ಬಳ್ಳಾರಿ: ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆಯ ಮತದಾನ ಸೋಮವಾರ (ಜೂ. 3ರಂದು) ನಡೆಯಲಿದೆ. ಈ ಬಾರಿ ಪದವೀಧರರು ಯಾರ ಪರ ಹಕ್ಕು ಚಲಾಯಿಸಲಿದ್ದಾರೆ ಎಂಬ ಕುತೂಹಲವಿದೆ.
ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಒಟ್ಟು 19 ಜನರು ಅಖಾಡದಲ್ಲಿದ್ದಾರೆ. ಕಾಂಗ್ರೆಸ್‌ನ ಚಂದ್ರಶೇಖರ ಪಾಟೀಲ್, ಬಿಜೆಪಿಯ ಅಮರನಾಥ ಪಾಟೀಲ್, ಬಳ್ಳಾರಿಯ ಪಕ್ಷೇತರ ಅಭ್ಯರ್ಥಿ (ಕಾಂಗ್ರೆಸ್ ಬಂಡಾಯ) ನಾರಾ ಪ್ರತಾಪ ರೆಡ್ಡಿ ನಡುವೆ ತೀವ್ರ ಪೈಪೋಟಿ ಕಂಡು ಬಂದಿದೆ. ಬಳ್ಳಾರಿ, ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಸೇರಿದಂತೆ ಈಶಾನ್ಯ ಪದವೀಧರ ಕ್ಷೇತ್ರ ಒಟ್ಟು ಏಳು ಜಿಲ್ಲೆಗಳನ್ನೊಳಗೊಂಡಿದೆ.
ಈ ಬಾರಿ ಕ್ಷೇತ್ರದಲ್ಲಿ 1,56,623 ಮತದಾರರಿದ್ದಾರೆ. ಈ ಪೈಕಿ 99,121 ಪುರುಷರು, 57,483 ಮಹಿಳೆಯರು ಹಾಗೂ 19 ಇತರ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಈ ವರೆಗೆ ಆರು ಬಾರಿ ಜರುಗಿದ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಮೂರು ಬಾರಿ (1988, 1994, 2000) ಬಿಜೆಪಿಯ ಡಾ. ಎಂ.ಆರ್. ತಂಗಾ ಗೆಲುವು ಸಾಧಿಸಿದ್ದಾರೆ. 2006ರಲ್ಲಿ ಮನೋಹರ ಮಸ್ಕಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದರು. 2012ರಲ್ಲಿ ಅಮರನಾಥ ಪಾಟೀಲ್ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದರು. ಕಳೆದ 2018ರಲ್ಲಿ ಕಾಂಗ್ರೆಸ್‌ನ ಚಂದ್ರಶೇಖರ ಪಾಟೀಲ್ ಗೆಲುವು ಪಡೆದಿದ್ದರು. ಈ ವರೆಗೆ ಜಯ ಗಳಿಸಿದವರ ಪೈಕಿ ಎಲ್ಲರೂ ಬೀದರ್, ಕಲಬುರಗಿ ಜಿಲ್ಲೆಯವರಾಗಿದ್ದಾರೆ. ಈಶಾನ್ಯ ಪದವೀಧರ ಕ್ಷೇತ್ರದಲ್ಲಿ 41 ವಿಧಾನಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್‌ನ 26, ಬಿಜೆಪಿಯ 10, ಜೆಡಿಎಸ್‌ನ 3, ಇಬ್ಬರು ಪಕ್ಷೇತರರಿದ್ದಾರೆ.ಜೂ. 6ರಂದು ಕಾಂಗ್ರೆಸ್, ಬಿಜೆಪಿ, ಪಕ್ಷೇತರ ಅಭ್ಯರ್ಥಿಯ ರಾಜಕೀಯ ಭವಿಷ್ಯ ಗೊತ್ತಾಗಲಿದೆ.
ನಗರದಲ್ಲಿರುವ ಏಳು ಬೂತ್‌ಗಳಿಗೆ ಮಸ್ಟರಿಂಗ್ ಕಾರ್ಯ ನಡೆಯಿತು. ಇದೇ ಮೊದಲ ಬಾರಿಗೆ ಹೋಬಳಿಗಳಲ್ಲೂ ಮತಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಮತದಾನ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದೆ. ಮತದಾನ ಪ್ರಕ್ರಿಯೆ ಮುಗಿದ ಬಳಿಕ ಮತಪೆಟ್ಟಿಗೆಗಳನ್ನು ಜೂ. 6ರಂದು ಕಲಬುರಗಿಗೆ ಕಳುಹಿಸಿಕೊಡಲಾಗುವುದು ಎಂದು ಚುನಾವಣೆ ಅಧಿಕಾರಿಗಳು ತಿಳಿಸಿದ್ದಾರೆ.