ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ಮಹಾನಗರ ಪಾಲಿಕೆಯಲ್ಲಿರುವ ಬಹುತೇಕ ಉದ್ಯಾನಗಳಲ್ಲಿ ಅಳವಡಿಸಿರುವ ವ್ಯಾಯಾಮ ಸಲಕರಣೆಗಳು ನಿರ್ವಹಣೆ ಕೊರತೆಯಿಂದ ತುಕ್ಕು ಹಿಡಿದರೆ, ಕೆಲವೆಡೆ ಕಳ್ಳರ ಪಾಲಾಗಿವೆ.
ವಾಯುವಿಹಾರಿ, ಯುವಕರಿಗೆ ಸಹಕಾರಿಯಾಗಲಿ ಎಂಬ ಸದುದ್ದೇಶದಿಂದ ಪಾಲಿಕೆ ವ್ಯಾಪ್ತಿಯ ಬಹುತೇಕ ಉದ್ಯಾನಗಳಲ್ಲಿ ಸಾರ್ವಜನಿಕ ವ್ಯಾಯಮ ಸಲಕರಣೆ ಹಾಕಲಾಗಿದೆ. ಇವುಗಳಲ್ಲಿ ಸಿಂಗಲ್ ಬಾರ್, ಡಬಲ್ ಬಾರ್, ಸೈಕ್ಲಿಂಗ್, ಚೆಸ್ಟ್ ಪ್ರೆಸ್, ಲೆಗ್ ಪ್ರೆಸ್, ಪುಲ್‌ಅಪ್ ಬಾರ್, ಬ್ಯಾಲನ್ಸ್ ಬೀಮ್, ಏರ್ ವಾಕರ್, ಚಿನ್‌ಅಪ್ ಬಾರ್, ಕ್ರಾಸ್ ಕಂಟ್ರಿ ಸ್ಕೈಯರ್, ಏರ್ ಸ್ಕೈಯರ್ ಸೇರಿದಂತೆ ಹಲವು ಬಗೆಯ ಗುಣಮಟ್ಟದ ವ್ಯಾಯಾಮ ಸಲಕರಣೆ ಹಾಕಲಾಗಿದೆ.575 ಉದ್ಯಾನಗಳು:
ಹುಬ್ಬಳ್ಳಿಯಲ್ಲಿ 381, ಧಾರವಾಡದಲ್ಲಿ 194 ಸೇರಿದಂತೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಒಟ್ಟು 575 ಉದ್ಯಾನಗಳಿವೆ. ಇವುಗಳಲ್ಲಿ 300ಕ್ಕೂ ಅಧಿಕ ಉದ್ಯಾನಗಳಲ್ಲಿ ಸಾರ್ವಜನಿಕ ವ್ಯಾಯಾಮ ಸಲಕರಣೆ ಹಾಕಲಾಗಿದೆ. ಇದರಲ್ಲಿ 100ಕ್ಕೂ ಅಧಿಕ ಉದ್ಯಾನಗಳಲ್ಲಿ ಸುಸ್ಥಿತಿಯಲ್ಲಿದ್ದರೆ, 90ಕ್ಕೂ ಅಧಿಕ ಉದ್ಯಾನದಲ್ಲಿ ವ್ಯಾಯಾಮ ಸಲಕರಣೆಗಳು ಸಣ್ಣಪುಟ್ಟ ದುರಸ್ತಿಯಲ್ಲಿವೆ. ಇನ್ನುಳಿದ ಉದ್ಯಾನಗಳಲ್ಲಿನ ವ್ಯಾಯಮ ಸಲಕರಣೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಬಳಕೆಗೆ ಬಾರದ ಸ್ಥಿತಿಯಲ್ಲಿವೆ.ನಿರ್ವಹಣೆಯೇ ಇಲ್ಲ:
ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಅಳಡಿಸಿರುವ ಈ ವ್ಯಾಯಾಮ ಸಲಕರಣೆಗಳ ನಿರ್ವಹಣೆಯೇ ಇಲ್ಲ. ಇದರಿಂದಾಗಿ ಕೆಲವು ಸಲಕರಣೆಗಳು ತುಕ್ಕುಹಿಡಿದು ಹಾಳಾಗಿದ್ದರೆ ಇನ್ನು ಕೆಲವು ಸಂಪೂರ್ಣವಾಗಿ ಮುರಿದು ಬಳಕೆಗೆ ಬಾರದಂತಾಗಿವೆ. ಲಕ್ಷಾಂತರ ರುಪಾಯಿ ವ್ಯಯಿಸಿದರೂ ನಿರ್ವಹಣೆ ಮಾಡದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಕಳ್ಳರ ಪಾಲು:
ಹಲವು ಉದ್ಯಾನಗಳಲ್ಲಿನ ವ್ಯಾಯಾಮ ಸಲಕರಣೆಗಳು ಕಳ್ಳರ ಪಾಲಾಗುತ್ತಿವೆ. ಕೆಲವೆಡೆ ಮುರಿದು ಬಿದ್ದ ಸಲಕರಣೆಗಳನ್ನು ಕಳ್ಳರು ಹೊತ್ತೊಯ್ದಿದ್ದರೆ ಇನ್ನು ಹಲವೆಡೆ ಕಳ್ಳರೇ ಸಾವಿರಾರು ರುಪಾಯಿ ಮೌಲ್ಯದ ವ್ಯಾಯಾಮ ಸಲಕರಣೆ ಮುರಿದುಕೊಂಡು ಹೋಗುತ್ತಿರುವುದು ಬೆಳಕಿಗೆ ಬಂದಿದೆ.ನಿರ್ವಹಣೆಗೆ ಕ್ರಮವಾಗಲಿ:
ಲಕ್ಷಾಂತರ ರುಪಾಯಿ ಖರ್ಚು ಮಾಡಿ ಹಾಕಲಾಗಿರುವ ವ್ಯಾಯಮ ಸಲಕರಣೆಗಳ ನಿರ್ವಹಣೆಗಾಗಿ ಪಾಲಿಕೆಯು ಪ್ರತ್ಯೇಕ ನಿರ್ವಹಣಾ ಸಮಿತಿ ಮಾಡಿ ಕೆಲವು ಸಿಬ್ಬಂದಿಗಳ ನೇಮಕಕ್ಕೆ ಕ್ರಮಕೈಗೊಳ್ಳಬೇಕು. ಇದರಿಂದ ಇವುಗಳ ನಿರ್ವಹಣೆ ಸೇರಿದಂತೆ ದುರಸ್ತಿಗೆ ಬೇಕಾದ ಕ್ರಮಕೈಗೊಳ್ಳಲು ಸಹಕಾರಿಯಾಗಲಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.ನಿತ್ಯವೂ ಸ್ನೇಹಿತರೊಂದಿಗೆ ವಾಯುವಿಹಾರಕ್ಕೆ ಉದ್ಯಾನಕ್ಕೆ ಬರುತ್ತೇವೆ. ಲಕ್ಷಾಂತರ ರುಪಾಯಿ ಖರ್ಚು ಮಾಡಿ ಹಾಕಲಾಗಿರುವ ವ್ಯಾಯಾಮ ಸಲಕರಣೆಗಳು ಹಾಳಾಗಿವೆ. ಇವುಗಳ ದುರಸ್ತಿಗೆ ಪಾಲಿಕೆ ಕ್ರಮಕೈಗೊಳ್ಳಬೇಕು ಎಂದು ಅಶೋಕ ನಗರ ನಿವಾಸಿ ರಾಮಚಂದ್ರ ಬೇಲೂರ ಹೇಳಿದರು.ಉದ್ಯಾನಗಳಲ್ಲಿನ ವ್ಯಾಯಾಮ ಸಲಕರಣೆಗಳ ದುರಸ್ತಿ, ನಿರ್ವಹಣೆಗೆ ಕ್ರಮಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ, ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಈ ವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ವಾರ್ಡ್ ಸಮಿತಿ ಬಳಗದ ಸದಸ್ಯ ಲಿಂಗರಾಜ ಧಾರವಾಡಶೆಟ್ಟರ ತಿಳಿಸಿದರು.ಉದ್ಯಾನಗಳಲ್ಲಿನ ವ್ಯಾಯಾಮ ಸಲಕರಣೆಗಳು ಹಾಳಾಗಿರುವ ಕುರಿತು ಗಮನಕ್ಕೆ ಬಂದಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಎಲ್ಲೆಲ್ಲಿ ಹಾಳಾಗಿವೆ ಎಂಬ ಮಾಹಿತಿ ಪಡೆದು ಅವುಗಳ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದ್ದಾರೆ.