ಮರಿಯಮ್ಮನಹಳ್ಳಿ: ಇಲ್ಲಿಗೆ ಸಮೀಪದ ಡಣಾಯಕನಕೆರೆ ಮತ್ತು ಗೊಲ್ಲರಹಳ್ಳಿ ಗ್ರಾಮದ ಬಳಿ ಲಕ್ಷ್ಮಿಪ್ರಿಯಾ ಸ್ಟೀಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಉದ್ಯಮ ವಿಸ್ತರಣೆಗಾಗಿ ಬುಧವಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಾರ್ವಜನಿಕ ಆಲಿಕೆ ಸಭೆ ನಡೆಯಿತು.
ಆರಂಭದಲ್ಲಿ ಕಾರ್ಖಾನೆಯ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿ, ಐರನ್ ಓರ್ ಪ್ರತ್ಯಕೀಕರಣ ಘಟಕ, ಕಲ್ಲಿದ್ದಲು ಆಧಾರಿತ ಡಿಆರ್‌ಐ ಘಟಕ (ಸ್ಪಾಂಜ್ ಐರನ್) ಉತ್ಪಾದನಾ ಸಾಮರ್ಥ್ಯವನ್ನು 100 ಟಿಪಿಡಿಯಿಂದ 195 ಟಿಪಿಡಿ ವರೆಗೆ ವಿಸ್ತರಿಸಲು ಹಾಗೂ ಹೆಚ್ಚುವರಿ ಸೌಲಭ್ಯಗಳಾದ 5 ಎಂಡಬ್ಲೂ ಸಾಮರ್ಥ್ಯದ ತ್ಯಾಜ್ಯಶಾಖಾ ಚೇತರಿಕೆ ಆಧಾರಿತ ವಿದ್ಯುತ್ ಸ್ಥಾವರ ವಿಸ್ತರಣೆ, ಕಬ್ಬಿಣದ ಅದಿರು ಬೆನಿಫಿಶಿಯೇಷನ್ ಪ್ಲಾಂಟ್ ಘಟಕಗಳನ್ನು ಅಸ್ತಿತ್ವದಲ್ಲಿರುವ ಒಟ್ಟು 28.56 ಎಕರೆ (11.55 ಹೆಕ್ಟೇರ್) ಪ್ರದೇಶದಲ್ಲಿ ಯೋಜನೆಯನ್ನು ಸ್ಥಾಪಿಸುವ ಸಂಬಂಧ ಯೋಜನೆಯ ಮಾಹಿತಿ ನೀಡಿದರು.ಕಾರ್ಖಾನೆಯಲ್ಲಿ ಈಗಿರುವ ಕಾರ್ಮಿಕರೊಂದಿಗೆ ಇನ್ನೂ ಹೆಚ್ಚಿನ ಜನರಿಗೆ ಉದ್ಯೋಗ ಲಭಿಸಲಿದೆ. ಇದರಿಂದ ಗ್ರಾಮೀಣ ಜನರ ಆರ್ಥಿಕಾಭಿವೃದ್ದಿ ಆಗಲಿದೆ. ಕಂಪನಿಯ ಯೋಜನೆಯ ವಿಸ್ತರಣೆ ಸಲುವಾಗಿ ಕೈಗೊಂಡ ಉದ್ದೇಶ ಹಾಗೂ ಉದ್ಯೋಗಾವಕಾಶವು ಈ ಯೋಜನೆಯ ವಿಸ್ತರಣೆಯಿಂದ ದೊರೆಯಲಿದೆ ಎಂದು ಕಂಪನಿಯ ಅಧಿಕಾರಿಗಳು ಸಾರ್ವಜನಿಕರಿಗೆ ವಿವರಿಸಿದರು. ಕೆಲವು ಸ್ಥಳೀಯ ರೈತರು, ಸಂಘ-ಸಂಸ್ಥೆಯ ಪದಾಧಿಕಾರಿಗಳು ಕಾರ್ಖಾನೆಯ ಪರವಾಗಿ ಮಾತನಾಡಿದರು. ಲಕ್ಷ್ಮಿಪ್ರಿಯಾ ಸ್ಟೀಲ್ ಪ್ರೈವೇಟ್ ಲಿಮಿಟೆಡ್‌ನಿಂದ ಸ್ಥಳೀಯ ಗ್ರಾಮಸ್ಥರಿಗೆ ಸಾಕಷ್ಟು ನೆರವು ಮತ್ತು ಉದ್ಯೋಗಾವಕಾಶವನ್ನು ಕಲ್ಪಿಸಲಾಗಿದೆ. ಕಾರ್ಖಾನೆ ವಿಸ್ತರಣೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಸಭೆಯಲ್ಲಿ ಕೈಬೆರಳಷ್ಟು ಜನರು ಮಾತ್ರ ಕಾರ್ಖಾನೆಯ ವಿರುದ್ಧ ಮಾತನಾಡಿದರು. ಕಾರ್ಖಾನೆಯಿಂದ ರೈತರ ಹೊಲ-ಗದ್ದೆಗಳಿಗೆ ವಿಪರೀತ ಧೂಳು ಆವರಿಸುತ್ತಿದೆ. ಇದರಿಂದಾಗಿ ಬೆಳೆಗಳು ಸರಿಯಾಗಿ ಬೆಳೆಯುತ್ತಿಲ್ಲ. ರೈತರಿಗೆ ಕಾರ್ಖಾನೆಯವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಕಡಿಮೆ ಹಣಕ್ಕೆ ರೈತರಿಂದ ಹೊಲಗಳನ್ನು ಖರೀದಿ ಮಾಡಿದ್ದಾರೆ. ದನ-ಕರುಗಳಿಗೆ ಸರಿಯಾಗಿ ಮೇವು ದೊರೆಯುತ್ತಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.ಕೊನೆಯಲ್ಲಿ ಅಪರ ಜಿಲ್ಲಾಧಿಕಾರಿ ಜಿ. ಅನುರಾಧಾ ಮಾತನಾಡಿ, ಸಭೆಯಲ್ಲಿ 150ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ. ಎಲ್ಲ ಅರ್ಜಿಗಳನ್ನು ಪರಿಶೀಲನೆ ನಡೆಸಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳುಹಿಸಿಕೊಡುತ್ತೇವೆ. ಲಕ್ಷ್ಮಿಪ್ರಿಯಾ ಸ್ಟೀಲ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡಮರಗಳು ಹೆಚ್ಚಾಗಿ ಕಂಡು ಬರುತ್ತಿಲ್ಲ. ಪರಿಸರ ಸಂರಕ್ಷಣೆಗಾಗಿ ಕಾರ್ಖಾನೆಯವರು ಹೆಚ್ಚಾಗಿ ಗಿಡಮರಗಳನ್ನು ಬೆಳೆಸಬೇಕು ಎಂದು ಹೇಳಿದರು. ವಿಜಯನಗರ ಜಿಲ್ಲಾ ಹಿರಿಯ ಪರಿಸರ ಅಧಿಕಾರಿ ಬಿ.ಎಸ್. ಮುರಳೀಧರ, ವಿಜಯನಗರ ಪರಿಸರ ಹಾಗೂ ಮಾಲಿನ್ಯ ನಿಯಂತ್ರಣಾಧಿಕಾರಿ ಎಸ್.ಸಿ. ಸುರೇಶ್ ಹಾಗೂ ಸ್ಥಳೀಯ ಅಧಿಕಾರಿಗಳು ಭಾಗವಹಿಸಿದ್ದರು.