ಕನ್ನಡಪ್ರಭ ವಾರ್ತೆ ವಿಜಯಪುರ
ವೃಕ್ಷಥಾನ್ ಹೆರಿಟೇಜ್ ರನ್-2025ರ ಮುನ್ನಾ ದಿನ ಶನಿವಾರ ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ನಾನಾ ಚರ್ಚಾಗೋಷ್ಠಿಯಲ್ಲಿ ಮಾತನಾಡಿದರು. ಆದಿಲ್ ಶಾಹಿ ಅರಸರ ಸಂಸ್ಕೃತಿ ಕುರಿತು ವಿಚಾರ ಮಂಡಿಸಿದ ಸಂಶೋಧಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ಆದಿಲ್ ಶಾಹಿ ಬಾದಷಾಹ ತಮ್ಮ ಆಡಳಿತದಲ್ಲಿ ಶೈಕ್ಷಣಿಕ, ಸಾಹಿತ್ಯ ಮತ್ತು ಕಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ವಿದ್ಯಾರ್ಹತೆ ಆಧಾರದ ಮೇಲೆ ನಾಗರಿಕರಿಗೆ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಮೂಲಕ ಅಭಿವೃದ್ಧಿ ಮಾಡಿದ್ದಾರೆ. ಪ್ರತಿ ತಿಂಗಳ ಮೊದಲ ಗುರುವಾರ ನಡೆಯುತ್ತಿದ್ದ ಕಲೋತ್ಸವ, ನಾನಾ ಉದ್ಯಾನ, ಸಮಬಾಳು ಅವರ ತತ್ವವಾಗಿದ್ದವು ಎಂದು ಹೇಳಿದರು.
ಫಿಟ್ನೆಸ್ ತಜ್ಞ ಜಗದೀಶ ರಂಗಸ್ವಾಮಿ ಮಾತನಾಡಿ, ತಾವು ಈವರೆಗೆ 180 ದೇಶಗಳಿಗೆ ಭೇಟಿ ನೀಡಿದ್ದೇನೆ. ನಮ್ಮಲ್ಲಿ ಬಾಲ್ಯದಿಂದ ರೂಢಿಸಿಕೊಳ್ಳುವ ಹವ್ಯಾಸಗಳು ನಮ್ಮನ್ನು ಮಾನಸಿಕ ಮತ್ತು ದೈಹಿಕವಾಗಿ ಸದೃಢರನ್ನಾಗಿ ಮಾಡುತ್ತವೆ. ಶಿಕ್ಷಣದ ಜೊತೆಗೆ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ಓಟ ಆರೋಗ್ಯದ ಒಂದು ಅವಿಭಾಜ್ಯ ಪ್ರಕ್ರಿಯೆಯಾಗಿದೆ. ವೃಕ್ಷಥಾನ್‌ನಂಥ ಹಾಫ್ ಮ್ಯಾರಾಥಾನ್‌ಗಳು ನಡೆಯುವುದರಿಂದ ಇತರರಿಗೂ ಪ್ರೇರಣೆಯಾಗುತ್ತವೆ ಎಂದು ಹೇಳಿದರು.ಶಸ್ತ್ರಚಿಕಿತ್ಸಕ ಡಾ.ರವಿ ಚೌಧರಿ ಮಾತನಾಡಿ, ಒಂದು ಕಾಲದಲ್ಲಿ ಪಂಚನದಿಗಳ ನಾಡಾಗಿದ್ದ ವಿಜಯಪುರ ಈಗ ಹಸಿರಿನಿಂದ ಕಂಗೊಳಿಸುತ್ತಿದೆ. ಇಂಥ ಕಾರ್ಯಕ್ರಮಗಳ ಮೂಲಕ ದೇಶಾದ್ಯಂತ ತನ್ನ ಗುರುತನ್ನು ಮರುಸ್ಥಾಪಿಸುತ್ತಿದೆ ಎಂದರು.
ಕೈಗಾರಿಕೆ ಸಚಿವರ ಆಪ್ತ ಕಾರ್ಯದರ್ಶಿ ನರೇಂದ್ರ ಅವರು ಕಾರ್ಯ ಒತ್ತಡದಲ್ಲಿ ಮಾನಸಿಕ ಸಮತೋಲನ ಮತ್ತು ದೈಹಿಕ ಆರೋಗ್ಯ ಕಾಪಾಡುವ ಬಗೆ ಕುರಿತು ಮಾತನಾಡಿದರು. ಪ್ರತಿಯೊಂದನ್ನು ಎದುರಿಸಿ ಉದಯಿಸಬೇಕು. ಎಲ್ಲವನ್ನು ಮರೆತು ಓಡಬೇಕು. ನಾವು ಬಯಸಿದಂತೆ ಜೀವನದಲ್ಲಿ ಎಲ್ಲವೂ ಸಿಗುವುದಿಲ್ಲ. ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಒತ್ತಡದಿಂದ ಹೊರ ಬಂದು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಮುಖಂಡ ಆರ್. ಎಸ್. ಪಾಟೀಲ ಕೂಚಬಾಳ ಮಾತನಾಡಿ, ಆರೋಗ್ಯ ಮತ್ತು ಶಿಸ್ತು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಳ ಮತ್ತು ಹೊರ ಮನಸ್ಸನ್ನು ಸಮತೋಲನದಲ್ಲಿಟ್ಟುಕೊಂಡು ನಮಗೆ ನೈಸರ್ಗಿಕವಾಗಿ ಸಿಗುವ ಮಳೆ, ಗಾಳಿ, ಬೆಳಕು ಸೇರಿದಂತೆ ಪಂಚ ಮಹಾಭೂತಗಳನ್ನು ಸಂರಕ್ಷಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಸ್ಮಾರಕಗಳ ಸಂರಕ್ಷಣೆ ಮುಖಂಡ ಅಮೀನುದ್ದೀನ್ ಹುಲ್ಲೂರ, ಉದ್ಯಮಿ ಅನುಪಮ ರುಣವಾಲ, ಪ್ರಾಧ್ಯಾಪಕಿ ಪ್ರೊ. ಅನುರಾಧಾ ಟಂಕಸಾಲಿ ಮತ್ತು ಉದ್ಯಮಿ ಶಾಂತೇಶ ಕಳಸಗೊಂಡ ನಾಲ್ಕು ಗೋಷ್ಠಿಗಳ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದರು.