ಮತದಾನ ಸಂವಿಧಾನಬದ್ಧ ಹಕ್ಕು, ಚಲಾಯಿಸಿ: ಬಿ.ಎಸ್.ಲಕ್ಷ್ಮಣ್

KannadaprabhaNewsNetwork | Published : Apr 1, 2024 12:45 AM

ಸಾರಾಂಶ

ಚಳ್ಳಕೆರೆ ನಗರದ ವಾಲ್ಮೀಕಿ ವೃತ್ತದಲ್ಲಿ ಸ್ಪೀಫ್ ಸಮಿತಿ ವತಿಯಿಂದ ಮತದಾನ ಜಾಗೃತಿ ರ‍್ಯಾಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಲೋಕಸಭಾ ಚುನಾವಣೆಗೆ ಮತದಾನ ಮಾಡಲು ಇನ್ನು ಕೇವಲ ೨೫ ದಿನಗಳು ಮಾತ್ರ ಬಾಕಿ ಇದ್ದು, ಏ.೨೬ರ ಮತದಾನ ಪ್ರಕ್ರಿಯೆಯಲ್ಲಿ ಕ್ಷೇತ್ರದ ಅತಿಹೆಚ್ಚು ಮತದಾರರು ಹೆಚ್ಚು ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ಜನರಲ್ಲಿ ಮತದಾನ ಜಾಗೃತಿಯನ್ನು ಮೂಡಿಸುವ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕೆಂದು ತಾಲ್ಲೂಕು ಸ್ವೀಫ್ ಸಮಿತಿ ಅಧ್ಯಕ್ಷ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಲಕ್ಷ್ಮಣ್ ತಿಳಿಸಿದರು.

ಅವರು ತಾಲ್ಲೂಕು, ಜಿಲ್ಲಾಡಳಿತ, ಜಿಲ್ಲಾ ಸ್ಪೀಪ್ ಸಮಿತಿ ಹಾಗೂ ತಾಲ್ಲೂಕು ಸ್ಪೀಪ್ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು. ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು, ಸಿಬ್ಬಂದಿವರ್ಗ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮೆರವಣಿಗೆಯುದ್ದಕ್ಕೂ ಘೋಷಣೆ ಕೂಗಿದ ಕಾರ್ಯಕರ್ತರು, ಸಂವಿಧಾನಬದ್ಧವಾಗಿ ನಮಗೆ ಲಭಿಸಿರುವ ಮತದಾನದ ಹಕ್ಕನ್ನು ಎಲ್ಲರೂ ತಪ್ಪದೆ ಸದುಪಯೋಗಪಡಿಸಿಕೊಳ್ಳಬೇಕು. ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಮತದಾನವೊಂದೇ ನಮಗೆ ಇರುವ ಹಕ್ಕು. ಈ ಹಕ್ಕನ್ನು ನ್ಯಾಯಬದ್ಧವಾಗಿ ಚಲಾವಣೆ ಮಾಡುವುದಕ್ಕೆ ನಾವೆಲ್ಲರೂ ಮುಂದಾಗಬೇಕು. ಉತ್ತಮ ಆಡಳಿತ ಪಡೆಯಲು ಸ್ವಯಂ ಸ್ಫೂರ್ತಿಯಿಂದ ನಾವೆಲ್ಲರೂ ಪಾಲ್ಗೊಳ್ಳಬೇಕು. ಮತದಾನ ಮಾಡುವಂತೆ ನೆರೆಹೊರೆ ಸ್ನೇಹಿತರಲ್ಲಿ ಮನವಿ ಮಾಡಿಕೊಳ್ಳಬೇಕು. ಮತದಾನದಿಂದ ದೂರ ಉಳಿದರೆ ನಮ್ಮ ಹಕ್ಕಿನಿಂದ ನಾವೇ ವಂಚಿತರಾಗುತ್ತೇವೆಂಬುವುದುನ್ನು ಮರೆಯ ಬಾರದು. ಮತದಾನ ಅತಿ ಶ್ರೇಷ್ಠ ದಾನ ಎಂದು ಘೋಷಣೆ ಕೂಗಿದರು.

ತಹಸೀಲ್ದಾರ್ ರೇಹಾನ್‌ ಪಾಷ, ಪೌರಾಯುಕ್ತ ಜೀವನ್‌ ಕಟ್ಟಿಮನಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಕಾಶಿ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಸಂತೋಷ್, ಸಂಪತ್, ನಗರಸಭೆ ಅಧಿಕಾರಿ ವರ್ಗ ಜಾಗೃತಿ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ವಾಲ್ಮೀಕಿ ವೃತ್ತದಿಂದ ಪ್ರಾರಂಭವಾಗಿ ಅಂಬೇಡ್ಕರ್ ವೃತ್ತದ ಮೂಲಕ ನೆಹರೂ ವೃತ್ತಕ್ಕೆ ಆಗಮಿಸಿತು. ನೆಹರೂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾನ ಜಾಗೃತಿ ಮೂಡಿಸಲಾಯಿತು.

Share this article