ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ರಾಜ್ಯ ಸರ್ಕಾರದಿಂದ ತೊಡಕು: ಶೋಭಾ ಕರಂದ್ಲಾಜೆ

KannadaprabhaNewsNetwork | Published : Dec 17, 2023 1:45 AM

ಸಾರಾಂಶ

ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ರಾಜ್ಯ ಸರ್ಕಾರದಿಂದ ತೊಡಕು: ಶೋಭಾ ಕರಂದ್ಲಾಜೆರಾಜ್ಯ ಸರ್ಕಾರ ಅನಾವಶ್ಯಕವಾಗಿ ರಾಜಕೀಕರಣಕರ್ನಾಟಕ ರಾಜ್ಯದಲ್ಲಿ ಸರ್ಕಾರ ಇದರ ನೇತೃತ್ವ ವಹಿಸಬೇಕಿತ್ತು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ರಾಜ್ಯ ಸರ್ಕಾರ ಅನಾವಶ್ಯಕವಾಗಿ ರಾಜಕೀಕರಣಗೊಳಿಸಿ ಯಾತ್ರೆ ಯಶಸ್ಸಿಗೆ ತೊಡಕುಂಟುಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ರಾಜ್ಯದ ಕೃಷಿ ಇಲಾಖೆ ಕಾರ್ಯದರ್ಶಿ ಈ ಯಾತ್ರೆಯ ನೋಡಲ್ ಅಧಿಕಾರಿ ಆಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರ ಇದರ ನೇತೃತ್ವ ವಹಿಸಬೇಕಿತ್ತು. ಇದಕ್ಕಾಗಿ ಡಿಸಿ, ಸಿಇಒ ಮತ್ತು ಪಿಡಿಒಗಳಿಗೆ ತರಬೇತಿಯನ್ನೂ ನೀಡಲಾಗಿತ್ತು. ಆದರೆ ಡಿ.14 ರ ರಾತ್ರಿ ನಮ್ಮ ರಾಜ್ಯದ ಮುಖ್ಯಮಂತ್ರಿ ಇದನ್ನು ರಾಜಕೀಯಕರಣಗೊಳಿಸಿದರು ಎಂದು ದೂರಿದರು.

ಮುಖ್ಯಮಂತ್ರಿಗಳು ಎಲ್ಲಾ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಇದರಲ್ಲಿ ಯಾರೂ ಭಾಗವಹಿಸಬಾರದು. ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ಕರ್ನಾಟಕ ರಾಜ್ಯದಲ್ಲಿ ಡಿಸಿ, ಸಿಇಒ ಸೇರಿ ಅಧಿಕಾರಿಗಳ ತಂಡ ಈ ಯಾತ್ರೆಯಲ್ಲಿ ಭಾಗವಹಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅದೇ ದಿನ ರಾತ್ರಿ ಪ್ರಧಾನಿಗಳು ಲೀಡ್ ಬ್ಯಾಂಕ್‌ನ ಮ್ಯಾನೇಜರ್‌ ಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿದ್ದಾರೆ. ರಾಜ್ಯಾದ್ಯಂತ ಇದನ್ನು ಅವರೇ ನಡೆಸುತ್ತಾರೆ. ಆದರೆ, ಬ್ಯಾಂಕ್ ಅಧಿಕಾರಿಗಳಿಗೆ ಜನ ಸಂಪರ್ಕದ ಕೊರತೆ ಕಾರಣಕ್ಕೆ ಆರಂಭಿಕ ದಿನಗಳಲ್ಲಿ ಸ್ವಲ್ಪ ಸಮಸ್ಯೆ ಆಯ್ತು. ಆದರೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಗ್ಯಾಸ್ ಏಜೆನ್ಸಿಗಳು, ನಮ್ಮ ಕಾರ್ಯಕರ್ತರ ತಂಡ, ಚುನಾಯಿತ ಪ್ರತಿನಿಧಿಗಳು, ಮುಖಂಡರು ಸೇರಿ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ತೀರ್ಮಾನಿಸಿದ್ದಾರೆ ಎಂದರು.

ಈ ಯಾತ್ರೆ ರಾಜಕೀಯ ಉದ್ದೇಶದ್ದಲ್ಲ. ಕೇಂದ್ರ ಸರ್ಕಾರದ ಯೋಜನೆ, ಅಭಿವೃದ್ಧಿಯನ್ನು ತಿಳಿಸುವಂತಹದ್ದು, ಯಾರಿ ಗಾದರೂ ಯೋಜನೆ ತಲುಪಿಲ್ಲವಾದರೆ ಅಲ್ಲೇ ಅರ್ಜಿ ಸ್ವೀಕರಿಸಬೇಕು ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರದ ಅಧಿಕಾರಿಗಳು ಬಾರದ ಕಾರಣ ಹಲವು ಕಡೆಗಳಲ್ಲಿ ಇದು ಸಾಧ್ಯವಾಗುತ್ತಿಲ್ಲವಾದರೂ ನಾವು ಪ್ರಾಮಾಣಿಕವಾಗಿ ಇದನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ. ಜನ ಇದನ್ನು ಯಶಸ್ಸುಗೊಳಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ತಿಳಿಸಿದರು.

ರಾಜ್ಯದ ಚಾಮರಾಜನಗರ, ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೇಂದ್ರ ಸಚಿವರಾದ ವರ್ಮ ಅವರು ಕೊಪ್ಪಕ್ಕೆ ಬಂದು ಇದರ ಉದ್ಘಾಟನೆ ಮಾಡಿದ್ದರು. 2047ರ ಇಸವಿ ವೇಳೆಗೆ ಭಾರತ ಆತ್ಮನಿರ್ಭರ ಭಾರತ ಆಗಬೇಕು ಎನ್ನುವುದು ಪ್ರಧಾನಿಗಳ ಸಂಕಲ್ಪ ಆಗಿದೆ. ಈ ಕೆಲಸ ಕೇವಲ ಸರ್ಕಾರದ್ದು ಮಾತ್ರವಲ್ಲ. ಜನರೂ ಇದರಲ್ಲಿ ಭಾಗಿಯಾಗಬೇಕು. ಇದಕ್ಕಾಗಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಪ್ರಾರಂಭವಾಗಿದೆ ಎಂದರು. ---- ಬಾಕ್ಸ್‌ ------

ಸಂಸತ್ತಿನಲ್ಲಿ ನಡೆದ ಭದ್ರತಾ ಲೋಪ: ಸ್ಪೀಕರ್ ನೇತೃತ್ವದಲ್ಲಿ ತನಿಖೆ

ಚಿಕ್ಕಮಗಳೂರು: ಮೊನ್ನೆ ಸಂಸತ್ತಿನಲ್ಲಿ ನಡೆದ ಭದ್ರತಾ ಲೋಪದ ಬಗ್ಗೆ ತನಿಖೆ ಆಗುತ್ತಿದೆ. ಆದಷ್ಟು ಬೇಗ ಇದರ ಹಿಂದಿನ ಶಕ್ತಿ, ಷಡ್ಯಂತ್ರಗಳು ಹೊರಬರಲಿದೆ. ಅಪರಾಧಿಗಳಿಗೆ ಶಿಕ್ಷೆ ಆಗಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಪ್ರಕರಣದ ಕುರಿತು ಸ್ಪೀಕರ್ ನೇತೃತ್ವದಲ್ಲಿ ತನಿಖೆ ಆಗುತ್ತಿದೆ. ಸಂಸತ್ತಿಗೆ ಸ್ಪೀಕರ್ ಮತ್ತು ರಾಜ್ಯ ಸಭೆ ಅಧ್ಯಕ್ಷರು ವಾರಸುದಾರರು. ಅತ್ಯಂತ ಗಂಭೀರ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ ಎಂದರು.

ರಾಷ್ಟ್ರೀಯ ತನಿಖಾದಳದ ಹಲವಾರು ಏಜೆನ್ಸಿಗಳು ಮತ್ತು ಸಂಸತ್ತಿನ ಒಳಗಿನ ಭದ್ರತಾ ವ್ಯವಸ್ಥೆ ತನಿಖೆ ನಡೆಸುತ್ತಿದೆ. ಇಂದು ಮತ್ತು ನಾಳೆ ಸಂಸತ್ತಿಗೆ ರಜೆ ಇದೆ. ಲಲಿತ್ ಝಾ ಎಂಬಾತ ಎಲ್ಲರ ಮೊಬೈಲ್ ಸಂಗ್ರಹಿಸಿಕೊಂಡು ಪರಾರಿಯಾಗಿದ್ದ ಅವನನ್ನೂ ಬಂಧಿಸಲಾಗಿದೆ ಎಂದು ಹೇಳಿದರು.

Share this article