ಕನ್ನಡಪ್ರಭ ವಾರ್ತೆ ಇಂಡಿ
ಮೇ 7ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಅರ್ಹ ಮತದಾರರು ಕಡ್ಡಾಯವಾಗಿ ಮತ ಹಾಕುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕು ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಅವರು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಸ್ವೀಪ್ ಸಮಿತಿ, ಗ್ರಾಮ ಪಂಚಾಯಿತಿ ಹಿರೇರೂಗಿ ವತಿಯಿಂದ ರಂಗೋಲಿ ಬಿಡಿಸುವ ಮೂಲಕ ಪ್ರಜಾಪ್ರಭುತ್ವದಲ್ಲಿ ಮತದಾನವೇ ಹಬ್ಬ ಎಂಬ ಶೀರ್ಷಿಕೆಯಡಿ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣಾ ಪ್ರಕ್ರಿಯೆ ಪ್ರಜಾಪ್ರಭುತ್ವದ ಸೌಂದರ್ಯ ಹೆಚ್ಚಿಸುತ್ತದೆ. ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ನಾವು ಸರಿಯಾದ ರೀತಿಯಲ್ಲಿ ಉಪಯೋಗಿಸಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.ತಾಪಂ ಇಒ ನೀಲಗಂಗಾ ಮಾತನಾಡಿ, ಚುನಾವಣೆ ಎಂಬ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಮತದಾರ ಬಾಂಧವರೇ ಪ್ರಭುಗಳು. ರಾಜ್ಯದ, ರಾಷ್ಟ್ರದ ಭವಿಷ್ಯ ನಿರ್ಮಾಣದಲ್ಲಿ ಮತದಾನ ಪಾತ್ರ ಬಹುಮುಖ್ಯ. ಜವಾಬ್ದಾರಿಯುತವಾಗಿ ಮತ ಚಲಾಯಿಸುವುದು ಪ್ರತಿಯೊಬ್ಬ ಮತದಾರನ ಕರ್ತವ್ಯ ಎಂದು ಹೇಳಿದರು.
ಹಿರೇರೂಗಿ ಪಿಡಿಒ ಬಸವರಾಜ ಬಬಲಾದ ಮಾತನಾಡಿ, ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನವರಿಗೆ ಮತದಾನದ ಮಹತ್ವವನ್ನು ತಿಳಿಸಿ, ಮತದಾನ ಮಾಡುವಂತೆ ಅವರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.ಅಂತಾರಾಷ್ಟ್ರೀಯ ಮಟ್ಟದ ಚಿನ್ನದ ಪದಕ ವಿಜೇತ ಕ್ರೀಡಾಪಟು ಮತ್ತು ಮತದಾನ ಜಾಗೃತಿಯ ಜಿಲ್ಲಾ ಸ್ವೀಪ್ ಸಮಿತಿಯ ರಾಯಭಾರಿ ರಾಜೇಶ ಪವಾರ ಮಾತನಾಡಿ, ಮತದಾನವು ದೇಶದ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಹಾಗೂ ಮೂಲ ಹಕ್ಕಾಗಿದ್ದು, ಪ್ರತಿಯೊಬ್ಬರು ಮತದಾನ ಮಾಡಲು ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾಮಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಜಾಗೃತಿ ಮೂಡಿಸಲಾಯಿತು. ಶಾಲೆಯಲ್ಲಿ ಮತದಾನ ಜಾಗೃತಿಯ ರಂಗೋಲಿ ಬಿಡಿಸಿದ್ದು ವಿಶೇಷವಾಗಿತ್ತು. ಶಾಲಾ ಮಕ್ಕಳು ತಮ್ಮ ಪಾಲಕರಿಗೆ ಪತ್ರ ಬರೆದು ಮತದಾನದ ಜಾಗೃತಿ ಮೂಡಿಸಿದರು. ಶಾಲೆ ಹಾಗೂ ಪಂಚಾಯಿತಿ ಆವರಣದಲ್ಲಿರುವ ಗಿಡಗಳಲ್ಲಿ ಪಕ್ಷಿಗಳಿಗೆ ನೀರು ಕುಡಿಯವಲು ನೀರಿನ ತೊಟ್ಟಿಗಳನ್ನು ಕಟ್ಟಲಾಯಿತು.ಈ ವೇಳೆ ತಾಪಂ ಸಹಾಯಕ ನಿರ್ದೇಶಕ(ನರೇಗಾ) ಸಂಜಯ ಖಡಗೇಕರ, ಶಾಲಾ ಮುಖ್ಯ ಶಿಕ್ಷಕ ಅನಿಲ ಪತಂಗಿ, ವ್ಹಿ ವೈ ಪತ್ತಾರ, ಎ .ಎಂ ಬೆದ್ರೇಕರ, ಪರಶುರಾಮ ಹೊಸಮನಿ, ಸಂತೋಷ ಕೋಟಗೊಂಡ ಹಾಗೂ ಶಿಕ್ಷಕ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸರ್ವ ಸದಸ್ಯರು, ಸಿಬ್ಬಂದಿ ವರ್ಗ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮಸ್ತರು, ಮಕ್ಕಳು ಪಾಲ್ಗೊಂಡಿದ್ದರು. ಶಿಕ್ಷಕ ಎಸ್ ಆರ್ ಚಾಳೇಕರ ಮತದಾನ ಜಾಗೃತಿಯ ಪ್ರತಿಜ್ಞಾ ವಿಧಿ ಬೋಧಿಸಿದರು.