ಕನ್ನಡಪ್ರಭ ವಾರ್ತೆ ಬ್ಯಾಡಗಿ
ಪಟ್ಟಣದ ಆರಾಧ್ಯದೈವ ಶ್ರೀ ವೀರಭದ್ರೇಶ್ವರ ಮತ್ತು ಶ್ರೀ ಕಲ್ಮೇಶ್ವರ ದೇವರ ಜಾತ್ರಾಮಹೋತ್ಸವ ಕಾರ್ಯಕ್ರಮ ಸಡಗರ ಸಂಭ್ರಮ ಮತ್ತು ಶ್ರದ್ಧಾಭಕ್ತಿಯಿಂದ ಸೋಮವಾರ ನೆರವೇರಿತು.ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆಯಿಂದಲೇ ಎರಡೂ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಹವನ ಹೋಮ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳು ಜರುಗಿದವು.
ಪಟ್ಟಣದ ವಿವಿಧ ಮನೆಗಳಲ್ಲಿ ಪೂಜಿಸಲಾಗುವ ಶ್ರೀ ವೀರಭದ್ರೇಶ್ವರ ಮೂರ್ತಿಗಳನ್ನು (ಹಲಗೆ) ಜಾತ್ರೆ ವೇಳೆ ವೀರಭದ್ರೇಶ್ವರ ದೇವಸ್ಥಾನಕ್ಕೆ ತರಲಾಗುತ್ತದೆ. ಅಂತೆಯೇ ಬೆಳಗಿನ ಜಾವದಿಂದ ಮೂರ್ತಿಗಳ ಕ್ರೂಢೀಕರಣ ನಡೆಯಿತು.ದೇವಸ್ಥಾನದಿಂದ ಸಣ್ಣತೇರಿನಲ್ಲಿ ಶ್ರೀ ವೀರಭದ್ರೇಶ್ವರ ದೇವರನ್ನು ಗುಗ್ಗಳ ಕೊಡಗಳೊಂದಿಗೆ ಪುರವಂತರ ಶಾಸ್ತ್ರಬದ್ಧ ವಡಪುಗಳೊಂದಿಗೆ ಮೆರವಣಿಗೆ ಜರುಗಿತು. ಈ ವೇಳೆ ಸಾವಿರಾರು ಸಂಖ್ಯೆಯ ಭಕ್ತರು ಗುಗ್ಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಾಮಿ ಕೃಪೆಗೆ ಪಾತ್ರರಾದರು.
ಮಧ್ಯಾಹ್ನ ದೇವಸ್ಥಾನ ಮುಖ್ಯದ್ವಾರದ ಬಳಿ ನಿರ್ಮಿಸಿದ್ದ ಅಗ್ನಿಕುಂಡ ಹಾಯುವ ಮೂಲಕ ಭಕ್ತರು ಸೇವೆ ಸಲ್ಲಿಸಿದರು. ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತಾಧಿಗಳಿಗೆ ದಿನವಿಡೀ ದೇವಸ್ಥಾನದ ಆವರಣದಲ್ಲಿ ಸಂತರ್ಪಣೆ ಕಾರ್ಯಕ್ರಮ ಸಹ ನಡೆಸಲಾಯಿತು.ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಒಟ್ಟು 4 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪಟ್ಟಣದ ಪಾಠ ಶಾಲೆಯ ವೇದಮೂರ್ತಿ ರಾಚಯ್ಯ ಒದೋಸಿಮಠ ನೇತೃತ್ವ ವಹಿಸಿದ್ದರು.
ಬಳಿಕ ಮಾತನಾಡಿದ ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಣ್ಣ ಹುಚ್ಚಗೊಂಡರ, ದಂಪತಿಗಳ ಮಧ್ಯೆ ಸಮನ್ವಯತೆ ಕೊರತೆ ಯಿಂದ ಇತ್ತೀಚೆಗೆ ಬಹುತೇಕ ಜನರ ವೈವಾಹಿಕ ಬದುಕು ದುಷ್ಟಾಂತದಲ್ಲಿ ಅಂತ್ಯಗೊಳ್ಳುತ್ತಿದೆ. ಆದರೆ ಹಾಗಾಗದಂತೆ ಬಾಳ ಸಂಗಾತಿಗಳು ಸಾಮರಸ್ಯದ ಬದುಕು ನಡೆಸುವ ಮೂಲಕ ದಾಂಪತ್ಯ ಜೀವನ ಅರ್ಥಪೂರ್ಣಗೊಳಿಸಿಕೊಳ್ಳುವಂತೆ ಸಲಹೆ ನೀಡಿದರು.ಈ ವೇಳೆ ಸಮಿತಿಯ ಮಾಲತೇಶ ಅರಳಿಮಟ್ಟಿ, ಶಂಭಣ್ಣ ಅಂಗಡಿ, ಸಿ.ಆರ್. ಆಲದಗೇರಿ, ಶಿವಣ್ಣ ಶೆಟ್ಟರ, ಗಂಗಾಧರ ತಿಳವಳ್ಳಿ, ಶಿವಣ್ಣ ಬಣಕಾರ ಸೇರಿದಂತೆ ಹಲವರಿದ್ದರು.