ಅಸಮರ್ಪಕ ರಸ್ತೆ ಡಾಂಬರು ಕಾಮಗಾರಿಗೆ ಗ್ರಾಮಸ್ಥರ ತಡೆ

KannadaprabhaNewsNetwork |  
Published : May 22, 2026, 03:00 AM IST
ಕಾಮಗಾರಿ ಸ್ಥಳದಲ್ಲಿ ಮಾತಿನ ಚಕಮಕಿ | Kannada Prabha

ಸಾರಾಂಶ

ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹೆಬ್ರಿ, ಕುಚ್ಚೂರು ಮತ್ತು ಮಾಂಡಿಮೂರ್ ಕೈ ಸಂಪರ್ಕಿಸುವ ಪ್ರಮುಖ ರಸ್ತೆಯ ಕಾಮಗಾರಿ ಈಗ ವಿವಾದಕ್ಕೆ ಕಾರಣವಾಗಿದೆ.

ಹೆಬ್ರಿ: ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹೆಬ್ರಿ, ಕುಚ್ಚೂರು ಮತ್ತು ಮಾಂಡಿಮೂರ್ ಕೈ ಸಂಪರ್ಕಿಸುವ ಪ್ರಮುಖ ರಸ್ತೆಯ ಕಾಮಗಾರಿ ಈಗ ವಿವಾದಕ್ಕೆ ಕಾರಣವಾಗಿದೆ. ರಸ್ತೆ ಅಗಲೀಕರಣ ಮಾಡದೆ, ಪ್ರಸ್ತುತ ಇರುವ ರಸ್ತೆಯ ಮೇಲೆಯೇ ಅಸಮರ್ಪಕವಾಗಿ ಡಾಂಬರೀಕರಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಹೆಬ್ರಿ ಕುಚ್ಚೂರು ಭಾಗದ ಗ್ರಾಮಸ್ಥರು ಕಾಮಗಾರಿ ತಡೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.​ರಸ್ತೆಯ ಇಕ್ಕೆಲಗಳಲ್ಲಿನ ಸಂಚಾರ ದಟ್ಟಣೆಯಿಂದಾಗಿ ಪ್ರಯಾಣಿಕರು ನಿರಂತರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮೊದಲೇ ನಿರ್ಧರಿಸಿದಂತೆ ರಸ್ತೆ ಅಗಲೀಕರಣ ಮಾಡಿಯೇ ಡಾಂಬರೀಕರಣ ಮಾಡಬೇಕು, ಇಲ್ಲದಿದ್ದರೆ ಕಾಮಗಾರಿ ಬೇಡ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಹೆಬ್ರಿ ಠಾಣಾಧಿಕಾರಿ ರವಿ ಬಿ.ಕೆ., ಪಿಡಬ್ಲ್ಯೂಡಿ ಇಂಜಿನಿಯರ್ ತ್ರಿನೇಂದ್ರ ಮತ್ತು ಗುತ್ತಿಗೆದಾರ ವಾದಿರಾಜ ಶೆಟ್ಟಿ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು. ಅರಣ್ಯ ಇಲಾಖೆಯ ಅನುಮತಿ (ಎಫ್.ಸಿ.) ಸಿಗುವುದು ವಿಳಂಬವಾಗಿರುವುದರಿಂದ ರಸ್ತೆ ಅಗಲೀಕರಣ ಬಾಕಿ ಉಳಿದಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು. ಸದ್ಯ ಮಳೆಗಾಲ ಆರಂಭವಾಗುತ್ತಿರುವುದರಿಂದ, ಮಳೆಗಾಲ ಕಳೆದ ನಂತರ ಡಿಸೆಂಬರ್‌ನಲ್ಲಿ ಅರಣ್ಯ ಇಲಾಖೆಯ ಸಮ್ಮತಿ ಪಡೆದು ರಸ್ತೆಯ ಮರು ಡಾಂಬರೀಕರಣ ಮತ್ತು ಅಗಲೀಕರಣವನ್ನು ಮಾಡಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಶಾಸಕ ಪರಿಶೀಲನೆ: ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಬುಧವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರೊಂದಿಗೆ ಮಾತನಾಡಿದ ಅವರು, ರಸ್ತೆ ಅಗಲೀಕರಣದ ಸಮಸ್ಯೆಯ ಕುರಿತು ನಾನು ಈಗಾಗಲೇ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಈ ರಸ್ತೆ ಅಗಲೀಕರಣಗೊಳ್ಳಲಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಯಾವುದೇ ಗೊಂದಲ ಬೇಡ ಎಂದು ಆಶ್ವಾಸನೆ ನೀಡಿದರು.

​ಕಾಮಗಾರಿ ನಿಲ್ಲಿಸಲು ಸೂಚನೆ: ​ಮತ್ತೊಂದೆಡೆ, ಸ್ಥಳೀಯರ ದೂರಿನ ಮೇರೆಗೆ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ ಅವರು, ಕೇವಲ ಫೈಲ್ ಕ್ಲೋಸ್ ಮಾಡಲು ಚೆನ್ನಾಗಿರುವ ರಸ್ತೆಗೆ ಪುನಃ ಡಾಂಬರು ಹಾಕುವ ಅಗತ್ಯವೇನಿದೆ? ಈಗ ಕಾಮಗಾರಿ ಮುಗಿಸಿ ಹೋದರೆ ಮುಂದೆ ರಸ್ತೆ ಅಗಲೀಕರಣವಾಗುವುದಿಲ್ಲ. ಈಗ ಮಳೆಗಾಲವೂ ಆರಂಭವಾಗಿರುವುದರಿಂದ ತಕ್ಷಣ ಕೆಲಸ ನಿಲ್ಲಿಸಿ. ಇನ್ನು ಮೂರು-ನಾಲ್ಕು ತಿಂಗಳು ಕಾಯ್ದು, ಅರಣ್ಯ ಇಲಾಖೆಯ ಅನುಮತಿ ಸಿಕ್ಕ ನಂತರವೇ ವ್ಯವಸ್ಥಿತವಾಗಿ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ಮಾಡಿ ಎಂದು ಖಡಕ್ ಸೂಚನೆ ನೀಡಿದರು.ಸಾಮಾಜಿಕ ಹೋರಾಟಗಾರ ಕುಚ್ಚೂರು ಶ್ರೀಕಾಂತ್ ಪೂಜಾರಿ, ಚಾರ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷ ದಿನೇಶ್ ಶೆಟ್ಟಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ಕುಂಠಿತ
ಈರಣ್ಣ ಮೆಳ್ಳಿಗೇರಿ ತಂಡಕ್ಕೆ ಪ್ರಿಮಿಯರ್ ಲೀಗ್, ನಗದು ₹೨ ಲಕ್ಷ ಬಹುಮಾನ