ಎನ್‌ಡಿಎ ಒಕ್ಕೂಟದ ವಿರುದ್ಧ ಮತ ಚಲಾವಣೆ: ರೈತ ಸಂಘ ನಿರ್ಧಾರ

KannadaprabhaNewsNetwork | Published : Mar 20, 2024 1:22 AM

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಜಿಲ್ಲಾ ರೈತ ಸಂಘವು ಎನ್‌ಡಿಎ ಒಕ್ಕೂಟವನ್ನು ಅಧಿಕಾರದಿಂದ ದೂರವಿಡಲು ಅದರ ವಿರುದ್ಧವಾಗಿ ಮತ ಹಾಕಲು ಸರ್ವಾನುಮತದಿಂದ ಒಪ್ಪಿ ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡಿದೆ. ರೈತ ಮೇಲಿನ ಪ್ರಕರಣ ವಾಪಸ್ಸು ಪಡೆಯುವುದಾಗಿ ಭರವಸೆ ನೀಡಿ ಮಾತು ತಪ್ಪಿದೆ ಎಂದು ಸಂಘ ಆರೋಪಿಸಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರಲೋಕಸಭಾ ಚುನಾವಣೆಯಲ್ಲಿ ಜಿಲ್ಲಾ ರೈತ ಸಂಘವು ಎನ್‌ಡಿಎ ಒಕ್ಕೂಟವನ್ನು ಅಧಿಕಾರದಿಂದ ದೂರವಿಡಲು ಅದರ ವಿರುದ್ಧವಾಗಿ ಮತ ಹಾಕಲು ಸರ್ವಾನುಮತದಿಂದ ಒಪ್ಪಿ ಮಂಗಳವಾರ ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡಿದರು.

ತಾಲೂಕಿನ ಕ್ಯಾತನಹಳ್ಳಿಯ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಸಮಾಧಿ ಬಳಿ ನಡೆದ ಜಿಲ್ಲಾ ರೈತ ಸಂಘದ ಕಾರ್‍ಯಕರ್ತರ ಸಭೆಯಲ್ಲಿ ಎಲ್ಲಾ ಕಾರ್‍ಯಕರ್ತರು ಒಮ್ಮತದ ತೀರ್ಮಾನ ತೆಗೆದುಕೊಂಡರು.

ಮಂಗಳವಾರ ನಡೆದ ಸಭೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ರೈತಸಂಘದ ಯಾವ ಪಕ್ಷವನ್ನು ಬೆಂಬಲಿಸಬೇಕು ಎಂಬ ಕುರಿತು ಚರ್ಚಿಸಿದರು. ಈ ವೇಳೆ ಕಾರ್‍ಯಕರ್ತರು ಬಿಜೆಪಿ ಪಕ್ಷ ಹಲವು ರೈತ ವಿರೋಧಿ ನೀತಿ ಅನುಸರಿಸಿದೆ. ಕೇಂದ್ರದಲ್ಲಿ ರೈತ ವಿರೋಧಿ ಕಾಯ್ದೆ ಜಾರಿಗೆ ತಂದಿದೆ ಎಂದು ಕಿಡಿಕಾರಿದರು.

ರೈತ ಮೇಲಿನ ಪ್ರಕರಣ ವಾಪಸ್ಸು ಪಡೆಯುವುದಾಗಿ ಭರವಸೆ ನೀಡಿ ಮಾತು ತಪ್ಪಿದೆ. ಜತೆಗೆ ರೈತಸಂಘದ ರಾಷ್ಟ್ರ ಸಮಿತಿಯೂ ಸಹ ಎನ್‌ಡಿಎ ಒಕ್ಕೂಟದ ವಿರುದ್ಧ ಮತಹಾಕಲು ತೀರ್ಮಾನಿಸಿದೆ ಎಂದರು.

ನಾಲೆಗೆ ನೀರು ಹರಿಸಲು ಒತ್ತಾಯ:

ಸಭೆಯಲ್ಲಿ ಬರಗಾಲದಿಂದ ಜಿಲ್ಲೆಯ ಜನತೆ ಒಳಲುತ್ತಿದ್ದಾರೆ. ಎಲ್ಲ ಕೆರೆಕಟ್ಟೆಗಳು ಒಣಗುತ್ತಿವೆ. ಜನ-ಜಾನುವಾರುಗಳಿಗೆ ಕುಡಿಯಲು ಹನಿನೀರಿಲ್ಲ. ಹಾಗಾಗಿ ಜಿಲ್ಲೆಯ ನಾಲೆಗಳಿಗೆ ನೀರು ಹರಿಸುವ ಮೂಲಕ ಜನ-ಜಾನುವಾರುಗಳನ್ನು ರಕ್ಷಣೆ ಮಾಡಬೇಕು ಎಂದು ಸಭೆಯಲ್ಲಿದ್ದು ಬಹುತೇಕ ಕಾರ್‍ಯಕರ್ತರು ಒತ್ತಾಯಿಸಿದರು.

ವಿಸಿ ನಾಲೆಯ ಕೊನೆ ಭಾಗದ ಮದ್ದೂರಿಗೆ ನೀರು ಹರಿದಿಲ್ಲ. ಮದ್ದೂರು ತಾಲೂಕು ಸಂಪೂರ್ಣವಾಗಿ ವಿಸಿ ನಾಲೆ ನೀರಿನಿಂದ ವಂಚಿತವಾಗಿದೆ. ಹಾಗಾಗಿ ಈ ಕೂಡಲೇ ವಿಸಿ ನಾಲೆಗೆ ನೀರು ಹರಿಸಬೇಕು. ಜತೆಗೆ ಸಿಡಿಎಸ್ ಸೇರಿದಂತೆ ಎಲ್ಲಾ ನಾಲೆಗಳು ಒಂದು ಕಟ್ಟು ನೀರು ಹರಿಸಿ ರೈತರನ್ನು ರಕ್ಷಣೆ ಮಾಡಿ, ಜತೆಗೆ ಹೇಮಾವತಿ ನೀರನ್ನು ತುಮಕೂರು ಜಿಲ್ಲೆಗೆ ಹರಿಸಲಾಗುತ್ತಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ, ಕೆ.ಆರ್.ಪೇಟೆ ಹಾಗೂ ಮದ್ದೂರು ಭಾಗಕ್ಕೆ ನೀರು ಹರಿಸಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಆಗ್ರಹಿಸಿದರು.

ಜತೆಗೆ ಬರಗಾರ ಎದುರಾಗಿದ್ದು ಕೂಡಲೇ ಸರಕಾರ ರೈತರಿಗೆ ಬರಪರಿಹಾರ ನೀಡಬೇಕು. ಕಬ್ಬಿನ ಬಾಕಿ 150 ಹಣ ನೀಡಬೇಕು. ಕಬ್ಬಿಗೆ ಎಫ್‌ಆರ್‌ಫಿ ಧರ ನಿಗಧಿಪಡಿಸಬೇಕು. ಜತೆಗೆ ಬರಗಾಲ ಎದುರಾಗಿರುವುದರಿಂದ ಬ್ಯಾಂಕ್‌ಗಳು ಬಾಕಿ ಸಾಲವನ್ನು ಮನ್ನಾ ಮಾಡಿ ಹೊಸಸಾಲ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸಮಿತಿ ರಚನೆ ಮುಂದೂಡಿಕೆ:

ಜಿಲ್ಲಾ ರೈತಸಂಘದ ನೂತನ ಸಮಿತಿ ರಚನೆ ಮಾಡುವ ಕುರಿತು ಚರ್ಚಿಸಲಾಯಿತು. ಲೋಕಸಭಾ ಚುನಾವಣೆ ಇರುವುದರಿಂದ ನೂತನ ಜಿಲ್ಲಾ ಸಮಿತಿ ರಚನೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ, ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಪ್ರಸನ್ನಗೌಡ, ಲಿಂಗಪ್ಪಾಜಿ, ಸುನೀತ ಪುಟ್ಟಣ್ಣಯ್ಯ, ತಗ್ಗಹಳ್ಳಿ ಪ್ರಸನ್ನ, ಪಿ.ನಾಗರಾಜು, ಕೆ.ಎಸ್.ದಯಾನಂದ, ಕೆ.ಟಿ.ಗೋವಿಂದೇಗೌಡ, ಜಯರಾಮು, ಚಂದ್ರಶೇಖರ್, ದೇವರಾಜು, ಕೃಷ್ಣೇಗೌಡ, ಪುಟ್ಟೇಗೌಡ, ರಾಮಕೃಷ್ಣ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

Share this article