ಸರ್ಕಾರದ ಭ್ರಷ್ಟಾಚಾರಕ್ಕೆ ಪ್ರಾಮಾಣಿಕ ಅಧಿಕಾರಿಗಳ ಬಲಿ: ಎಚ್.ಟಿ.ಬಳಿಗಾರ್ ಆರೋಪ

KannadaprabhaNewsNetwork |  
Published : Jun 26, 2024, 12:32 AM IST
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಗ್ರಾಣ ನಿಗಮದ ಮಾಜಿ ಅಧ್ಯಕ್ಷ ಎಚ್.ಟಿ ಬಳಿಗಾರ್ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯ ವಾಲ್ಮೀಕಿ ನಿಗಮದ ₹187 ಕೋಟಿ ಅನ್ಯ ರಾಜ್ಯದ ವ್ಯಕ್ತಿಗಳ ಖಾತೆಗೆ ಹೋಗಿದೆ ಎಂದರೆ ಅದು ಒಬ್ಬರಿಂದ ಸಾಧ್ಯವಿಲ್ಲ ಸರ್ಕಾರಿ ವ್ಯವಸ್ಥೆ ಸಂಪೂರ್ಣ ಕೈಜೋಡಿಸಿದಾಗ ಮಾತ್ರ ಬಹುಕೋಟಿ ಅಕ್ರಮ ನಡೆಯಲು ಸಾಧ್ಯ

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕೆ ಮೀಸಲಿದ್ದ ಹಣ ದುರ್ಬಳಕೆ ಆಗಿರುವುದು ಬಡವರ ಕಗ್ಗೊಲೆ ಮಾಡಿದಂತೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಬಿಜೆಪಿ ಮುಖಂಡ, ರಾಜ್ಯ ಉಗ್ರಾಣ ನಿಗಮದ ಮಾಜಿ ಅಧ್ಯಕ್ಷ ಎಚ್.ಟಿ.ಬಳಿಗಾರ್ ಆಗ್ರಹಿಸಿದರು.

ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ವಾಲ್ಮೀಕಿ ನಿಗಮದ ₹187 ಕೋಟಿ ಅನ್ಯ ರಾಜ್ಯದ ವ್ಯಕ್ತಿಗಳ ಖಾತೆಗೆ ಹೋಗಿದೆ ಎಂದರೆ ಅದು ಒಬ್ಬರಿಂದ ಸಾಧ್ಯವಿಲ್ಲ ಸರ್ಕಾರಿ ವ್ಯವಸ್ಥೆ ಸಂಪೂರ್ಣ ಕೈಜೋಡಿಸಿದಾಗ ಮಾತ್ರ ಬಹುಕೋಟಿ ಅಕ್ರಮ ನಡೆಯಲು ಸಾಧ್ಯ. ಸಚಿವರ ರಾಜಿನಾಮೆ ಮಾತ್ರ ಅದಕ್ಕೆ ಉತ್ತರವಲ್ಲ. ಮುಖ್ಯಮಂತ್ರಿಗಳೂ ರಾಜಿನಾಮೆ ನೀಡಬೇಕು ಇಡೀ ದೇಶದಲ್ಲಿ ನಡೆದ ಅಪರೂಪದ ಪ್ರಕರಣ ಇದಾಗಿದ್ದು ನೆರೆ ರಾಜ್ಯದ ಚುನಾವಣೆಗೆ ಹಣ ಬಳಕೆಯಾಗಿದೆ ಎನ್ನುವ ಅನುಮಾನ ಇದ್ದು ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಸರ್ಕಾರದ ಭ್ರಷ್ಟಾಚಾರ ಹೊರಗೆ ಬರುವುದಕ್ಕೆ ಇನ್ನೆಷ್ಟು ಪ್ರಾಮಾಣಿಕ ಅಧಿಕಾರಿಗಳ ಬಲಿಯಾಗಬೇಕಿದೆ ಎಂದು ಪ್ರಶ್ನಿಸಿದ ಅವರು, ಶೋಷಿತ ಸಮಾಜದ ಕಲ್ಯಾಣಕ್ಕೆ ಮೀಸಲಿಟ್ಟ ಹಣ ದುರುಪಯೋಗವನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲ ನಿಗಮದ ಹಣದ ತನಿಖೆ ಆಗಬೇಕು. ಸರ್ಕಾರದ ಹಣ ಖಜಾನೆ ಇಲಾಖೆ ಮೂಲಕ ಬಳಕೆ ಮಾಡಬೇಕು ಎನ್ನುವ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಅರ್ಹರಿಗೆ ಮಾತ್ರ ಸರ್ಕಾರ ಬಿಟ್ಟಿ ಭಾಗ್ಯ ಯೋಜನೆ ನೀಡಬೇಕು ವಿನಃ ಎಲ್ಲರಿಗೂ ನೀಡಿದರೆ ಸರ್ಕಾರ ದಿವಾಳಿ ಆಗುತ್ತದೆ. ಸರ್ಕಾರ ರಚನೆ ಆದಾಗಿನಿಂದ ಯಾವುದೇ ಅಭಿವೃದ್ಧಿ ಕಾರ್ಯ ಆಗದಿರುವುದು ಅದಕ್ಕೆ ಸಾಕ್ಷಿಯಾಗಿದೆ. ಉಚಿತ ಬಸ್ ಸೌಲಭ್ಯದಿಂದಾಗಿ ವಿದ್ಯಾರ್ಥಿಗಳು ರಾಜ್ಯದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರದ ಎಲ್ಲ ಕಾರ್ಯಕ್ರಮ ಪುನಃ ಪರಿಶೀಲನೆ ನಡೆಸಿ ಅರ್ಹರಿಗೆ ಸಿಗುವಂತೆ ರೂಪಿಸಬೇಕು. ಹಿಂದುಳಿದ ವರ್ಗದ ಕಲ್ಯಾಣ ಕಾರ್ಯಕ್ರಮಕ್ಕೆ ಫಲಾನುಭವಿ ಆಯ್ಕೆ ಮಾಡಿ ಅವರಿಗೆ ಕೂಡಲೆ ಸೌಲಭ್ಯ ನೀಡಬೇಕು ಎಂದರು.ಶಿವಮೊಗ್ಗದಲ್ಲಿ ಪ್ರತಿಭಟನೆ:

ವಾಲ್ಮೀಕಿ ನಿಗಮದ ಸರ್ಕಾರಿ ಹಣ ಅಕ್ರಮ ವರ್ಗಾವಣೆ ವಿರುದ್ಧ ಜೂ.28ರಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಸರ್ಕಾರದ ದುರಾಡಳಿತದ ವಿರುದ್ಧದ ಹೋರಾಟಕ್ಕೆ ಜಿಲ್ಲೆ ಎಲ್ಲ ಹಿಂದುಳಿದ ವರ್ಗದ ಜನರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ತಾ.ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಸುರೇಶ್,ಹುಚ್ಚಪ್ಪ ಈಸೂರು,ನಾಗರಾಜಗೌಡ ಗುಳೇದಹಳ್ಳಿ, ಅಡಗಂಟಿ ಬಸವರಾಜಪ್ಪ,ಸುರೇಶ, ರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ಅನನ್ಯಾ ಭಟ್‌ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ..!
ಧರ್ಮಸ್ಥಳ : ಬುರುಡೆ ಕೇಸ್‌ನಲ್ಲಿ ಉತ್ತರ ಸಿಗದ ಪ್ರಶ್ನೆಗಳು