ಮತದಾರರ ಮರೆತ ಕುರ್ಚಿ ಕಿತ್ತಾಟ ಸರಿಯೇ: ಎಚ್‌.ದುಗ್ಗಪ್ಪ

KannadaprabhaNewsNetwork |  
Published : Dec 29, 2025, 02:00 AM IST
ಕ್ಯಾಪ್ಷನ28ಕೆಡಿವಿಜಿ35 ಎಚ್.ದುಗ್ಗಪ್ಪ | Kannada Prabha

ಸಾರಾಂಶ

ರಾಜ್ಯದ ನಾಲ್ಕೂವರೆ ಕೋಟಿ ಮತದಾರ ಪ್ರಭುಗಳು ಗೆಲ್ಲಿಸಿ, ಅಧಿಕಾರ ನೀಡಿದ್ದಾರೆಂಬುದನ್ನು ಮರೆತು ಮುಖ್ಯಮಂತ್ರಿ ಕುರ್ಚಿಗೆ ಕಿತ್ತಾಟ ನಡೆಸುತ್ತಿರುವುದು ಸರಿಯೇ ಎಂದು ಕೆಪಿಸಿಸಿ ಸದಸ್ಯ ಎಚ್.ದುಗ್ಗಪ್ಪ ಸಿಎಂ ಮತ್ತು ಡಿಸಿಎಂ ಅವರನ್ನು ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದ ನಾಲ್ಕೂವರೆ ಕೋಟಿ ಮತದಾರ ಪ್ರಭುಗಳು ಗೆಲ್ಲಿಸಿ, ಅಧಿಕಾರ ನೀಡಿದ್ದಾರೆಂಬುದನ್ನು ಮರೆತು ಮುಖ್ಯಮಂತ್ರಿ ಕುರ್ಚಿಗೆ ಕಿತ್ತಾಟ ನಡೆಸುತ್ತಿರುವುದು ಸರಿಯೇ ಎಂದು ಕೆಪಿಸಿಸಿ ಸದಸ್ಯ ಎಚ್.ದುಗ್ಗಪ್ಪ ಸಿಎಂ ಮತ್ತು ಡಿಸಿಎಂ ಅವರನ್ನು ಪ್ರಶ್ನಿಸಿದ್ದಾರೆ.

ನಾನು ನನ್ನಿಂದ ಎಂಬುವ ಹೇಳಿಕೆಗಳನ್ನು ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಿಮ್ಮ ಅಧಿಕಾರ ದಾಹದಿಂದ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಕೆಟ್ಟ ಹೆಸರು ತರುತ್ತಿರುವುದನ್ನು ಮೊದಲು ನಿಲ್ಲಿಸಿ ಎಂದು ಹೇಳಿದ್ದಾರೆ.

ರಾಜ್ಯದ ಮತದಾರರು ಬಹಳಷ್ಟು ಪ್ರಬುದ್ಧರಿದ್ದು ಯಾರ ಹೇಳಿಕೆ ಆಧರಿಸಿ ಅವರು ಮತ ಹಾಕಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದಂತಹ ಕಾಂಗ್ರೆಸ್‌ ಪಕ್ಷದ ನೀತಿ ಸಿದ್ಧಾಂತಗಳು ಹಾಗೂ ಪಕ್ಷದ ಚುನಾವಣಾ ಪ್ರಣಾಳಿಕೆಗಳಿಗೆ, ಪಕ್ಷ ನೀಡಿರುವಂತಹ ಗ್ಯಾರಂಟಿಗಳಿಗೆ ಬೆಲೆ ನೀಡಿ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚಿನ ಮತ ನೀಡಿ, ಬಹುಮತ ಸರ್ಕಾರ ಅಧಿಕಾರಕ್ಕೆ ಬರುವಂತೆ ಮಾಡಿರುವುದು ಮತದಾರ ಪ್ರಭುಗಳು ಎಂಬುದನ್ನು ಮರೆಯಬೇಡಿ ಎಂದು ಸಲಹೆ ನೀಡಿದ್ದಾರೆ.

ಹಿರಿಯ ನಾಯಕರುಗಳು ಈಗ ಕಚ್ಚಾಟದ ಮೂಲಕ ಗುಂಪುಗಾರಿಕೆ ಮಾಡಿ. ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದು, ಅಭಿವೃದ್ಧಿಯ ಹಾದಿಯಲ್ಲಿ ಈಗಾಗಲೇ ಹಿನ್ನಡೆಯನ್ನು ಕಂಡಿರುವ ಮತದಾರರು ಬದಲಾವಣೆಯಾಗುವ ಮುನ್ನವೇ ಈ ಇಬ್ಬರು ನಾಯಕರು ಹೊಂದಾಣಿಕೆಯಲ್ಲಿ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿ ಕರ್ತವ್ಯ ನಿರ್ವಹಿಸ ಬೇಕಾಗಿದೆ ಎಂದಿದ್ದಾರೆ.

ಈ ಹಿಂದಿನಿಂದಲೂ ಅಧಿಕಾರಕ್ಕಾಗಿ ಕಚ್ಚಾಟ ನಡೆದು ಹಿಂದೆ ಅಧಿಕಾರ ನಡೆಸಿದ ಬಿಜೆಪಿ, ದಳ ಯಾವ ರೀತಿಯಲ್ಲಿ ಪತನ ಹೊಂದಿದವು ಎಂಬುದನ್ನು ಮನದಲ್ಲಿಟ್ಟುಕೊಂಡು, ತಾಯಿ ಸ್ಥಾನದಲ್ಲಿರುವ ಕಾಂಗ್ರೆಸ್‌ ಪಕ್ಷಕ್ಕೆ ಕೊಡಲಿ ಪೆಟ್ಟು ಹಾಕದೇ ಮತದಾರರಿಗಿತ್ತ ಭರವಸೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

ದೇಶದ 28 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕಾಂಗ್ರೆಸ್‌ ಸರ್ಕಾರ ಕೇವಲ ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ತೆಲಂಗಾಣ, ಕರ್ನಾಟಕ, ಹರಿಯಾಣ ರಾಜ್ಯಗಳಲ್ಲಿ ಸ್ವತಂತ್ರವಾಗಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಸರ್ಕಾರದ ಉಳಿವಿಗೆ ಹಾಗೂ ಮುಂಬರುವ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವ ರೀತಿಯಲ್ಲಿ ಅಧಿಕಾರದಲ್ಲಿರುವ ರಾಜ್ಯವಾರು ಕೆಲಸ ನಿರ್ವಹಿಸಬೇಕಾಗಿದೆ. ಪಕ್ಷ ಏನಾದರೂ ಆಗಲಿ, ನನಗೆ ಅಧಿಕಾರ ಸಿಗಲಿ ಎಂದು ವಾಮದಾರಿಯಲ್ಲಿ ಮುಂದಾದರೆ ಅದು ಪಕ್ಷಕ್ಕೆ ಮಾಡಿದ ಮೋಸವಾಗುತ್ತದೆ ಎಂದಿದ್ದಾರೆ.

ಇದೇ ರೀತಿ ಈ ಹಿಂದೆ ರಾಜಸ್ಥಾನದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಉಪಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್‌ರಲ್ಲಿ ಈಗ ರಾಜ್ಯದಲ್ಲಿ ನಡೆಯುತ್ತಿರುವ ಅಧಿಕಾರದ ಕಚ್ಚಾಟ ನಡೆದು ಸಚಿನ್ ಪೈಲಟ್ ತನ್ನ ಬೆಂಬಲಿಗರನ್ನು ಕರೆದುಕೊಂಡು ಹೋಗಿ ಅಲ್ಲಿನ ಕಾಂಗ್ರೆಸ್‌ ಸರ್ಕಾರ ಪತನವಾಗುವಂತೆ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಿ ಎಂದು ನಿಷ್ಠಾವಂತರು ಕಿವಿಮಾತು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಅಧಿಕಾರಕ್ಕಾಗಿ ಕಚ್ಚಾಡುವಂತಹ ಸನ್ನಿವೇಶವನ್ನು ನೀವು ಕೈ ಬಿಡದಿದ್ದರೆ ಸರ್ಕಾರ ಅಧಿಕಾರಕ್ಕೆ ಬಂದರೂ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿರುವ ಹಿನ್ನಲೆಯಲ್ಲಿ ಪಕ್ಷಕ್ಕೆ ಮಾರಕವಾಗಬಹುದಾದ ಸನ್ನಿವೇಶಗಳಿದ್ದು, ದೇಶದಲ್ಲಿ ನೆಲೆ ಕಳೆದುಕೊಂಡಿರುವ ಕಾಂಗೈ ಪಕ್ಷದ ಉಳಿವಿಗೆ ಈಗ ನಡೆದಿರುವ ಅಧಿಕಾರದ ಕಚ್ಚಾಟ ಸರಿಯಾದುದಲ್ಲ ಎಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತ್ಯಾಗ, ಬಲಿದಾನ, ಆದರ್ಶಗಳ ಮೇಲೆ ಹುಟ್ಟಿದ ಕಾಂಗ್ರೆಸ್: ಎಸ್.ಆರ್. ಪಾಟೀಲ
ರೈತ ಸೃಷ್ಟಿಯ ಮೊದಲ ವಿಜ್ಞಾನಿ, ಜಮೀನು ಪ್ರಯೋಗಾಲಯ: ಮಾಜಿ ಸಚಿವ ನಿರಾಣಿ