಮಹಿಳೆಯೊಂದಿಗೆ ವಿವಾಹವಾಗಿದ್ದ. ಟೈಲರ್‌ ರಾಜಾ, ವಲರ್ನಾಥ ರಾಜಾ, ಶಹಜಹಾನ್‌ ಅಬ್ದುಲ್‌ ಮಜೀದ್‌ ಮಕಾಂದಾರ್‌ ಮತ್ತು ಶಹಜಹಾನ್‌ ಶೈಯಾಕ್‌ ಹೀಗೆ ಹಲವು ಹೆಸರು ಬದಲಿಸಿಕೊಂಡು ಈತ ತನಿಖಾಧಿಕಾರಿಗಳ ಕಣ್ತಪ್ಪಿಸಿ ಓಡಾಡಿಕೊಂಡಿದ್ದ.

ಆಗಿದ್ದೇನು?

- ಕೊಯಮತ್ತೂರಲ್ಲಿ 1998ರಲ್ಲಿ ಫೆ.14ರಂದು ಸರಣಿ ಬಾಂಬ್‌ ಸ್ಫೋಟ

- ಅಡ್ವಾಣಿ ಯಾತ್ರೆಗೂ ಮುನ್ನ ದಾಳಿ, 58 ಸಾವು, 250 ಜನಕ್ಕೆ ಗಾಯ

- ದಾಳಿಯ ಆರೋಪಿ ‘ಟೈಲರ್‌’ ಸಾದಿಕ್‌ ರಾಜಾ ಅಂದಿನಿಂದಲೂ ಕಾಣೆ

- ಇದೀಗ ವಿಜಯಪುರದಲ್ಲಿ ಆತನ ಇರುವಿಕೆ ಪತ್ತೆ, ಕೊನೆಗೂ ಬಂಧನ

- ಇನ್ನೂ ಹಲವು ಸ್ಫೋಟ, ಹತ್ಯೆ, ಗಲಭೆ ಕೇಸಲ್ಲೂ ಈತ ಆರೋಪಿ

PREV
Read more Articles on