ಕನ್ನಡಪ್ರಭ ವಾರ್ತೆ ಮಂಡ್ಯ
ಪಿಎಫ್. ಇಎಸ್‌ಐ, ಪಿಂಚಣಿ, ವೈದ್ಯಕೀಯ ಹಾಗೂ ಸಾಮಾಜಿಕ ಭದ್ರತೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಗೃಹ ಕಾರ್ಮಿಕರ ವೃತ್ತಿ ಸಂಘಟನೆ, ಕರ್ನಾಟಕ ಗೃಹ ಕಾರ್ಮಿಕರ ಚಳವಳಿ ಮತ್ತು ಕೋನ್‌ಫೆಡರೇಶನ್ ಆಫ್ ಫ್ರೀ ಟ್ರೇಡ್ ಯೂನಿಯನ್ಸ್ ಆಫ್ ಇಂಡಿಯಾ (ಸಿಎಫ್‌ಟಿಯುಐ) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಜಮಾಯಿಸಿದ ಗೃಹ ಕಾರ್ಮಿಕ ಮಹಿಳೆಯರು, ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಧರಣಿ ನಡೆಸಿದರು.
ಸಮಾಜದಲ್ಲಿ ಗೃಹ ಕಾರ್ಮಿಕರು ತುಳಿತಕ್ಕೊಳಗಾಗಿದ್ದು, ಸಾಮಾಜಿಕ ಭದ್ರತೆಯ ಪಿಎಫ್, ಇಎಸ್‌ಐ, ಪಿಂಚಣಿ, ವೈದ್ಯಕೀಯ ವಿಮೆ, ಮಾತೃತ್ವ ಸೌಲಭ್ಯಗಳಂತಹ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇವರ ಜೀವನವನ್ನು ಉತ್ತಮಗೊಳಿಸಲು ಗೃಹ ಕಾರ್ಮಿಕರಿಗೆ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.ಹಕ್ಕೊತ್ತಾಯಗಳು:
ಗೃಹ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷತೆಯ ಪಿಎಫ್, ಇಎಸ್‌ಐ, ಪಿಂಚಣಿ, ವೈದ್ಯಕೀಯ ವಿಮೆ ಮಾತೃತ್ವ ಸೌಲಭ್ಯ ಹಾಗೂ ವಿದ್ಯಾರ್ಥಿವೇತನವನ್ನು ನೀಡಬೇಕು. ಗೃಹ ಕಾರ್ಮಿಕರ ಯೋಗ್ಯ ಉದ್ಯೋಗಕ್ಕಾಗಿ ಐಎಲ್‌ಒಸಿ ೧೮೯ ಇದನ್ನು ನಮ್ಮ ದೇಶ ಅನುಮೋದಿಸಬೇಕು ಎಂದು ಒತ್ತಾಯಿಸಿದರು.ಪ್ರತಿಯೊಬ್ಬ ಗೃಹ ಕಾರ್ಮಿಕರನ್ನು ಗುರುತಿಸಿ ೬೦ ವರ್ಷ ಮೇಲ್ಪಟ್ಟ ಗೃಹ ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್‌ನ್ನು ಕಡ್ಡಾಯವಾಗಿ ನೀಡಬೇಕು. ನಮ್ಮ ರಾಜ್ಯ ನೀಡುತ್ತಿರುವ ಸ್ಮಾರ್ಟ್ ಕಾರ್ಡ್ ಗುರುತಿನ ಚೀಟಿಯಾಗಿ ಉಳಿಯದೆ ಅದರೊಂದಿಗೆ ಗೃಹ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು. ಪ್ರತಿಯೊಂದು ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕಾರ್ಮಿಕ ಮಿತ್ರಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಗೃಹ ಕಾರ್ಮಿಕರಿಗೆ ರಾಷ್ಟ್ರೀಯ ಶಾಸನ ರೂಪಿಸುವುದು. ಪಸ್ತುತ ಸಾಲಿನ ಕನಿಷ್ಠವೇತನವನ್ನು ಪರಿಷ್ಕರಿಸುವುದು, ಸರ್ಕಾರದ ಸೌಲಭ್ಯ ಪಡೆಯಲು ಕಡ್ಡಾಯ ಮಾಡಿರುವ ಆಹಾರ ಪಡಿತರ ಚೀಟಿಯನ್ನು ಅಸಂಘಟಿತ ಕಾರ್ಮಿಕರಿಗೆ ಅನ್ವಯಿಸಬಾರದು. ಗೃಹ ಕಾರ್ಮಿಕರಿಗೆ ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಸಂಘದ ಅಧ್ಯಕ್ಷೆ ಲಲಿತಾ, ವಿವಿಧ ಸಂಘಟನೆಗಳ ಮುಖಂಡರಾದ ಸಿಸ್ಟರ್ ನಿಶಾ, ಜರ್ಸನ್, ನಾಗಮ್ಮ, ಶೋಭಾ, ನಿರ್ಮಲಾ, ಭಾಗ್ಯ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.