ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಶ್ರೀ ಶಿವಶರಣ ಮಾದಾರ ಚೆನ್ನಯ್ಯ ಸಭಾ ಭವನದಲ್ಲಿ ಭಾನುವಾರ ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶದ ಆಡಳಿತ ಸುಭದ್ರವಾಗಿರಲು ಮತ್ತು ಉತ್ತಮ ಕಾನೂನುಗಳು ರೂಪಿತವಾಗಲು ಯೋಗ್ಯ ವ್ಯಕ್ತಿಗಳನ್ನು ಆರಿಸುವ ಜವಾಬ್ದಾರಿ ಮತದಾರರ ಮೇಲಿದೆ ಎಂದು ಹೇಳಿದರು.ಸಾಮಾನ್ಯವಾಗಿ ಮತದಾನದ ದಿನದಂದು ರಜೆ ಇರುತ್ತದೆ ಎಂಬ ಕಾರಣಕ್ಕೆ ಜನರು ಪ್ರವಾಸಕ್ಕೆ ಅಥವಾ ವೈಯಕ್ತಿಕ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಇದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಆರೋಗ್ಯಕರವಲ್ಲ. ಇತ್ತೀಚೆಗೆ ಬಿಹಾರದಲ್ಲಿ ನಡೆದ ಚುನಾವಣೆಯಲ್ಲಿ ಶೇ.65 ರಿಂದ ಶೇ.70ರಷ್ಟು ಮತದಾನವಾಗಿರುವುದು ಆಶಾದಾಯಕವಾದರೂ, ಉಳಿದ ಶೇ.30 ರಿಂದ ಶೇ.35 ರಷ್ಟು ಜನರು ಮತದಾನದಿಂದ ದೂರ ಉಳಿದಿರುವುದು ಕಳವಳಕಾರಿ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಸದೃಢ ಭಾರತದ ನಿರ್ಮಾಣಕ್ಕಾಗಿ ಪ್ರತಿಯೊಬ್ಬ ಅರ್ಹ ಮತದಾರರೂ ಜವಾಬ್ದಾರಿಯಿಂದ ಮತ ಚಲಾಯಿಸಬೇಕು. ಯಾವುದೇ ಧರ್ಮ, ಜಾತಿ, ಹಣ ಅಥವಾ ಆಮಿಷಗಳಿಗೆ ಬಲಿಯಾಗದೇ ನೈತಿಕವಾಗಿ ಮತದಾನ ಮಾಡಬೇಕು. ನಿಮ್ಮ ಒಂದು ಮತ ದೇಶದ ಭವಿಷ್ಯವನ್ನು ಬದಲಿಸಬಲ್ಲದು ಎಂದು ಹೇಳಿದರು.
ಜಿಪಂ ಸಿಇಒ ಡಾ.ಎಸ್.ಆಕಾಶ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತಿದೊಡ್ಡ ಶಕ್ತಿಯೇ ಮತದಾನ. ಮತದಾನ ಎನ್ನುವುದು ಕೇವಲ ಹಕ್ಕಲ್ಲ. ಅದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಯುವ ಮತದಾರರು ಯಾವುದೇ ಉದಾಸೀನತೆ ತೋರದೆ ಕಡ್ಡಾಯವಾಗಿ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದರು.
ಉಪ ವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್ ಅವರು, ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಮತದಾರ ದಿನಾಚರಣೆ ನಿಮಿತ್ತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಹೊಸ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿ ವಿತರಿಸಲಾಯಿತು.
ಒನಕೆ ಓಬವ್ವ ವೃತ್ತದಿಂದ ಆರಂಭವಾದ ಜಾಗೃತಿ ಜಾಥಾವು ಅಂಬೇಡ್ಕರ್ ವೃತ್ತದ ಮೂಲಕ ನಗರದ ಶ್ರೀ ಶಿವಶರಣ ಮಾದಾರ ಚೆನ್ನಯ್ಯ ಸಭಾಭವನದವರೆಗೂ ನಡೆಯಿತು.
16ನೇ ರಾಷ್ಟ್ರೀಯ ಮತದಾರರ ದಿನಾಚರಣೆ-2026ರ ಸಂಬಂಧ ಉತ್ತಮವಾಗಿ ಕಾರ್ಯನಿರ್ವಹಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು. ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಯಾದಲಗಟ್ಟ ಗೊಲ್ಲರಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಅಧಿಕಾರಿ ಟಿ.ರಾಜು, ಚಳ್ಳಕೆರೆ ಕ್ಷೇತ್ರದ ತುರುವನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಗಟ್ಟೆ ಅಧಿಕಾರಿ ಸಿ.ಎನ್.ರೂಪ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಸವರಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಅಧಿಕಾರಿ ಹೆಚ್.ಸುರೇಶ್ ರೆಡ್ಡಿ ಹಾಗೂ ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಹಳೇಸಂತೇಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಅಧಿಕಾರಿ ತಬಸ್ಸುಮ್ ಬಾನು, ಹಿರಿಯೂರು ಕ್ಷೇತ್ರದ ಆದಿವಾಲ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಅಧಿಕಾರಿ ಲಲಿತ, ಹೊಸದುರ್ಗ ಕ್ಷೇತ್ರದ ಹೊಸದುರ್ಗ ತಾಲೂಕು ಪಂಚಾಯಿತಿಯ ಮತಗಟ್ಟೆ ಅಧಿಕಾರಿ ಎನ್.ಬಿ.ಗೀತಾ, ಹೊಳಲ್ಕೆರೆ ಕ್ಷೇತ್ರದ ಗುಂಡಸಮುದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಅಧಿಕಾರಿ ಜಿ.ಎಸ್.ಪ್ರಶಾಂತ ಅವರನ್ನು ಸನ್ಮಾನಿಸಲಾಯಿತು.