ನಿತ್ಯವೂ ಶಿಷ್ಟಾಚಾರ ಉಲ್ಲಂಘನೆ ಪ್ರಕರಣ ಉಲ್ಬಣ
ಕೆ.ಸಿ ನಾಗರಾಜ್ ಸೂಪರ್ ಎಂಎಲ್ಎ ಗಿರಿ ಮತ್ತಷ್ಟು ವಿಸ್ತಾರಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಕ್ಕೂ ಎಂಟ್ರಿ
ಚಿಕ್ಕಪ್ಪನಹಳ್ಳಿ ಷಣ್ಮುಖಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಯಾವುದೇ ಸರ್ಕಾರಿ ಕಾರ್ಯಕ್ರಮ ಆಯೋಜಿಸಿದರೆ ಸ್ಥಳೀಯ ಶಾಸಕರು ಅಧ್ಯಕ್ಷತೆ ವಹಿಸುವುದು ಇಲ್ಲವೇ ಉದ್ಘಾಟನೆ ನೆರವೇರಿಸುವುದು ಶಿಷ್ಟಾಚಾರ. ರಾಜ್ಯ ಸರ್ಕಾರ ಇದಕ್ಕೆಂದೇ ಶಿಷ್ಟಾಚಾರಗಳ ರೂಪಿಸಿ ಪಾಲನೆ ಮಾಡುವಂತೆ ಅಧಿಕಾರಿಗಳಿಗೆ ಬಿಗಿ ನಿರ್ದೇಶನ ನೀಡಿದೆ. ಶಿಷ್ಟಾಚಾರ ಉಲ್ಲಂಘನೆಯಾದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಅವಕಾಶಗಳು ತೆರೆದುಕೊಳ್ಳುತ್ತವೆ.ಚಿತ್ರದುರ್ಗದ ಮಟ್ಟಿಗೆ ನಿತ್ಯವೂ ಶಾಸಕ ವೀರೇಂದ್ರ ಪಪ್ಪಿ ಅವರ ಹಕ್ಕುಗಳಿಗೆ ಚ್ಯುತಿ ಉಂಟಾಗುತ್ತಿದ್ದು ಅಡಳಿತ ವ್ಯವಸ್ಥೆಯೇ ಇಂತಹ ಹಕ್ಕು ಚ್ಯುತಿಗಳ ಪೋಷಣೆ ಮಾಡುತ್ತಿದೆಯಾ ಎಂಬ ಅನುಮಾನಗಳು ಮೂಡಿವೆ. ಶಾಸಕರ ಹಕ್ಕುಗಳಿಗೆ ಚ್ಯುತಿಯಾದರೂ ಯಾರನ್ನೂ ದೂರಲು ಸಾಧ್ಯವಾಗದ ಹಾಗೂ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಆಗದಂತಹ ವಾತಾವರಣ ಸೃಷ್ಟಿಗಿದೆ. ಸಾಂವಿಧಾನಿಕ ಆಶಯಗಳು ಮೂಲೆ ಗುಂಪಾಗಿದ್ದು, ಅಧಿಕಾರಿಗಳು ಆಡಿದ್ದೇ ಆಟ, ಹೂಡಿದ್ದೇ ಲಗ್ಗೆ ಎನ್ನುವಂತಾಗಿದೆ.
ಚಿತ್ರದುರ್ಗ ವಿಧಾನಸಭೆ ಕ್ಷೇತ್ರದಲ್ಲಿ ನಡೆಯುವ ಬಹುತೇಕ ಸರ್ಕಾರಿ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ವೀರೇಂದ್ರ ಪಪ್ಪಿ ಗೈರು ಹಾಜರಾಗುತ್ತಿದ್ದಾರೆ. ಗೈರು ಹಾಜರಿ ಸಂದರ್ಭಗಳನ್ನು ಅಧಿಕಾರಿಗಳು ಬೇರೆಯದೇ ರೀತಿಯಲ್ಲಿ ಭಯ, ಭಕ್ತಿ ಸಮರ್ಪಣೆ ಮಾಡಿಕೊಂಡು ಕಾರ್ಯಕ್ರಮ ಮುಗಿಸಿಕೊಳ್ಳುತ್ತಿದ್ದಾರೆ. ಶಾಸಕರ ಆಗಮನ ನಿರೀಕ್ಷಿಸುವುದಿಲ್ಲ. ಅವರ ಸಹೋದರ ನಾಗಣ್ಣ (ಕೆ.ಸಿ.ನಾಗರಾಜ್)ಬಂದರೆ ಸಾಕೆಂಬ ತುಡಿತ ಇಟ್ಟುಕೊಂಡಿದ್ದಾರೆ. ನಾಗಣ್ಣನ ಬರುವಿಕೆಗಾಗಿ ಗಂಟೆಗಟ್ಟಲೆ ಕಾದಿದ್ದು ಅವರ ಕೈಲಿ ಉದ್ಘಾಟನೆ ಮಾಡಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಹಾಗೂ ಎಸ್‌ಪಿ ಕಚೇರಿ ಹೊರತಾಗಿ ಎಲ್ಲ ಕಡೆ ನಡೆವ ಕಾರ್ಯಕ್ರಮಗಳಲ್ಲಿ ಸೂಪರ್ ಎಂಎಲ್ಎ ಪ್ರತ್ಯಕ್ಷರಾಗುತ್ತಾರೆ. ಶಾಸಕರ ಬದಲಾಗಿ ಅವರ ಸಹೋದರ ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿರಂತರ ಪಾಲ್ಗೊಳ್ಳುವಿಕೆ ಜನ ಪ್ರತಿನಿಧಿಗಳ ಹಕ್ಕಿಗೆ ಚ್ಯುತಿ ತಂದಂತೆ. ಇದರ ಗಂಭೀರತೆ ಸರ್ಕಾರಿ ಅಧಿಕಾರಿಗಳಿಗೆ ಅಷ್ಟಾಗಿ ಅರಿವಿಗೆ ಬಂದಂತೆ ಕಾಣಿಸುತ್ತಿಲ್ಲ.ಚಿತ್ರದುರ್ಗ ಹೊರವಲಯದಲ್ಲಿರುವ ಜಿಟಿಟಿಸಿ (ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ)ಯಲ್ಲಿ ಸೋಮವಾರ ಪ್ರಥಮ ವರ್ಷದ ಮೊದಲನೆ ಸೆಮಿಸ್ಟರ್ ಪ್ರವೇಶದ ವಿದ್ಯಾರ್ಥಿಗಳಿಗೆ ತರಗತಿ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಸಕ ವೀರೇಂದ್ರ ಪಪ್ಪಿ ಇದರ ಉದ್ಘಾಟನೆ ನೆರವೇರಿಸಿ ವಿದ್ಯಾರ್ಥಿಗಳಿಗೆ ಹಿತ ವಚನ ನೀಡಬೇಕಿತ್ತು. ಆಹ್ವಾನ ಪತ್ರಿಕೆಯಲ್ಲಿ ಶಾಸಕರ ಹೆಸರು ರಾರಾರಾಜಿಸುತ್ತಿತ್ತು. ಆದರೆ ಆಗಿದ್ದೇ ಬೇರೆ. ಸೂಪರ್ ಎಂಎಲ್ಎ ಕೆ.ಸಿ ನಾಗರಾಜ್ ತರಬೇತಿ ಕೇಂದ್ರದಲ್ಲಿ ಪ್ರತ್ಯಕ್ಷರಾಗಿ ಉದ್ಘಾಟನೆ ನೆರವೇರಿಸಿ ನಾಲ್ಕು ಮಾತುಗಳನ್ನಾಡಿ, ಸನ್ಮಾನ ನೆರವೇರಿಸಿಕೊಂಡು ಅಲ್ಲಿಂದ ನಿರ್ಗಮಿಸಿದ್ದಾರೆ.
ಹೇಗೋ ಕಾರ್ಯಕ್ರಮ ಮುಗಿಯಿತು, ತಗರಗತಿಗಳು ಆರಂಭವಾದವು ಎಂಬ ಸಣ್ಣದೊಂದು ಸಮಾಧಾನ ತರಬೇತಿ ಕೇಂದ್ರದ ಪ್ರಾಂಶುಪಾಲರದ್ದಾದರೆ, ತಮ್ಮನ ಕಾರ್ಯಕ್ರಮ ಮತ್ತೆಲ್ಲಿದೆ ಎಂದು ಹುಡುಕುವ ಧಾವಂತ ಕೆ.ಸಿ ನಾಗರಾಜ್ ದು. ಡೈರಿ ನೋಡಿಕೊಂಡು ಮುಂದಿನ ಕಾರ್ಯಕ್ರಮದಲ್ಲಿ ಪ್ರತ್ಯಕ್ಷರಾಗುತ್ತಾರೆ. ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದ ನಂತರ ಅಲ್ಲಿನ ಪ್ರಾಂಶುಪಾಲ ಬಿ.ಎಸ್.ಸುಹಾಸ್ ಬಿಡುಗಡೆ ಮಾಡಿರುವ ಪತ್ರಿಕಾ ವರದಿಯಲ್ಲಿ ಸೂಪರ್ ಎಂಎಲ್ಎ ಗೆ ನೀಡಿರುವ ಪ್ರಾಧಾನ್ಯತೆ ಅಚ್ಚರಿ ಮೂಡಿಸುತ್ತದೆ.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗ ವಿಧಾನಸಭೆ ಕ್ಷೇತ್ರದ ಶಾಸಕರಾದ ಸನ್ಮಾನ್ಯ ವಿರೇಂದ್ರ ಪಪ್ಪಿ ಅವರ ಸಹೋದರರಾದ ಕೆ.ಸಿ.ನಾಗರಾಜ್ ಎಂದೇ ಪ್ರಾಂಶುಪಾಲರು ಪತ್ರಿಕಾ ಹೇಳಿಕೆಯಲ್ಲಿ ಸಂಬೋಧಿಸಿ ಧನ್ಯತಾ ಭಾವ ಪ್ರದರ್ಶಿಸಿದ್ದಾರೆ. ಅಷ್ಟರ ಮಟ್ಟಿಗೆ ಶಾಸಕರ ಬದಲಾಗಿ ಸಹೋದರ ಕೆ.ಸಿ.ನಾಗರಾಜ್ ಅವರ ಹಾಜರಿಯ ಮಾನ್ಯ ಮಾಡಲಾಗಿದೆ.
ಅಂದಹಾಗೆ ಯಾರಾದರೂ ಮದುವೆ ಅಹ್ವಾನ ಪತ್ರಿಕೆ ಕೊಡಲು ಬಂದಾಗ ಅವತ್ತು ನಾನು ಊರಲ್ಲಿ ಇರೋದು ಡೌಟು ಎನ್ನುವ ಉದ್ಗಾರಗಳು ಬರುವುದು ಸಹಜ. ನೀವಿಲ್ಲದಿದ್ದರೇನಂತೆ ಅಕ್ಕವ್ರರನ್ನಾದರೂ ಕಳಿಸಿ ಎಂಬ ಕೋರಿಕೆ ಬರುತ್ತದೆ. ಅದೇ ರೀತಿ ಚಿತ್ರದುರ್ಗದಲ್ಲಿ ಸರ್ಕಾರಿ ಕಾರ್ಯಕ್ರಮಗಳೆಂದರೆ ಮದುವೆಗಳು ಎಂಬಂತಾಗಿದೆ. ಶಾಸಕರು ಊರಲ್ಲಿರದಿದ್ದರೇನಂತೆ, ನಾಗಣ್ಣಾ ನೀನಾದರೂ ಬಾರಣ್ಣ ಅಂತ ಅಧಿಕಾರಿಗಳು ರೆಡ್ ಕಾರ್ಪೆಟ್ ಹಾಸಿ ಕರೆದುಕೊಂಡು ಹೋಗುತ್ತಿದ್ದಾರೆ.