ಬಾಣಾವರ ಕೆಪಿಎಸ್ ಶಾಲೆ ಬೇಡ ಎಂದ ಗ್ರಾಮಸ್ಥರು

KannadaprabhaNewsNetwork |  
Published : May 24, 2026, 01:45 AM IST
23ಎಚ್ಎಸ್ಎನ್11 | Kannada Prabha

ಸಾರಾಂಶ

ಬಾಣಾವರ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಚಿಕ್ಕಣ್ಣನಕೊಪ್ಪಲು ಮತ್ತು ಬಾಗಿಲಘಟ್ಟ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲು ಸರ್ಕಾರ ಮುಂದಾಗಿರುವುದು ಅಪ್ರಜಾತಾಂತ್ರಿಕ ಕ್ರಮ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಲಾಯಿತು. ಅರಸೀಕೆರೆ ತಾಲೂಕಿನಲ್ಲಿ ಐದು ಮ್ಯಾಗ್ನೆಟ್ ಶಾಲೆಗಳನ್ನು ತೆರೆಯುವ ನೆಪದಲ್ಲಿ ೫೦ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲು ಸರ್ಕಾರ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆಯ ಹೆಸರಿನಲ್ಲಿ ಗ್ರಾಮೀಣ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ತಾಲೂಕಿನ ಚಿಕ್ಕಣ್ಣನಕೊಪ್ಪಲು ಹಾಗೂ ಬಾಗಿಲಘಟ್ಟ ಗ್ರಾಮಗಳಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಗ್ರಾಮಸ್ಥರು ಪ್ರತಿಭಟನಾ ಸಭೆ ನಡೆಸಿ ಘೋಷಣೆ ಕೂಗಿದರು. ಬಾಣಾವರ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಚಿಕ್ಕಣ್ಣನಕೊಪ್ಪಲು ಮತ್ತು ಬಾಗಿಲಘಟ್ಟ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲು ಸರ್ಕಾರ ಮುಂದಾಗಿರುವುದು ಅಪ್ರಜಾತಾಂತ್ರಿಕ ಕ್ರಮ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಲಾಯಿತು.ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಸುಷ್ಮಾ ಮಾತನಾಡಿ, ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವಂತೆ ಜೂನ್ ತಿಂಗಳಿನಿಂದ ಹೊಸ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಆರಂಭಿಸಲು ಮುಂದಾಗಿದೆ. ಈ ಶಾಲೆಗಳ ೩ರಿಂದ ೫ ಕಿಲೋಮೀಟರ್‌ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಕುರಿತು ೨೦೨೫ರ ಅಕ್ಟೋಬರ್‌ ೧೫ರಂದು ಸರ್ಕಾರ ಆದೇಶ ಹೊರಡಿಸಿದೆ. ಅದರ ಪಟ್ಟಿ ಕೂಡ ಈಗ ಲಭ್ಯವಾಗಿದೆ ಎಂದು ಹೇಳಿದರು.“ನಮ್ಮೂರ ಶಾಲೆ ನಮ್ಮೂರಲ್ಲೇ ಉಳಿಯಬೇಕು ಮತ್ತು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಸಂಪೂರ್ಣ ರದ್ದಾಗಬೇಕು ಎಂದು ಕಳೆದ ಆರು ತಿಂಗಳಿಂದ ಪೋಷಕರು ಹಾಗೂ ಗ್ರಾಮಸ್ಥರು ಹೋರಾಟ ನಡೆಸುತ್ತಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಐದು ಮ್ಯಾಗ್ನೆಟ್ ಶಾಲೆಗಳನ್ನು ತೆರೆಯುವ ನೆಪದಲ್ಲಿ ೫೦ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲು ಸರ್ಕಾರ ಮುಂದಾಗಿದೆ. ಇದು ಬಡ, ರೈತ ಹಾಗೂ ಕೂಲಿ ಕಾರ್ಮಿಕರ ಮಕ್ಕಳ ಶಿಕ್ಷಣದ ಮೇಲೆ ಹೊಡೆತ ನೀಡುವ ಕ್ರಮ” ಎಂದು ಅವರು ಆರೋಪಿಸಿದರು.ನಂತರ ಮಾತನಾಡಿದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ರಂಗನಾಥ್, “ನಮ್ಮೂರಿನಲ್ಲಿ ಕಳೆದ ೬೦ ವರ್ಷಗಳಿಂದ ಶಾಲೆ ಉತ್ತಮವಾಗಿ ನಡೆಯುತ್ತಿದೆ. ಇಂತಹ ಶಾಲೆಗಳನ್ನು ಮುಚ್ಚಿ ಶಿಕ್ಷಣವನ್ನು ಖಾಸಗೀಕರಣದ ದಾರಿಗೆ ಒಯ್ಯಬಾರದು. ನಮ್ಮ ಗ್ರಾಮದ ಬಹುತೇಕ ಮಕ್ಕಳು ಬಡ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಸೇರಿದವರು. ಅವರಿಗೆ ದೂರದ ಬಾಣಾವಾರ ಶಾಲೆಗೆ ಹೋಗಿ ಓದುವುದು ಕಷ್ಟಕರ ಎಂದು ಆತಂಕ ವ್ಯಕ್ತಪಡಿಸಿದರು. “ಗ್ರಾಮದಲ್ಲೇ ರಸ್ತೆ ದಾಟುವಾಗ ಹಲವು ಅಪಘಾತಗಳು ನಡೆದಿವೆ. ಇಂತಹ ಪರಿಸ್ಥಿತಿಯಲ್ಲಿ ೨ರಿಂದ ೩ ಕಿಲೋಮೀಟರ್ ದೂರದ ಶಾಲೆಗೆ ಮಕ್ಕಳನ್ನು ಕಳುಹಿಸಲು ನಮಗೆ ಭರವಸೆ ಇಲ್ಲ. ಸರ್ಕಾರ ಗ್ರಾಮೀಣ ಶಾಲೆಗಳನ್ನು ಉಳಿಸಿ ಮಕ್ಕಳ ಭವಿಷ್ಯ ಕಾಪಾಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷೆ ಚೈತ್ರ, ಜಿಲ್ಲಾ ಕಾರ್ಯದರ್ಶಿ ಸುಷ್ಮಾ, ಗ್ರಾಮಸ್ಥರಾದ ಸಂಪತ್ ಕುಮಾರ್‌, ದೇವರಾಜು, ಗಣೇಶ್ ಪ್ರಸಾದ್, ರಂಗನಾಥ್, ಶೇಖರ್, ಮಾರುತಿ, ಉದಯ್ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳವಳ್ಳಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಎಚ್.ನಾಗೇಶ್ ಅಧ್ಯಕ್ಷ
ದುಡಿಯುವ ವರ್ಗ ಜಾತಿ, ಧರ್ಮ ಮೀರಿ ಒಂದಾಗಬೇಕು: ಜಿ.ಎನ್.ನಾಗರಾಜ್