ವಾತಾವರಣದಲ್ಲಿ ಉಂಟಾಗುವ ಏರುಪೇರಿನಿಂದ ವೈರಲ್ ಜ್ವರ : ಡಾ. ಯಲ್ಲಾ ರಮೇಶ್‌ಬಾಬು

KannadaprabhaNewsNetwork |  
Published : Jul 09, 2025, 12:28 AM ISTUpdated : Jul 09, 2025, 12:40 PM IST
ಕಂಪ್ಲಿ ತಾಲೂಕಿನ ಎಮ್ಮಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಶಾಂತಿನಗರ ಗ್ರಾಮದಲ್ಲಿ ಕಂಡುಬಂದ ಜ್ವರ ಪ್ರಕರಣಗಳ ಮಾಹಿತಿ ಹಿನ್ನಲೆಯಲ್ಲಿ ಗುರುವಾರ ವೈದ್ಯಕೀಯ ತಂಡದೊಂದಿಗೆ ಗ್ರಾಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು ಭೇಟಿ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. | Kannada Prabha

ಸಾರಾಂಶ

ತಾಲೂಕಿನ ಎಮ್ಮಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಶಾಂತಿನಗರ ಗ್ರಾಮದಲ್ಲಿ ಜ್ವರ ಪ್ರಕರಣ ಕಂಡುಬಂದ ಮಾಹಿತಿ ಹಿನ್ನೆಲೆಯಲ್ಲಿ ವೈದ್ಯಕೀಯ ತಂಡದೊಂದಿಗೆ ಗ್ರಾಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್‌ಬಾಬು ಭೇಟಿ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

  ಕಂಪ್ಲಿ :  ತಾಲೂಕಿನ ಎಮ್ಮಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಶಾಂತಿನಗರ ಗ್ರಾಮದಲ್ಲಿ ಜ್ವರ ಪ್ರಕರಣ ಕಂಡುಬಂದ ಮಾಹಿತಿ ಹಿನ್ನೆಲೆಯಲ್ಲಿ ವೈದ್ಯಕೀಯ ತಂಡದೊಂದಿಗೆ ಗ್ರಾಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್‌ಬಾಬು ಭೇಟಿ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಈ ವೇಳೆ ಮಾತನಾಡಿದ ಅವರು, ವಾತಾವರಣದಲ್ಲಿ ಉಂಟಾಗುವ ಏರುಪೇರಿನಿಂದ ವೈರಲ್ ಜ್ವರ ಕಂಡುಬರುವ ಸಾಧ್ಯತೆ ಇದ್ದು, ಸಾರ್ವಜನಿಕರು ಆತಂಕ ಪಡದೇ ಉಚಿತವಾಗಿ ಪರೀಕ್ಷೆ ಮತ್ತು ಚಿಕಿತ್ಸೆ ಮಾಡಿಸುವ ಮೂಲಕ ಗುಣಮುಖರಾಗಲು ಎಮ್ಮಿಗನೂರು ಹಾಗೂ ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮದಲ್ಲಿ ಯಾವುದೇ ವಾಂತಿ-ಭೇದಿ ಪ್ರಕರಣಗಳು ವರದಿಯಾಗಿರುವುದಿಲ್ಲ. ಅಲ್ಲದೇ ಅಧಿಕೃತವಾಗಿ ಡೆಂಘೀ ಪ್ರಕರಣಗಳು ಸಹ ವರದಿಯಾಗಿರುವುದಿಲ್ಲ. 70 ಮನೆಗಳಿರುವ ಗ್ರಾಮದಲ್ಲಿ ಮೇಲ್ನೋಟಕ್ಕೆ ವಾತಾವರಣದ ಬದಲಾವಣೆಯಿಂದಾಗುವ ವೈರಲ್ ಜ್ವರ ಕಂಡುಬಂದಿರುವ ಸಾಧ್ಯತೆಯಿದ್ದು, ಈಗಾಗಲೇ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ. ಅಬ್ದುಲ್ಲಾ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ ಅವರ ತಂಡ ಭೇಟಿ ನೀಡಿ ಮುಂಜಾಗ್ರತೆ ವಹಿಸಲಾಗಿದೆ.

ಗ್ರಾಮದ ಸರ್ಕಾರಿ ಶಾಲೆಯಲ್ಲಿ ತುರ್ತು ಚಿಕಿತ್ಸಾ ಕೇಂದ್ರ ಆರಂಭಿಸಲಾಗಿದ್ದು, ಅಗತ್ಯ ಔಷಧಿ, ಆಂಬ್ಯುಲೆನ್ಸ್ ಮತ್ತು ವೈದ್ಯರನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ಗ್ರಾಮದಲ್ಲಿ ಕ್ಷೇತ್ರ ಸಿಬ್ಬಂದಿ ಒಳಗೊಂಡ ವೈದ್ಯಕೀಯ ತಂಡವು ಮನೆಗಳಿಗೆ ತೆರಳಿ ಲಾರ್ವಾ ಸಮೀಕ್ಷೆ ಕೈಗೊಂಡು ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ. ನೆಲ್ಲುಡಿ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ನೀರಿನ ಮೂಲಗಳು, ಚರಂಡಿಗಳನ್ನು ಸ್ವಚ್ಚಗೊಳಿಸಲಾಗಿದೆ. ಸಾರ್ವಜನಿಕರು ಆದಷ್ಟು ಕುದಿಸಿ ಆರಸಿ ಸೋಸಿದ ನೀರನ್ನು ಕುಡಿಯಬೇಕು. ಬಿಸಿಯಾದ ಆಹಾರ ಪದಾರ್ಥ ಸೇವಿಸಬೇಕು ಎಂದರು.

ಈ ಸಂದರ್ಭ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ರವೀಂದ್ರ ಕನಕೇರಿ, ಆಡಳಿತ ವೈದ್ಯಾಧಿಕಾರಿ ಡಾ. ಫಾರೂಖ್ ಅಹಮ್ಮದ್, ಪ್ರಸೂತಿ ತಜ್ಞ ಡಾ. ಭರತ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ, ಜಿಲ್ಲಾ ಎನ್‌ ಸಿಡಿ ಸಲಹೆಗಾರರಾದ ಡಾ. ಜಬೀನ್ ತಾಜ್, ಜಿಲ್ಲಾ ಕಾಲರ ನಿಯಂತ್ರಣ ತಂಡದ ತಿಪ್ಪೇಸ್ವಾಮಿ, ಉಮಾ ಮಹೇಶ್ವರಿ, ನೆಲ್ಲುಡಿ ಗ್ರಾಪಂ ಸದಸ್ಯರಾದ ಪ್ರಭಾಕರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ, ಎಚ್‌ ಐಓ ಬಸನಗೌಡ, ವಿಜ್ಞೇಶ್ವರ, ಕೃಷ್ಣಮೂರ್ತಿ, ಚನ್ನಬವರಾಜ, ಪಿಎಚ್‌ಸಿಓ, ಗೀತಾ, ನಂದಾ ಸೇರಿದಂತೆ ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Read more Articles on