ಸುಳಿವು ಸಿಕ್ಕ ಹತ್ತೇ ದಿನದಲ್ಲಿ ವಿಕ್ರಂಗೌಡ ಎನ್‌ಕೌಂಟರ್‌

KannadaprabhaNewsNetwork |  
Published : Nov 20, 2024, 12:35 AM IST

ಸಾರಾಂಶ

ಇದೇ ನವೆಂಬರ್‌ ಮೊದಲ ವಾರ ಪಶ್ಚಿಮಘಟ್ಟದಲ್ಲಿ ಮತ್ತೆ ನಕ್ಸಲೀಯರ ಚಲನವಲನ ಶುರುವಾಗಿದೆ ಎಂಬ ಮಾಹಿತಿ ನಕ್ಸಲ್‌ ನಿಗ್ರಹ ಪಡೆಗೆ ಸಿಕ್ಕಿತ್ತು. 2003ರ ನವೆಂಬರ್‌ 17 ರಂದು ಮೊದಲ ಬಾರಿಗೆ ಎನ್‌ಕೌಂಟರ್‌ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಈದು ಗ್ರಾಮದ ಸುತ್ತಮುತ್ತ ನಕ್ಸಲೀಯರು ಓಡಾಡುತ್ತಿದ್ದರೆಂಬ ಮಾಹಿತಿ ಸಿಕ್ಕಿತ್ತು. ಆಗ ಕೂಡಲೇ ಎಎನ್‌ಎಫ್‌ ಪಡೆ ಚುರುಕುಗೊಂಡಿತು. ಹಲವೆಡೆ ಪರಿಶೀಲನೆ ಜತೆಗೆ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿರುವ ಎಲ್ಲಾ 17 ನಕ್ಸಲ್‌ ನಿಗ್ರಹ ಪಡೆಯ ಸಿಬ್ಬಂದಿಗಳು ಕಾರ್ಯಾಚರಣೆ ಚುರುಕುಗೊಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಈ ಗಾಳಿ ಸುದ್ದಿ ಎಲ್ಲೆಡೆ ಹರಡಿತ್ತು. ನ.10 ರಂದು ನಕ್ಸಲೀಯರು ಮುಂಡಗಾರು ಲತಾ, ಜಯಣ್ಣ ಅವರೊಂದಿಗೆ ಕೊಪ್ಪ ತಾಲೂಕಿನ ಸುಬ್ಬೇಗೌಡರ ಮನೆಗೆ ಬಂದಿದ್ದಾರೆ ಎಂದು ತಿಳಿಯುತ್ತಿದ್ದಂತೆ ನಕ್ಸಲ್‌ ನಿಗ್ರಹ ಪಡೆ ಸಿಬ್ಬಂದಿ ಹಾಗೂ ಜಯಪುರ ಪೊಲೀಸರು ಅದೇ ದಿನ ರಾತ್ರಿ 11 ಗಂಟೆಯ ವೇಳೆಗೆ ಸ್ಥಳಕ್ಕೆ ತೆರಳಿದರು. ಅಷ್ಟರೊಳಗೆ ರಾತ್ರಿ 9 ಗಂಟೆಯ ವೇಳೆಗೆ ನಕ್ಸಲೀಯರು ಊಟ ಮಾಡಿ ತೆರಳಿದ್ದರು.

ಪೊಲೀಸರು, ಸುಬ್ಬೇಗೌಡ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಇದೇ ಸಂದರ್ಭದಲ್ಲಿ ಮನೆಯೊಳಗೆ ಎಸ್‌ಬಿಎಂಎಲ್‌ ಬಂದೂಕುಗಳು ಹಾಗೂ ಮದ್ದು ಗುಂಡುಗಳು ಪತ್ತೆಯಾಗಿದ್ದು ಅವುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಒಂಟಿ ಮನೆಗೆ ಭೇಟಿ ನೀಡಿರುವ ಸಂಬಂಧ ಜಯಪುರ ಪೊಲೀಸ್‌ ಠಾಣೆಯಲ್ಲಿ ಎಎನ್‌ಎಫ್‌ ಅಧಿಕಾರಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ.

ನಕ್ಸಲೀಯರು ಬಂದು ಹೋಗಿರುವುದು ಖಚಿತವಾಗಿದ್ದರಿಂದ ಮುಂಡಗಾರು, ಯಡಗುಂದ, ಕಡೇಗುಂದಿ, ಮುಂಡೋಡಿ ಭಾಗದಲ್ಲಿ ಕಾರ್ಯಾಚರಣೆ ಚುರುಕುಗೊಳಿಸಲಾಗಿತ್ತು. ಇದರ ಜತೆಗೆ ಜಿಲ್ಲೆಯ ಕೆರೆಕಟ್ಟೆ, ಕಿಗ್ಗಾ, ದೇವಾಲಕೊಪ್ಪ ಹಾಗೂ ಜಯಪುರದಲ್ಲಿರುವ 4 ನಕ್ಸಲ್‌ ನಿಗ್ರಹ ಪಡೆಯ ಸಿಬ್ಬಂದಿ ಹಾಗೂ ಪೊಲೀಸರು ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಕೂಂಬಿಂಗ್‌ ನಡೆಸಿದರು. ಶಿವಮೊಗ್ಗ, ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ತೆರಳುವ ಮಾರ್ಗಗಳಲ್ಲಿ ನಾಕಬಂದಿ ವ್ಯವಸ್ಥೆ ಮಾಡಿ ಅನುಮಾನಸ್ಪದ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಎನ್‌ಎಫ್‌ ಚುರುಕಾಗುತ್ತಿದ್ದಂತೆ ಅತ್ತ ನೆರೆಯ ಉಡುಪಿ ಜಿಲ್ಲೆಯ ಹೆಬ್ರಿಯ ಕಬ್ಬಿನಾಲೆ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ಪೊಲೀಸರು ನಡೆಸಿದ ಎನ್‌ಕೌಂಟರ್‌ಗೆ ವಿಕ್ರಂಗೌಡ ಬಲಿಯಾಗಿದ್ದಾರೆ.

ಕೊಪ್ಪ ತಾಲೂಕಿನ ಕಡೇಗುಂದಿ ಗ್ರಾಮದಲ್ಲಿ ನಕ್ಸಲೀಯರು ಪತ್ತೆಯಾದ ಹತ್ತೇ ದಿನಕ್ಕೆ ನಕ್ಸಲ್‌ ನಾಯಕ ವಿಕ್ರಂಗೌಡ ಬಲಿಯಾಗಿದ್ದಾರೆ. 16 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನಕ್ಸಲೀಯರು ಪೊಲೀಸರ ಗುಂಡಿಗೆ ಹತ್ಯೆಯಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ