ಓಪಿಎಸ್ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ: ಹನುಮಂತಪ್ಪ

KannadaprabhaNewsNetwork |  
Published : Oct 08, 2025, 01:01 AM IST
ಫೋಟೋ ಅ.೭ ವೈ.ಎಲ್.ಪಿ. ೦೪ ಶಿಕ್ಷಕರ ಹಕ್ಕುಗಳ ಕುರಿತು ಜಾಗೃತಿ ಹಾಗೂ ಸಂಘದ ಬಲವರ್ಧನೆ ಸಭೆಗೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ ಭರವಸೆಯಂತೆ ಹಳೆಯ ಪಿಂಚಣಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ.

ಶಿಕ್ಷಕರ ಹಕ್ಕುಗಳ ಕುರಿತು ಜಾಗೃತಿ ಹಾಗೂ ಸಂಘದ ಬಲವರ್ಧನೆ ಸಭೆ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ ಭರವಸೆಯಂತೆ ಹಳೆಯ ಪಿಂಚಣಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಪಿಂಚಣಿ ವಂಚಿತರ ಸಂಘದ ರಾಜ್ಯಾಧ್ಯಕ್ಷ ಜಿ. ಹನುಮಂತಪ್ಪ ಎಚ್ಚರಿಸಿದರು.

ಪಟ್ಟಣದ ಹೋಲೀ ರೋಜರಿ ಪ್ರೌಢಶಾಲೆಯಲ್ಲಿ ರಾಜ್ಯದ ಪಿಂಚಣಿ ವಂಚಿತ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ ಬೆಂಗಳೂರು ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯ ಅನುದಾನಿತ ನೌಕರರ ಸಂಘ ಇವುಗಳ ಆಶ್ರಯದಲ್ಲಿ ನಡೆದ ಶಿಕ್ಷಕರ ಹಕ್ಕುಗಳ ಕುರಿತು ಜಾಗೃತಿ ಹಾಗೂ ಸಂಘದ ಬಲವರ್ಧನೆ ಸಭೆಯಲ್ಲಿ ಮಾತನಾಡಿದರು.

ಅನುದಾನಿತ ನೌಕರರ ಸಮಸ್ಯೆಗೆ ಹೋರಾಟವೊಂದೇ ಪರಿಹಾರವಾಗಿದೆ. ಅನುದಾನಿತ ವಿದ್ಯಾಸಂಸ್ಥೆಗಳ ಮತ್ತು ಅಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರು, ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿ ಉಳಿವಿಗಾಗಿ ರಾಜ್ಯಾದ್ಯಂತ ಒಂದು ಸಮಗ್ರ ಸಂಘಟನೆಯ ಅತ್ಯವಶ್ಯಕತೆ ಇದೆ. ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದ ಭರವಸೆಯಂತೆ ಹಳೆ ಪಿಂಚಣಿ ಯೋಜನೆ ಜಾರಿಗೆ ಶೀಘ್ರವಾಗಿ ತರಬೇಕು. ಕಳೆದ ಚುನಾವಣೆಯಲ್ಲಿ ವೋಟ್ ಪಾರ್ ಓಪಿಎಸ್ ಅಭಿಯಾನ ಮಾಡಿದ್ದೆವು. ಅಂತೆಯೇ ಅಧಿಕಾರಕ್ಕೆ ಬಂದ ಸರ್ಕಾರ ತಕ್ಷಣದಿಂದ ಮಾತು ಕೊಟ್ಟಂತೆ ನಮ್ಮ ಪಿಂಚಣಿ ಜಾರಿಗೆ ತರಬೇಕು. ಸಾವಿರಾರು ನಿವೃತ್ತ ಶಿಕ್ಷಕರು, ನಿವೃತ್ತಿಯಾಗಲಿರುವವರು ಬೀದಿಗೆ ಹೋಗುವ ಸ್ಥಿತಿ ಆಗಬಾರದು ಎಂದು ಮಾರ್ಮಿಕವಾಗಿ ಹೇಳಿದರು.

ಏ.೧, ೨೦೦೬ರ ನಂತರ ಸೇವೆಗೆ ಸೇರಿರುವ ಅಥವಾ ಮೊದಲೇ ಸೇವೆಗೆ ಸೇರಿ ನಂತರ ಅನುದಾನಕ್ಕೆ ಒಳಪಟ್ಟಿರುವ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯವಾಗಲಿ ಅಥವಾ ನೂತನ ಪಿಂಚಣಿ ಸೌಲಭ್ಯವಾಗಲಿ ಇರುವುದಿಲ್ಲ. ಇದರಿಂದ ಸಾವಿರಾರು ನೌಕರರು ತಮ್ಮ ಕೊನೆ ತಿಂಗಳ ಸಂಬಳವನ್ನು ಮಾತ್ರ ಪಡೆದು ಬರಿಗೈಯಲ್ಲಿ ನಿವೃತ್ತರಾಗಿರುತ್ತಾರೆ. ಭವಿಷ್ಯದಲ್ಲಿ ಪ್ರತಿಯೊಬ್ಬರೂ ಪಿಂಚಣಿ ವಂಚಿತರಾಗಿ ಬದುಕನ್ನು ನಡೆಸುವ ಹೀನಾಯ ಸ್ಥಿತಿಗೆ ತಲುಪಬಾರದು ಎಂಬ ಬಗ್ಗೆ ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದರು.

ಸರ್ಕಾರಿ ನೌಕರರಿಗೆ ನೀಡುತ್ತಿರುವ ಆರೋಗ್ಯ ಸಂಜೀವಿನಿ ಅಥವಾ ಇತರೆ ಯಾವುದೇ ಆರೋಗ್ಯ ಸೌಲಭ್ಯಗಳನ್ನು ಅನುದಾನಿತ ನೌಕರರಿಗೆ ನೀಡಿರುವುದಿಲ್ಲ. ಕಳೆದ ೨೩ ವರ್ಷಗಳಿಂದ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಸರ್ಕಾರ ತುಂಬಿಕೊಂಡಿರುವುದಿಲ್ಲ. ಸರ್ಕಾರಿ ಶಾಲೆಗಳ ಮಕ್ಕಳಿಗೆ ನೀಡುತ್ತಿರುವ ಕೆಲವು ಸೌಲಭ್ಯಗಳನ್ನು ಅನುದಾನಿತ ಶಾಲೆ ಕಾಲೇಜುಗಳ ಮಕ್ಕಳಿಗೆ ನೀಡುತ್ತಿಲ್ಲ. ಸಂಸ್ಥೆಯ ಮಾನ್ಯತೆ ನವೀಕರಣಕ್ಕೆ ಸಂಬಂಧಪಟ್ಟಂತೆ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ತುಂಬಾ ತೊಂದರೆ ಕೊಡುತ್ತಿದೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಶಿರಸಿ ವಿಭಾಗದಿಂದ ಪ್ರಮುಖರಾದ ಬಸಪ್ಪ ತಳವಾರ, ಅನುದಾನಿತ ಕಾಲೇಜಿನ ಪ್ರಾಂಶುಪಾಲ ಡಿ.ಆರ್. ಹೆಗಡೆ, ಹಳಿಯಾಳದ ಶಿವಾನಂದ ಬಡಿಗೇರ್, ಮುಂಡಗೋಡದಿಂದ ವಿನಾಯಕ ಶೇಟ, ಯಲ್ಲಾಪುರದಿಂದ ಮುಕ್ತಾ ಶಂಕರ, ರಾಜರಾಜೇಶ್ವರೀ ಮಂಚೀಕೇರಿಯ ಸದಾನಂದ ನಾಯ್ಕ ಉಪಸ್ಥಿತರಿದ್ದರು.

ಸಂಘಟಕ ಎಂ. ರಾಜಶೇಖರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನೆಲ್ಸನ ಗೋನ್ಸಾಲ್ವಿಸ ನಿರ್ವಹಿಸಿದರು. ವೆಂಕಟ್ರಮಣ ಭಟ್ಟ ವಂದಿಸಿದರು.

ಸಭೆಯಲ್ಲಿ ಶಿರಸಿಯ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ, ಶಿಕ್ಷಕ, ಉಪನ್ಯಾಸಕರು, ಬೋಧಕೇತರರು ಭಾಗವಹಿಸಿದ್ದರು.

PREV

Recommended Stories

ರಾಜ್ಯದಲ್ಲಿ 18500 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌ : ಕಾಗೆ