ಚನ್ನಪಟ್ಟಣ: ಕೆಪಿಎಸ್ ಮ್ಯಾಗ್ನೆಟ್ ಶಾಲೆಯ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ನಡೆಯನ್ನು ಖಂಡಿಸಿ ನಗರದ ಸಾತನೂರು ಸರ್ಕಲ್ ಬಳಿ ಜಮಾಯಿಸಿದ ಎಐಡಿಎಸ್‌ಒ ಸಂಘಟನೆ ಹಾಗೂ ಗ್ರಾಮಸ್ಥರು ಬಹಿರಂಗ ಪ್ರತಿಭಟನಾ ಸಭೆ ನಡೆಸಿದರು.
ಹೊಂಗನೂರಿನಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಯನ್ನು ಸ್ಥಾಪಿಸಿ, ಸಂತೆ ಮೊಗೇನಹಳ್ಳಿ, ಹೊಡಿಕೆ ಹೊಸಳ್ಳಿ, ಕನ್ನಿದೊಡ್ಡಿ, ಅಮ್ಮಳ್ಳಿ ದೊಡ್ಡಿ, ಸುಣ್ಣಘಟ್ಟ, ಮೊಗೆನಹಳ್ಳಿ ದೊಡ್ಡಿ, ಚನ್ನಂಕೇಗೌಡನ ದೊಡ್ಡಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಆದೇಶ ಹೊರಡಿಸಿರುವುದನ್ನು ಖಂಡಿಸಿದರು. ರಾಜ್ಯದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಹೆಸರಿನಲ್ಲಿ ೪೦,೦೦೦ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾರ್ಮಿಕ ಮುಖಂಡೆ ಎಂ.ಉಮಾದೇವಿ ಮಾತನಾಡಿ, ಎಲ್ಲ ಸಾರ್ವಜನಿಕ ವಲಯಗಳನ್ನು ಖಾಸಗೀಕರಿಣಗೊಳಿಸಿ, ಈಗ ಶಿಕ್ಷಣ ಕ್ಷೇತ್ರಕ್ಕೂ ಕೈ ಹಾಕಿದ್ದಾರೆ. ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿಲ್ಲ. ಅವರನ್ನು ಸಮಾಜ ಸೇವಕಿಯರೆಂದೆ ಪರಿಗಣಿಸಿ ಸೂಕ್ತ ಸಂಬಳ ನೀಡದೆ ಪರಿದಾಡಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ಮುಚ್ಚಿದರೆ, ಅವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ಈ ಮ್ಯಾಗ್ನೆಟ್ ಶಾಲೆಗಳು ಅಸ್ತಿತ್ವಕ್ಕೆ ಬಂದರೆ, ಮುಂದೆ ನಮ್ಮ ನಿಮ್ಮ ಮಕ್ಕಳಿಗೆ ಶಿಕ್ಷಣ ಕನಸಿನ ಮಾತಾಗುತ್ತದೆ. ಕಳೆದ ೨ ತಿಂಗಳ ಹಿಂದೆ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯಿಂದ ಸಾರ್ವಜನಿಕ ಶಿಕ್ಷಣ ಉಳಿಸಲೆಂದೇ, ೫೦ ಲಕ್ಷ ಸಹಿ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಿದರು. ಒಂದೇ ಒಂದು ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಮಾತು ಕೊಟ್ಟ ಸರ್ಕಾರ ಈಗ ಈ ಯೋಜನೆ ತಂದಿದೆ ಎಂದರು.ಎಐಕೆಕೆಎಂಸ್ ರೈತ ಸಂಘಟನೆಯ ಮುಖಂಡ ಎಚ್.ಪಿ.ಶಿವಪ್ರಕಾಶ್ ಮಾತನಾಡಿ, ಶಿಕ್ಷಣ ಖಾಸಗೀಕರಣವಾದರೆ ಅದು ಶ್ರೀಮಂತ ವರ್ಗದವರ ಸ್ವತ್ತಾಗುತ್ತದೆ. ರೈತರು, ಕಾರ್ಮಿಕರು, ದಿನಗೂಲಿಗರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಶಾಲೆಗಳನ್ನು ಮುಚ್ಚಿದರೆ ಆ ಮಕ್ಕಳ ಗತಿ ಏನು? ರೈತ ಕಾರ್ಮಿಕರು ಒಂದಾಗಿ ನಮ್ಮ ಮಕ್ಕಳಿಗೋಸ್ಕರ ಹೋರಾಟ ನಡೆಸಬೇಕು ಎಂದರು.
ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, ಸಂಪುಟ ಸಭೆಯಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅನುಷ್ಠಾನಕ್ಕೆ ತರಬೇಕೆಂದು ತೀರ್ಮಾನಿಸಿದ್ದಾರೆ. ಸರ್ಕಾರ ಬಿಡುಗಡೆ ಮಾಡಿದ ಆದೇಶದ ಪ್ರಕಾರ, ಈ ಶಾಲೆಗಳ ವ್ಯವಸ್ಥೆ ಹೊರಗುತ್ತಿಗೆಯಿಂದ ನಡೆಯಬೇಕು, ತಮ್ಮ ಆದಾಯವನ್ನು ತಾವೇ ಸೃಷ್ಟಿಸಿಕೊಳ್ಳಬೇಕು ಎಂದಿದೆ. ಅಂದರೆ ಪೋಷಕರಿಂದಲೇ ಹಣ ವಸೂಲಿ ಮಾಡಬೇಕೆಂದು ಹೇಳುತ್ತಿದ್ದಾರೆ. ಮಂಡ್ಯದಲ್ಲಿರುವ ಕೆಪಿಎಸ್ ಶಾಲೆಗೆ ಬರುವ ಮಕ್ಕಳು ೪೮೦೦ ರುಪಾಯಿ ಕೊಟ್ಟು ಬಸ್ ಗಳಲ್ಲಿ ಶಾಲೆಗೆ ಬರಬೇಕಾಗಿದೆ ಎಂದು ಆರೋಪಿಸಿದರು.ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ೩ ತಿಂಗಳ ಹಿಂದೆ ಸಂತೆಮೊಗೇನಹಳ್ಳಿ ಸರ್ಕಾರಿ ಶಾಲೆ ಮುಚ್ಚಬೇಕೆಂಬ ಆದೇಶ ಕಳಿಸಿದ್ದು, ಅಧಿಕಾರಿಗಳು ನಿಮ್ಮ ಮಕ್ಕಳನ್ನು ಹೊಂಗನೂರಿನ ಮ್ಯಾಗ್ನೆಟ್ ಶಾಲೆಗೆ ಕಳಿಸಬೇಕೆಂದು ಒತ್ತಾಯಿಸಿದರು. ಹೊಂಗನೂರಿಗೆ ಸಾರಿಗೆ ವ್ಯವಸ್ಥೆ ಇಲ್ಲದೆ, ಪೋಷಕರೇ ಬೇರೆ ದಾರಿಯಿಲ್ಲದೆ ೭೫೦ ರು. ಕೊಟ್ಟು ಮಕ್ಕಳನ್ನು ಬಸ್‌ಗಳಲ್ಲಿ ಕಲಿಸುತ್ತಿದ್ದಾರೆ. ನಮಗೆ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಬೇಡ, ನಮ್ಮೂರ ಸರ್ಕಾರಿ ಶಾಲೆಯನ್ನು ಮುಚ್ಚಲು ನಾವು ಬಿಡುವುದಿಲ್ಲ ಎಂದರು.
ಎಐಡಿಎಸ್‌ಒ ರಾಜ್ಯ ಅಧ್ಯಕ್ಷೆ ಅಶ್ವಿನಿ, ರಾಜ್ಯ ಉಪಾಧ್ಯಕ್ಷೆ ಅಪೂರ್ವ, ಬೆಂಗಳೂರು ದಕ್ಷಿಣ ಜಿಲ್ಲೆ ಸಂಚಾಲಕ, ರೋಹಿತ್, ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಕಲ್ಯಾಣ್ ಕುಮಾರ್ ಇತರರಿದ್ದರು. ಪ್ರತಿಭಟನಾ ಸಭೆ ನಂತರ ಡಿಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.ಪೊಟೋ೫ಸಿಪಿಟಿ೧: ಚನ್ನಪಟ್ಟಣ ನಗರದ ಸಾತನೂರು ಸರ್ಕಲ್ ಬಳಿ ಎಐಡಿಎಸ್‌ಒ ಸಂಘಟನೆಯಿಂದ ಬಹಿರಂಗ ಪ್ರತಿಭಟನಾ ಸಭೆ ನಡೆಯಿತು.