ಕಾರ್ಕಳ: ನಿಟ್ಟೆ ಬಜಕಳದಲ್ಲಿ ಆರಂಭಗೊಳ್ಳಲಿರುವ ಹಾರುಬೂದಿ ಆಧಾರಿತ ಇಟ್ಟಿಗೆ ತಯಾರಿಕಾ ಘಟಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಸ್ಥಳೀಯ ಗ್ರಾಮಸ್ಥರು, ಪರಿಸರ ಮತ್ತು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿರುವ ಕಾರ್ಖಾನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.ಈ ಸಂಬಂಧ ಮಂಗಳವಾರ ನಿಟ್ಟೆ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ ನಡೆಯಿತು.
ನಿಟ್ಟೆಗುತ್ತು ಜಯರಾಜ ಶೆಟ್ಟಿ ಮಾತನಾಡಿ, ಆರಂಭದಲ್ಲಿ ಈ ಘಟಕಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಗ್ರಾಮ ಪಂಚಾಯಿತಿಯಲ್ಲಿ ಸತಾಯಿಸಲಾಗಿತ್ತು. ಇದೀಗ ಮಾಹಿತಿ ಹಕ್ಕಿನಡಿ ಎಲ್ಲಾ ದಾಖಲೆಗಳನ್ನು ಪಡೆದುಕೊಂಡಿದ್ದು, ಮುಂದಿನ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆದಿಂಜೆ ಸುಪ್ರೀತ್ ಶೆಟ್ಟಿ ಮಾತನಾಡಿ, ನಿಟ್ಟೆ ಗ್ರಾಮಕ್ಕೆ ಇಂತಹ ಕಾರ್ಖಾನೆಗಳ ಅಗತ್ಯವಿಲ್ಲ. ನಮಗೆ ಉದ್ಯಮಕ್ಕಿಂತ ಜನರ ಹಿತಾಸಕ್ತಿ ಮುಖ್ಯ ಎಂದರು.ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಭಾಶ್ಚಂದ್ರ ಹೆಗ್ಡೆ ಮಾತನಾಡಿ, ಕಳೆದ ಗ್ರಾಮಸಭೆಯಲ್ಲಿ ಈ ಕಾರ್ಖಾನೆಯ ಕುರಿತು ಮಾಹಿತಿ ಕೇಳಿದಾಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದರು. ಆದರೆ ನಂತರದಲ್ಲಿ ಘಟಕದ ಕುರಿತ ಹಲವು ವಿಚಾರಗಳು ಬಹಿರಂಗವಾಗಿವೆ. ಇದರ ವಿರುದ್ಧ ಹೋರಾಟ ಮುಂದುವರಿಸಲಾಗುವುದು ಎಂದರು.ಪ್ರಕಾಶ್ ಆಚಾರ್ಯ ಕುಂಟಾಡಿ ಮಾತನಾಡಿ, ಪರಿಸರಕ್ಕೆ ಹಾನಿಕಾರಕವಾದ ಇಂತಹ ಉದ್ಯಮಕ್ಕೆ ಗ್ರಾಮದಲ್ಲಿ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ದಯಾನಂದ ಶೆಟ್ಟಿ, ದಿವಾಕರ ಶೆಟ್ಟಿ, ಮನ್ಮಥ ಕುಮಾರ್ ಶೆಟ್ಟಿ, ಸಂತೋಷ್, ಸುರೇಶ್ ಶೆಟ್ಟಿ, ಪ್ರವೀಣ್ ಕೋಟ್ಯಾನ್, ಆನಂದ ಜೋಸೆಫ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.