ಕನ್ನಡಪ್ರಭ ವಾರ್ತೆ ವಿಜಯಪುರರಾಜ್ಯದಲ್ಲಿ ಒಂದೇ ಒಂದು ಅಡಿ ರಸ್ತೆ ನಿರ್ಮಿಸಿಲ್ಲ, ಯಾವ ಅಭಿವೃದ್ಧಿ ಕಾಮಗಾರಿಗೂ ಅಡಿಗಲ್ಲು ಹಾಕಿಲ್ಲ, ಇದೇ ಕಾಂಗ್ರೆಸ್ ಸರ್ಕಾರದ ಸುವರ್ಣಾಕ್ಷರಗಳಲ್ಲಿ ಬರೆದಿರುವ ಸಾಧನೆ. ಕಾಂಗ್ರೆಸ್ ಆಡಳಿತ ಘಟ್ಟದಲ್ಲಿ ಕರ್ನಾಟಕದ ಜನತೆ ವೇದನೆ ಅನುಭವಿಸುವಂತಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯದಲ್ಲಿ ಒಂದೇ ಒಂದು ಅಡಿ ರಸ್ತೆ ನಿರ್ಮಿಸಿಲ್ಲ, ಯಾವ ಅಭಿವೃದ್ಧಿ ಕಾಮಗಾರಿಗೂ ಅಡಿಗಲ್ಲು ಹಾಕಿಲ್ಲ, ಇದೇ ಕಾಂಗ್ರೆಸ್ ಸರ್ಕಾರದ ಸುವರ್ಣಾಕ್ಷರಗಳಲ್ಲಿ ಬರೆದಿರುವ ಸಾಧನೆ. ಕಾಂಗ್ರೆಸ್ ಆಡಳಿತ ಘಟ್ಟದಲ್ಲಿ ಕರ್ನಾಟಕದ ಜನತೆ ವೇದನೆ ಅನುಭವಿಸುವಂತಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಈ ಕುರಿತು ಪ್ರಕಟಣೆ ನೀಡಿದ ಅವರು, ರಾಜ್ಯ ಸರ್ಕಾರದ ನಡೆಯನ್ನು ಟೀಕಿಸಿದ್ದು, ರಾಜ್ಯ ಸರ್ಕಾರ ಕೋಟಿ ಕೋಟಿ ರೂ. ಖರ್ಚು ಮಾಡಿ ಸಾಧನಾ ಸಮಾವೇಶ ಸಂಘಟಿಸಿ ತನ್ನ ಬೆನ್ನು ತಾನೇ ಚಪ್ಪರಿಸಿಕೊಳ್ಳುತ್ತಿದೆ. ಯಾವ ಸಾಧನೆಯನ್ನೂ ಮಾಡದೇ ಯಾವ ಮುಖ ಇಟ್ಟುಕೊಂಡು ಸಾಧನಾ ಸಮಾವೇಶ ಮಾಡುತ್ತಿದ್ದಾರೋ ಗೊತ್ತಿಲ್ಲ. ಅಭಿವೃದ್ಧಿಯಂತೂ ಸಂಪೂರ್ಣ ಕುಂಠಿತಗೊಂಡಿದೆ. ಒಂದೇ ಒಂದು ಅಡಿ ರಸ್ತೆಗೆ ಈ ಸರ್ಕಾರ ಅನುಮೋದನೆ ನೀಡಿಲ್ಲ, ಇನ್ನೊಂದೆಡೆ ಯಾವ ಹೊಸ ಯೋಜನೆಗಳು ಇಲ್ಲ. ಆಡಳಿತ ಪಕ್ಷದ ಶಾಸಕರೇ ಈ ಬಗ್ಗೆ ಅನೇಕ ಬಾರಿ ಅಸಮಾಧಾನ ಹೊರಹಾಕಿದ್ದಾರೆ, ಈ ಅಸಮಾಧಾನವೇ ಕಾಂಗ್ರೆಸ್ ಪಕ್ಷದ ಸಾಧನೆಯಾಗಿವೆ ಹೊರತು ಯಾವ ಅಭಿವೃದ್ಧಿ ಯೋಜನೆಗಳೂ ಇಲ್ಲ ಎಂದರು.

ಜನತೆ ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ. ಅಭಿವೃದ್ಧಿ, ಶಿಕ್ಷಣ, ನೀರಾವರಿಗೆ ಆದ್ಯತೆ ನೀಡಿ ಪ್ರತಿಯೊಬ್ಬರ ಬದುಕನ್ನು ಹಸನುಗೊಳಿಸಬೇಕಾದ ರಾಜ್ಯ ಸರ್ಕಾರ ಕೇವಲ ಅರ್ಥವಿಲ್ಲದ ರಾಜಕಾರಣ ಮಾಡುವಲ್ಲಿಯೇ ಕಾಲಹರಣ ಮಾಡುತ್ತಿದೆ. ದಿನಬೆಳಗಾದರೆ ಕುರ್ಚಿ ಕಾದಾಟ, ಇವರಿಬ್ಬರ ಜಗಳದಲ್ಲಿ ಸಾರ್ವಜನಿಕರ ಹಿತಾಸಕ್ತಿ ಬಲಿಯಾಗುತ್ತಿದೆ. ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದ್ದು, ಯಾವ ರೀತಿ ಸಾಧನೆ ಮಾಡಿದ್ದಾರೆ ಎಂಬುದನ್ನು ಮೊದಲು ರಾಜ್ಯ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು. ರಾಜ್ಯವನ್ನು ಅಭಿವೃದ್ಧಿ ಮಾಡಬೇಕು ಆನಂತರ ಸಾಧನಾ ಸಮಾವೇಶ ಮಾಡಿಕೊಂಡರೆ ಒಂದು ಅರ್ಥ ಇರುತ್ತದೆ ಎಂದು ಜಿಗಜಿಣಗಿ ಹೇಳಿದ್ದಾರೆ.