ಚನ್ನಪಟ್ಟಣ: ಸ್ವಾಮಿ ವಿವೇಕಾನಂದರು ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ ಮಹಾನ್ ದಾರ್ಶನಿಕರು. ಅವರ ದೇಶಭಕ್ತಿ, ಆದರ್ಶ ಗುಣಗಳು ಇಂದಿನ ಯುವಪೀಳಿಗೆ ಅನುಸರಿಸಬೇಕು ಎಂದು ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ತಿಳಿಸಿದರು.
ಪಟ್ಟಣದ ಮಿಲೇನಿಯಮ್ ಪಬ್ಲಿಕ್ ಶಾಲೆಯಲ್ಲಿ ಶುಭೋದಯ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಲಬ್ ಹಾಗೂ ಅನಿಕೇತನ ಕನ್ನಡ ಸಾಂಸ್ಕೃತಿಕ ಬಳಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅಮೆರಿಕಾದ ಚಿಕಾಗೋದಲ್ಲಿ ನಡೆದ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಮಾಡಿದ ಭಾಷಣ ಐತಿಹಾಸಿಕ. ಭಾರತವನ್ನು ಪ್ರತಿನಿಧಿಸಿದ್ದ ಅವರು ತಮ್ಮ ಭಾಷಣದ ವೇಳೆ ದೇಶದ ಘನತೆ ಎತ್ತಿ ಹಿಡಿದರು. ಭಾರತೀಯರ ಬಗ್ಗೆ ವಿದೇಶಿಗರಲ್ಲಿದ್ದ ಅಭಿಪ್ರಾಯವನ್ನು ಹೋಗಲಾಡಿಸಿ, ವಿಶ್ವಕ್ಕೆ ಸಹೋದರತೆಯ ಸಂದೇಶವನ್ನು ಸಾರಿದ ಮಹಾಪುರುಷ ಎಂದರು.
ಸ್ವಾಮಿ ವಿವೇಕಾನಂದರ ದಿವ್ಯವಾಣಿಗಳು ಯುವಜನತೆಗೆ ಸ್ಪೂರ್ತಿ ನೀಡುತ್ತವೆ. ಅವರು ಕೇವಲ ೩೯ ವರ್ಷ ಬದುಕಿದರೂ ವಿಶ್ವ ಮಾನವ, ವೀರ ಸನ್ಯಾಸಿ, ವಿಶ್ವ ವಿಜೇತರೆನಿಸಿಕೊಂಡರು. ವಿವೇಕಾನಂದರ ತತ್ವಗಳನ್ನು ಯುವ ಜನತೆ ಅನುಸರಿಸಿದರೆ ತಮ್ಮ ವ್ಯಕ್ತಿತ್ವವನ್ನು ಅತ್ಯುತ್ತಮಗೊಳಿಸಿಕೊಳ್ಳಬಹುದು ಎಂದು ಹೇಳಿದರು.ಶುಭೋದಯ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಲಬ್ ಅಧ್ಯಕ್ಷ ಎಂ. ಶಿವಮಾದು ಮಾತನಾಡಿ, ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ದೊಡ್ಡದು, ಸಿದ್ಧಾಂತ ವಿಶಾಲವಾದದ್ದು. ಪ್ರತಿಯೊಬ್ಬರು ಸಹೋದರತೆ, ಸಮನ್ವಯತೆ, ಸಮಗ್ರತೆ ಹಾಗೂ ಭಾತೃತ್ವದಿಂದ ಬದುಕು ನಡೆಸಬೇಕು ಎಂದು ಸಾರಿದ್ದರು ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಸಿದ್ದರಾಜೇಗೌಡ, ಕಾರ್ಯದರ್ಶಿ ಲಕ್ಷ್ಮಮ್ಮ , ಮುಖ್ಯಶಿಕ್ಷಕಿ ಅರುಣಗೌಡ, ನಿವೃತ್ತ ತೋಟಗಾರಿಕಾ ಅಧಿಕಾರಿ ಎಚ್.ಆರ್.ರಾಮಚಂದ್ರ, ನಿವೃತ್ತ ಜಿಲ್ಲಾ ಖಜಾನಾಧಿಕಾರಿ ಸಿ.ಎಸ್. ಶ್ರೀಕಂಠಯ್ಯ, ನಿವೃತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿ ಅಂಕೇಗೌಡ, ಸಮಾಜ ಸೇವಕ ಕೃಷ್ಣ, ನಿವೃತ್ತ ಮುಖ್ಯ ಶಿಕ್ಷಕ ಸಿ.ಕೆ.ಕೃಷ್ಣಯ್ಯ, ಶಾಲೆಯ ಶಿಕ್ಷಕಿಯರಾದ ಕವಿತಾ, ಪೂರ್ಣಿಮಾ, ಪಂಕಜಾ, ಸಂಗೀತ, ಗೀತಾ, ಫಾತಿಮಾ, ಹರ್ಷಿತ, ಕುಸುಮ್ ಬಾನು, ರೀಹಾನ ಕಾರ್ಟೂನ್ ಇದ್ದರು.ಪೊಟೊ೧೪ಸಿಪಿಟಿ೧:ಮಿಲೇನಿಯಮ್ ಪಬ್ಲಿಕ್ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವ ಆಚರಿಸಲಾಯಿತು.