ಬಾಲರಾಜ್ ಗೆಲುವು ನಿಚ್ಚಳ: ರಾಧಾಮೋಹನ್ ದಾಸ್ ಅಗರವಾಲ್

KannadaprabhaNewsNetwork | Published : Apr 9, 2024 12:45 AM

ಸಾರಾಂಶ

ನಾವು ಚಾಮರಾಜನಗರ ಮಾತ್ರವಲ್ಲ ರಾಜ್ಯದ 28 ಕ್ಷೇತ್ರಗಳಲ್ಲಿ ನಮ್ಮ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿಗಳು ವಿಜಯ ಸಾಧಿಸಲಿದ್ದಾರೆ, ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಚರಿತ್ರೆಯನ್ನು ಚಾಮರಾಜನಗರ ಕ್ಷೇತ್ರದ ಮತದಾರರು ಬಲ್ಲವರಾಗಿದ್ದಾರೆ, ಅವರು ಯಾವ ರೀತಿಯ ವ್ಯಕ್ತಿ, ಎಷ್ಟು ಪುಣ್ಯದ ಕೆಲಸಗಳನ್ನು ಮಾಡಿದ್ದಾರೆ, ಜನತೆಯ ರಕ್ಷಣೆ ಇವರಿಂದ ಸಾಧ್ಯವೇ ಎಂಬುದರ ಬಗ್ಗೆ ಮತದಾರರಿಗೆ ಅರಿವಿದೆ

ಕನ್ನಡಪ್ರಭ ವಾರ್ತೆ ನಂಜನಗೂಡು

ಚಾಮರಾಜನಗರದಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲರಾಜ್ ಗೆಲ್ಲುವ ಅವಕಾಶಗಳು ನಿಚ್ಚಳವಾಗಿವೆ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನಂಜನಗೂಡು ದಕ್ಷಿಣ ಕಾಶಿಯಾಗಿದೆ, ಈ ಪುಣ್ಯ ಕ್ಷೇತ್ರದ ಬಗ್ಗೆ ಕೇಳಿ ತಿಳಿದಿದ್ದೆ, ನಮ್ಮ ಮುಖಂಡರಾದ ಹರ್ಷವರ್ಧನ್ ಜೊತೆಗೆ ಶಿವನ ದರ್ಶನ ಪಡೆದಿದ್ದೇನೆ ಎಂದರು.

ನಾವು ಚಾಮರಾಜನಗರ ಮಾತ್ರವಲ್ಲ ರಾಜ್ಯದ 28 ಕ್ಷೇತ್ರಗಳಲ್ಲಿ ನಮ್ಮ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿಗಳು ವಿಜಯ ಸಾಧಿಸಲಿದ್ದಾರೆ, ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಚರಿತ್ರೆಯನ್ನು ಚಾಮರಾಜನಗರ ಕ್ಷೇತ್ರದ ಮತದಾರರು ಬಲ್ಲವರಾಗಿದ್ದಾರೆ, ಅವರು ಯಾವ ರೀತಿಯ ವ್ಯಕ್ತಿ, ಎಷ್ಟು ಪುಣ್ಯದ ಕೆಲಸಗಳನ್ನು ಮಾಡಿದ್ದಾರೆ, ಜನತೆಯ ರಕ್ಷಣೆ ಇವರಿಂದ ಸಾಧ್ಯವೇ ಎಂಬುದರ ಬಗ್ಗೆ ಮತದಾರರಿಗೆ ಅರಿವಿದೆ, ಹಣ ಬಲ ಹಾಗೂ ಅದರಿಂದ ಉಂಟಾಗಿದ್ದ ಪ್ರತಿಕೂಲ ಪರಿಸ್ಥಿತಿಯನ್ನು ಕ್ಷೇತ್ರದ ಜನ ಅನುಭವಿಸಿದ್ದಾರೆ, ಇಂತಹ ವ್ಯಕ್ತಿ ಹೇಗೆ ಗೆಲ್ಲುವುದು ಸಾಧ್ಯ ಎಂದು ಪ್ರಶ್ನಿಸಿದರು.

ಈ ಬಾರಿ ಡಿ.ಕೆ. ಸುರೇಶ್‌ ಸೋಲಲಿದ್ದಾರೆ:

ಕಳೆದ ಲೋಕಸಭಾ ಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ಮಾತ್ರ ಗೆದ್ದಿದ್ದರು, ಈ ಬಾರಿ ಅವರು ಸೋಲಲಿದ್ದಾರೆ, ದೇಶದ ಜನ ಮಹಾರಾಜ ಡಿ.ಕೆ. ಶಿವಕುಮಾರ್ ಅವರ ಅಪಾರ ಸಂಪತ್ತಿನ ಬಗ್ಗೆ ತಿಳಿದಿದ್ದಾರೆ, ಅವರ ತಮ್ಮ ಡಿ.ಕೆ. ಸುರೇಶ್ ಅಣ್ಣನಿಗಿಂತ ಶ್ರೀಮಂತ, ಈ ಬಾರಿ ಅವರ ಆದಾಯ ಕಳೆದ ಬಾರಿಗಿಂದ 532 ಕೋಟಿ ಹೆಚ್ಚಾಗಿದೆ, ದೇಶದ ಯಾವ ರಾಜಕಾರಣಿಯ ಆದಾಯ ಹೀಗೆ ಹೆಚ್ಚಿದೆ !?. ಅವರ ಬಳಿ ಅಧಿಕವಾದ ಸಂಪತ್ತಿದೆ, ನಮ್ಮ ಪಕ್ಷದ ಸಚ್ಚಾರಿತ್ರ ಅಭ್ಯರ್ಥಿ ಡಾ. ಮಂಜುನಾಥ್ ಬಳಿ ಹಣವಿಲ್ಲ, ಅವರಿಗೆ ಜನ ಬೆಂಬಲವಿದೆ, ಡಾ. ಮಂಜುನಾಥ್ ಬಳಿ ಚುನಾವಣೆ ಎದುರಿಸಲು ಹಣವಿಲ್ಲ, ಅವರಿಗಾಗಿ ನಾವು ಜನರಿಂದ ಹಣ ಸಂಗ್ರಹ ಮಾಡುತ್ತಿದ್ದೇವೆ, ಜನ ಮುಗಿಬಿದ್ದು ಧನಸಹಾಯ ಮಾಡುತ್ತಿದ್ದಾರೆ, ಡಿ.ಕೆ. ಸುರೇಶ್ ಈ ಬಾರಿ ಹೀನಾಯ ಸೋಲು ಅನುಭವಿಸಲಿದ್ದಾರೆ ಎಂದು ಅವರು ಹೇಳಿದರು.

ಬಿಜೆಪಿ ಅಭ್ಯರ್ಥಿಗಳಿಗೆ ಶ್ರೀನಿವಾಸ ಪ್ರಸಾದ್ಬೆಂಬಲವಿದೆ:

ನಮ್ಮ ನಾಯಕರಾದ ವಿ. ಶ್ರೀನಿವಾಸ ಪ್ರಸಾದ್ ಬಿಜೆಪಿಯವರಾಗಿದ್ದರು, ಬಿಜೆಪಿಯವರಾಗಿರುತ್ತಾರೆ. ಬಿಜೆಪಿ ಅಭ್ಯರ್ಥಿಗಳಿಗೆ ಅವರ ಬೆಂಬಲ, ಆಶೀರ್ವಾದವಿದೆ ಎಂದು ಹೇಳಿದರು.

ರಾಜ್ಯದಲ್ಲಿ ಮೋದಿ ಅಲೆ :

ನಾನು ಕಳೆದ 60 ದಿನಗಳಿಂದ ರಾಜ್ಯ ಪ್ರವಾಸ ಮಾಡಿದ್ದೇನೆ, ವಿಧಾನಸಭಾ ಚುನಾವಣೆಯ ಪರಿಸ್ಥಿತಿ ಬೇರೆ, ಈಗಿನ ಪರಿಸ್ಥಿತ ಬೇರೆ, ಜನ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ, ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡುವ ಸಂಕಲ್ಪ ತೊಟ್ಟಿದ್ದಾರೆ, ರಾಜ್ಯದಲ್ಲಿ ಅವರ ಜನಪ್ರಿಯತೆ ಹೆಚ್ಚಿದೆ, ಈ ಚುನಾವಣೆಯಲ್ಲಿ ರಾಜ್ಯದ ಬಹುತೇಕ ಕಾಂಗ್ರೆಸ್ ಅಭ್ಯರ್ಥಿಗಳ ಠೇವಣಿ ಜಪ್ತಾಗಲಿದೆ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮುಖಂಡರಾದ ಬಿ. ಹರ್ಷವರ್ಧನ್, ಬಿಜೆಪಿ ನಗರಾಧ್ಯಕ್ಷ ಸಿದ್ದರಾಜು, ವಿನಯ್ ಕುಮಾರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎನ್.ಸಿ. ಬಸವಣ್ಣ, ಧನರಾಜ್ ಬೂಲಾ, ಉಮೇಶ್, ಯುವ ಮೋರ್ಚಾ ಅಧ್ಯಕ್ಷ ಗೋವರ್ಧನ್ ಇದ್ದರು.

Share this article