ಚಿಕ್ಕಮಗಳೂರು: ಪ್ರತಿಯೊಬ್ಬರು ತಪ್ಪದೇ ಮತ ಚಲಾಯಿಸಿ: ಡಿಸಿ ಮೀನಾ ನಾಗರಾಜ್‌

KannadaprabhaNewsNetwork |  
Published : Apr 02, 2024, 01:10 AM ISTUpdated : Apr 02, 2024, 08:30 AM IST
ಚಿಕ್ಕಮಗಳೂರಿನ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯ ರಸ್ತೆಯಲ್ಲಿ ಸೋಮವಾರ ಮತದಾನದ ಜಾಗೃತಿ ಮೂಡಿಸಲು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. | Kannada Prabha

ಸಾರಾಂಶ

ಭಾರತ ಸಂವಿಧಾನ ದೇಶದ ನಾಗರಿಕರಿಗೆ ನೀಡಿರುವ ಅಮೂಲ್ಯವಾದ ಹಕ್ಕು ಮತದಾನವಾಗಿದೆ. ತಪ್ಪದೇ ಮತದಾನ ಮಾಡುವುದು ಪ್ರತಿಯೊಬ್ಬ ವಯಸ್ಕ ಪ್ರಜೆಯ ಕರ್ತವ್ಯ  ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.

 ಚಿಕ್ಕಮಗಳೂರು :  ಭಾರತ ಸಂವಿಧಾನ ದೇಶದ ನಾಗರಿಕರಿಗೆ ನೀಡಿರುವ ಅಮೂಲ್ಯವಾದ ಹಕ್ಕು ಮತದಾನವಾಗಿದೆ. ತಪ್ಪದೇ ಮತದಾನ ಮಾಡುವುದು ಪ್ರತಿಯೊಬ್ಬ ವಯಸ್ಕ ಪ್ರಜೆಯ ಕರ್ತವ್ಯ ಆಗಿದೆ. ಆದ್ದರಿಂದ ಅರ್ಹ ಪ್ರತಿಯೊಬ್ಬ ಮತದಾರರು ಏಪ್ರಿಲ್ 26 ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಬೇಕೆಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಸೋಮವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಮತದಾರರಿಗೆ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಏರ್ಪಡಿಸಲಾಗಿದ್ದ ರಂಗೋಲಿ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮತದಾನ ಪ್ರಮಾಣ ಹೆಚ್ಚಿಸುವಲ್ಲಿ ಸ್ವೀಪ್ ಕಾರ್ಯ ಚಟುವಟಿಕೆಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಸ್ವೀಪ್ ಸಮಿತಿ ಯಲ್ಲಿ ಪ್ರತಿ ಮತದಾರನಿಗೆ ಮತದಾನದ ಮಹತ್ವ ತಿಳಿಸಿ ಅರಿವು ಮೂಡಿಸಿ ತಪ್ಪದೇ ಮತದಾನ ಮಾಡುವಂತೆ ಮಾಡುವುದು ಮತ್ತು ಪ್ರತಿ ಅರ್ಹ ಮತದಾರರು ಮತದರರ ಪಟ್ಟಿಯಲ್ಲಿ ತಪ್ಪದೇ ತಮ್ಮ ಹೆಸರು ಸೇರ್ಪಡೆ ಆಗಿರುವ ಬಗ್ಗೆ ಖಾತರಿ ಮಾಡಿಕೊಳ್ಳಲು ತಿಳಿಸುವುದಾಗಿದೆ ಎಂದರು.

 ನಗರ ಪ್ರದೇಶದಲ್ಲಿ ಮತದಾನ ಜಾಗೃತಿಗೆ ಆದ್ಯತೆ ನೀಡಲಾಗುತ್ತಿದ್ದು, ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳಲ್ಲಿ ಈ ಬಾರಿ ಮತದಾನದ ಪ್ರಮಾಣ ಶೇ. 90 ಕ್ಕಿಂತಲೂ ಹೆಚ್ಚು ಆಗುವಂತೆ ಮಾಡಲು ಹಾಗೂ ಅವುಗಳ ಸುತ್ತಲಿನ ಮತಗಟ್ಟೆಗಳನ್ನು ಕೇಂದ್ರಿಕರಿಸಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ ಮಾತನಾಡಿ, ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಜನರ ಸಹಭಾಗಿತ್ವದಲ್ಲಿ ಚುನಾವಣೆ, ಮತದಾರರ ಪಟ್ಟಿ, ಮತದಾನ ಜಾಗೃತಿಗೆ ಜಿಲ್ಲಾ ಸ್ವೀಪ್ ಸಮಿತಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂಭಾಗದ ರಸ್ತೆಯಲ್ಲಿ ವಿವಿಧ ಸಂಘಗಳ ಮಹಿಳೆಯರು ವಿವಿಧ ಬಣ್ಣಗಳ ಆಕರ್ಷಣೆಯ ರಂಗೋಲಿ ಹಾಕುವ ಮೂಲಕ ಮತದಾನದ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ. ಗೀತಾ, ಜಿಪಂ ನ ಮುಖ್ಯ ಲೆಕ್ಕಾಧಿಕಾರಿ ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ